ಸೋಮವಾರ, ಜನವರಿ 12, 2009

ದುರ್ಗದಲ್ಲಿ 'ಅಮೃತ'..!



ಐತಿಹಾಸಿಕ ಜಿಲ್ಲೆಯ ಪ್ರತಿಯೊಬ್ಬ ಸಾಹಿತ್ಯಪ್ರೇಮಿಯಲ್ಲೂ ಸಂತಸದ ಹೊನಲು ನಕ್ಕು ನಲಿದಾಡುತಿದೆ. ಕಾರಣ ಚಿತ್ರದುರ್ಗದಲ್ಲಿ 75ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು. ಈ ಹಿಂದೆ ರಾಜ್ಯದ ಕೊಪ್ಪಳ, ಮುಧೋಳ, ದಾವಣಗೆರೆ, ಶಿವಮೊಗ್ಗ, ತುಮಕೂರುಗಳಂತಹ ನಗರಗಳಲ್ಲಿ ಸಾಹಿತ್ಯ ಜಾತ್ರೆ ನಡೆದಿತ್ತಾದರೂ, ಐತಿಹಾಸಿಕ ಪ್ರಸಿದ್ಧ ಚಿತ್ರದುರ್ಗದಲ್ಲಿ ಇದೇ ಮೊದಲು. ಅಲ್ಲದೇ 1915 ನೇ ಸಾಲಿನಿಂದ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದ 75ನೇ ಅಮೃತ ಮಹೋತ್ಸವ ನಡೆಯುತ್ತಿರುವುದು ದುರ್ಗದಲ್ಲಿನ ಸಂಭ್ರಮದ ಪ್ರಥಮ ವಿಶೇಷ.


ಇಲ್ಲಿನ ಇತಿಹಾಸ, ಕಲೆ, ಸಾಹಿತ್ಯ, ಶೌರ್ಯ, ಸಾಹಸ, ಧಾರ್ಮಿಕತೆ, ಶಾಂತಿ ಮುಂತಾದ ಎಲ್ಲಾ ಕ್ಷೇತ್ರದಲ್ಲೂ ತನ್ನ ಛಾಪನ್ನು ಹೊತ್ತಿದ್ದ ಚಿತ್ರದುರ್ಗವು ಇಂದು ಅಮೃತ ಸಂಭ್ರಮದ ಸಿರಿಯನ್ನು ಹೊರುವ ಸನ್ನದ್ದದಲ್ಲಿದೆ. ಪಾಳೆಯಗಾರರ ಕಾಲದಲ್ಲಿ ನಿರ್ಮಿತವಾದ ಕೋಟೆ ಇಂದಿಗೂ ಅಮೋಘವಾಗಿದೆ ಅಲ್ಲದೇ, ಆ ಕಾಲದ ದೇಗುಲಗಳು, ಸ್ಮಾರಕಗಳು ಎಲ್ಲರನ್ನೂ ಕೈಬಿಸಿ ಕರೆಯುತ್ತಿದೆ. ಶೌರ್ಯದ ಪ್ರತೀಕವಾದ ದುರ್ಗದ ಬಿಚ್ಚುಗತ್ತಿ ಭರಮಣ್ಣನಾಯಕ, ಮದಕರಿನಾಯಕ, ಹಾಗೂ ಒನಕೆ ಓಬವ್ವರಂತಹ ಜೀವನದ ಸಾಹಸಗಾಥೆ ಮೈರೋಮಾಂಚನ.


ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪರಂತಹ ರಾಷ್ಟ್ರಕವಿಗಳನ್ನೇ ಶಿಷ್ಯನಾಗಿ ಪಡೆದಂತಹ ಟಿ.ಎಸ್.ವೆಂಕಣ್ಣಯ್ಯರವರು ಜನಿಸಿದ ಬೀಡಿದು. ದುರ್ಗಾಸ್ತಮಾನದಂತಹ ಮೇರುಕೃತಿ ರಚಿಸಿದ ತ.ರಾ.ಸು. ರವರಂತಹವರು, ಮುಖ್ಯಮಂತ್ರಿಗಳಾದಂತಹ ಎಸ್.ನಿಜಲಿಂಗಪ್ಪವರು, ಸ್ವತಂತ್ರಪೂರ್ವ ಸಮಯದಲ್ಲಿ ಬರಗಾಲದ ಸಮಯದಲ್ಲಿ ಅಂಬಲಿದಾನ ಮಾಡಿದ ಕಾಶಿ ಅಪ್ಪಣಶೆಟ್ಟರು, ಅಪ್ರತಿಮ ಸಾಹಸಿಗಳ ಸೃಷ್ಟಿಯಲ್ಲಿ ತೊಡಗಿದ್ದ ಪೈಲ್ವಾನ್ ನಂಜಪ್ಪ, ಧಾರ್ಮಿಕತೆ ಸಾರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಶ್ರೀ ಮುರುಘಸ್ವಾಮಿಗಳಂತಹ ಪ್ರಾತಃಸ್ಮರಣೀಯರನ್ನು ಹೊಂದಿದ್ದ ನಮ್ಮ ಜಿಲ್ಲೆ ನಿಜಕ್ಕೂ ಧನ್ಯ.


ಅಖಿಲ ಭಾರತ ಸಮ್ಮೇಳನವಿನ್ನೇನೂ ಬಂದೇ ಬಿಟ್ಟಿತು. ಕೇವಲ 19 ದಿನಗಳು ಮಾತ್ರ ಬಾಕಿ. ಜಿಲ್ಲಾಡಳಿತದ ಚುರುಕು ಪ್ರಕ್ರಿಯೆಯಿಂದ ಚಿತ್ರದುರ್ಗ ನಗರದಲ್ಲಿ ರಸ್ತೆ ದುರಸ್ಥಿ, ವಸತಿ ವ್ಯವಸ್ಥೆ, ಶೌಚಾಲಯ, ಸ್ನಾನಗೃಹಗಳ ನಿರ್ಮಾಣದ ಕಡೆ ಗಮನ ನೀಡುತ್ತಿದೆ. ಅಲ್ಲದೇ ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಸಕ್ತರಿಗೆ ಸಮ್ಮೇಳನದ ಮಹಾವೇದಿಕೆಗೆ ಹೋಗಲು ಸುಮಾರು 50ಕ್ಕೂ ಬಸ್ ಸೌಕರ್ಯ ಕಲ್ಪಿಸಿದೆ. ಜಿಲ್ಲಾಧಿಕಾರಿಗಳಾದ ಅಮ್ಲಾನ್ ಆದಿತ್ಯ ಬಿಸ್ವಾಸ್, ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾದ ಕೆ.ಎಂ.ವೀರೇಶ್ ರವರು ಸೇರಿದಂತೆ ಜಿಲ್ಲೆಯ ಅನೇಕ ಗಣ್ಯರು, ಸಾಹಿತಿಗಳು, ಸಾಹಿತ್ಯಾಸಕ್ತರು ಮುಂತಾದವರು ಹಗಲಿರುಳೆನ್ನದೇ ತುಂಬಾ ಶ್ರಮಿಸುತ್ತಿದ್ದಾರೆ.



ಇಂತಹ ನಾಡಲ್ಲಿ ಇದೀಗ ಅಮೃತ ಸಂಭ್ರಮದ ಕಳೆ ಬಂದಿರುವುದು ಸಂತೋಷ. ಈ ಸಂತೋಷದಲ್ಲಿ ಯಾವುದೇ ಲೋಪವಾಗದೇ; ಎಲ್ಲಿಯೂ, ಯಾರಿಗೂ ನೋವಾಗದೇ ಉತ್ತಮವಾಗಿ ಸಮ್ಮೇಳನವು ನಡೆಯಲಿ ಎಂಬ ಆಶಯದೊಂದಿಗೆ.....


- ಆರ್.ರಾಘವೇಂದ್ರ, ಚಳ್ಳಕೆರೆ
99168 22102

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ