ಬುಧವಾರ, ಮಾರ್ಚ್ 18, 2009

ದುರ್ಗದ ಧೂಳಿನಲ್ಲಿ ಕಂಡ ಪ್ರಶ್ನೆಗಳು, ಚಿತ್ರಗಳು


ಎಸ್. ಸಿರಾಜ್ ಅಹಮದ್
ಬುಧವಾರ, 25 ಫೆಬ್ರವರಿ 2009 (02:55 IST)

ಸಾಹಿತ್ಯ ಜಾತ್ರೆಗೆ ವಡೆ ರೆಡಿ
ದುರ್ಗದ ಸಾಹಿತ್ಯ ಸಮ್ಮೇಳನದಲ್ಲಿ ಎದ್ದ ಧೂಳು ಕರ್ನಾಟಕದ ಹಲವು ಕಡೆ ನಡೆಯುತ್ತಿರುವ ಔಪಚಾರಿಕ ಮತ್ತು ಅನೌಪಚಾರಿಕ ಸಾಹಿತ್ಯ ಚರ್ಚೆಗಳ ಮೇಲೆಲ್ಲ ಅಡರಿಕೊಂಡು ಅದನ್ನು ಸುಮ್ಮನೆ ಕೊಡವಿಕೊಂಡು ಹೋಗುವಂತಿಲ್ಲ ಎನ್ನುವಂತಾಗಿದೆ. ಶಿವಮೊಗ್ಗದಲ್ಲಿ ಫೆಬ್ರವರಿ ೧೪ ಮತ್ತು ೧೫ರಂದು ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಎಲ್. ಬಸವರಾಜು ಅವರ ವಿಚಾರವನ್ನು ಪ್ರಸ್ತಾಪಿಸಿದ ಮಂತ್ರಿಯೊಬ್ಬರು ಏನೋ ಕೆಲವರಿಗೆ ಹಿರಿಯರು ಎಂಬ ಕಾರಣಕ್ಕೆ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಮಾಡಿದರೆ ಅದನ್ನೇ ನೆಪ ಮಾಡಿಕೊಂಡು ಅವರು ಸಮಾಜದಲ್ಲಿ ದ್ವೇಷ ಅಸೂಯೆಗೆ ಕಾರಣರಾಗುವಂತೆ ಮಾತಾಡಿದರೆ, ಅಂಥವರಿಗೆ ಜನ ದಂಗೆಯೆದ್ದು ಬುದ್ಧಿ ಕಲಿಸಬಹುದೆಂಬ ಎಚ್ಚರಿಕೆಯನ್ನು ಸಹ ಮುಂದಿನ ಸಮ್ಮೇಳನಾಧ್ಯಕ್ಷರಿಗೆ ನೀಡಿಬಿಟ್ಟರು. ಬಹಳ ವಿಚಿತ್ರವೆಂದರೆ ಅದನ್ನು ಪತ್ರಿಕೆಯೊಂದು ವರದಿ ಮಾಡಿದ ರೀತಿ: ಶಿವಮೊಗ್ಗ ಸಮ್ಮೇಳನದ ಅಧ್ಯಕ್ಷರು ಕನ್ನಡದ ಬಗ್ಗೆ , ಇಲ್ಲಿನ ಪಶ್ಚಿಮ ಘಟ್ಟದಲ್ಲಿ ಆಗುತ್ತಿರುವ ಪರಿಸರ ನಾಶದ ಬಗ್ಗೆ ಆಡಿದ ಮಾತುಗಳನ್ನು ಜಿಲ್ಲಾ ವರದಿಗೆ ಸೀಮಿತಗೊಳಿಸಿ ಮಂತ್ರಿಗಳು ಎಲ್.ಬಸವರಾಜು ಅವರಿಗೆ ನೀಡಿದ ಎಚ್ಚರಿಕೆಯನ್ನು ರಾಜ್ಯಮಟ್ಟದ ಸುದ್ದಿಯಾಗಿಸಿ ವಿವಾದಕ್ಕೆ ಇನ್ನಷ್ಟು ಪುಳ್ಳೆಗಳನ್ನು ಪೇರಿಸಲು ನೋಡಿತು. ಎಲ್.ಬಸವರಾಜು ಅವರು ಎತ್ತಿದ ಪ್ರಶ್ನೆಗಳಿಗೆ ಶಿವಮೊಗ್ಗದ ಸಮ್ಮೇಳನದಲ್ಲಿ ಮತ್ತಷ್ಟು ಚಾಲನೆ ನೀಡಿದವರು ಕನ್ನಡದ ಇಬ್ಬರು ಬಹು ಮುಖ್ಯ ಬರಹಗಾರರಾದ ರಹಮತ್ ತರೀಕೆರೆ ಮತ್ತು ಕುಂ.ವೀ.ಯವರು. ಬಸವರಾಜು ಅವರು ಮಠ ಮಾನ್ಯಗಳ ಕುರಿತು ಎತ್ತಿರುವ ಪ್ರಶ್ನೆಗಳ ಬಗ್ಗೆ ಎಲ್ಲ ಸಾರ್ವಜನಿಕ ವಿಷಯಗಳು ಚರ್ಚೆಯಾಗುವಂತೆ ಬಹಿರಂಗ ಚರ್ಚೆಯಾಗಬೇಕೇ ವಿನಾ ಭಿನ್ನಮತವೇ ಇಲ್ಲದ ನಿರ್ವಾತವನ್ನು ಸೃಷ್ಟಿಸುವುದು ಅಪಾಯಕಾರಿ ಎಂದರು. ಕುಂ.ವೀ.ಯವರಂತೂ ತಮ್ಮ ರಾಯಲಸೀಮಾ ಸ್ಟೈಲಿನಲ್ಲಿ ಜೀವನದಲ್ಲಿ ಎಂದೂ ಸಹ ಎರಡು ಪುಸ್ತಕ ಖರೀದಿಸದ, ಒಂದು ಸಾಹಿತ್ಯ ಗೋಷ್ಟಿಯಲ್ಲಿ ಕೂತು ಬರಹಗಾರನ ಎರಡು ಮಾತುಗಳನ್ನು ಯಾವತ್ತೂ ಕೇಳಿಸಿಕೊಳ್ಳದ ರಾಜಕಾರಣಿಗಳನ್ನು ಜಾಡಿಸಿಬಿಟ್ಟರು. ವಾಸ್ತವವಾಗಿ ಯಾರು ಯಾರ ಜೊತೆ ನಿಂತು ಎಲ್ಲಿ ಏನು ಮಾತಾಡಬೇಕು, ಯಾರನ್ನು ಪ್ರೇಮಿಸಬೇಕು, ಏನು ತಿನ್ನಬೇಕು ಏನು ಕುಡಿಯಬೇಕು ಎಂಬುದನ್ನೆಲ್ಲ ಬೀದಿರಂಪ ಮಾಡಿ ಜನರ ವೈಯುಕ್ತಿಕ ವಿಷಯಗಳನ್ನೆಲ್ಲ ತಾನೇ ನಿರ್ಧರಿಸಲು ಹೊರಟಿರುವ ತಮ್ಮ ಸರ್ಕಾರದ ವಿರುದ್ಧವೇ ಜನ ತಿರುಗಿಬೀಳುವ ದಿನ ದೂರವಿಲ್ಲ ಎಂದು ಅರಿಯದೆ ಮಂತ್ರಿಗಳು ಆಡಿದ ಮಾತಿಗೆ ಕನ್ನಡದ ಇಬ್ಬರು ಬರಹಗಾರರು ಮಾಡಿದ ಪ್ರತಿಕ್ರಿಯೆಯು ಸಮ್ಮೇಳನದ ಖದರನ್ನು ಹೆಚ್ಚಿಸಿತು.

ಶನಿವಾರ, ಫೆಬ್ರವರಿ 7, 2009

ಕೆಲವು ಛಾಯಾಚಿತ್ರಗಳು

ಸಾಹಿತ್ಯಾಸಕ್ತರು ಪುಸ್ತಕ ಕೊಳ್ಳುವುದರಲ್ಲಿ ತಲ್ಲೀನ...!

"ಕೆಂಪಡರಿದ ಧೂಳಿನ ನಡುವೆಯ ಪುಸ್ತಕದ ಪ್ರೀತಿ ಕಾಡುತ್ತಿದೆ"

ಬೇರೆಲ್ಲಾ ಮಳಿಗೆಗಳು ಸಹಾ.... ವ್ಯಾಪಾರ-ವ್ಯವಹಾರದಲ್ಲಿ ಜೋರು..!

ಆ.. ಲೇಖಕರ ಕೃತಿ ಎಲ್ಲಿದೆ..?

ಬಿಸಿಲಿನ ಧಗೆಗೆ ದಣಿವಾರಿಸಿಕೊಳ್ಳುತ್ತಿರುವ ಅಕ್ಷರಪ್ರಿಯರು

ಅಂಕಲ್... ನಮ್ ಪುಸ್ತಕ ಬಂದಿದೆಯಾ....?

ಸಮ್ಮೇಳನದ ಮುನ್ನಾದಿನ...

ಸಮ್ಮೇಳನಕ್ಕೆ ಸಿದ್ಧವಾಗಿರುವ ವೇದಿಕೆ

ಸಮ್ಮೇಳನದ ಉದ್ಘಾಟನೆ ನಾಡಗೀತೆ ಹಾಡಲು ಪೂರ್ವಭಾವಿ ತಯಾರಿ

ಸಾಹಿತ್ಯಕ ಪ್ರತಿನಿಧಿಗಳಿಗೆ ವಿತರಿಸಲಾಗುತ್ತಿದ್ದ ಕಿಟ್ ಗಳು

ದಿನಾಂಕ: 06-02-2009ರ ಕಾರ್ಯಕ್ರಮಗಳು:

ಗೋಷ್ಠಿ: ಮಾದ್ಯಮಗಳು ಮತ್ತು ಸಾಮಾಜಿಕ ಹೊಣೆಗಾರಿಕೆ.
ಆಶಯ ಭಾಷಣ: ಶ್ರೀ ಜಿ.ಎಸ್.ಉಜ್ಜಿನಪ್ಪ, ಅಧ್ಯಕ್ಷತೆ: ಶ್ರೀ ರವೀಂದ್ರ ರೇಷ್ಮೆ, ಬಹುಸಂಸ್ಕೃತಿಗಳು-ಕನ್ನಡ ಕಿರುತೆರೆಗಳು: ಶ್ರೀ ಗಣೇಶ ಅಮೀನಗಡ, ರಾಜ್ಯಪತ್ರಿಕೆಗಳಲ್ಲಿ ಸ್ಥಳಿಯ ಆವೃತ್ತಿಗಳು ಮತ್ತು ಸಾಂಸ್ಕೃತಿಕ ಕಂದರಗಳು: ಶ್ರೀ ಅಬ್ಬೂರು ರಾಜಶೇಖರ, ಚಲನಚಿತ್ರಗಳಲ್ಲಿ ಕ್ರೌರ್ಯ, ಅಶ್ಲೀಲತೆಗಳ ವೈಭವೀಕರಣ: ಶ್ರೀ ಎನ್.ಆರ್.ನಂಜುಂಡೇಗೌಡ, ಸಣ್ಣಪತ್ರಿಕೆ-ಸಮಸ್ಯೆ-ಪರಿಹಾರ: ಶ್ರೀ ಶ.ಮಂಜುನಾಥ, ಸ್ವಾಗತ: ಶ್ರೀ ಚಂದ್ರಯ್ಯ, ವಂದನಾರ್ಪಣೆ: ಶ್ರೀ ಶಿವು ಯಾದವ್, ನಿರೂಪಣೆ: ಶ್ರೀ ಎಂ.ಜಿ.ರಂಗಸ್ವಾಮಿ
ಗೋಷ್ಠಿ: ಜನಪದ ಜೀವನ
ಆಶಯ ಭಾಷಣ: ಡಾ.ಪಿ.ಕೆ.ಖಂಡೋಬಾ, ಅಧ್ಯಕ್ಷತೆ: ಡಾ. ಹಿ.ಶಿ.ರಾಮಚಂದ್ರೇಗೌಡ, ಕರ್ನಾಟಕದ ಜನಪದ ಮಹಾಕಾವ್ಯಗಳು-ಸಾಮಾಜಿಕ ಸ್ಥಿತ್ಯಂತರದ ಹಿನ್ನೆಲೆಯ್ಲಲಿ: ಡಾ. ವೆಂಕಟೇಶ ಇಂದ್ವಾಡಿ, ಕರ್ನಾಟಕದ ಅಲೆಮಾರಿ ಸಮುದಾಯಗಳು ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ: ಡಾ. ಕೆ.ಎಂ.ಮೇತ್ರಿ, ಕರ್ನಾಟಕದ ದೇಸಿ ವಾದ್ಯಗಳು ಹಾಗೂ ಆಧುನಿಕ ಸವಾಲು: ಶ್ರೀ ಹಂಸಲೇಖ, ಸ್ವಾಗತ: ಶ್ರೀ ಸುಭಾಷಚಂದ್ರ ದೇವರಗುಡ್ಡ, ವಂದನಾರ್ಪಣೆ: ಶ್ರೀ ಎಚ್.ಶ್ರೀನಿವಾಸ್, ನಿರೂಪಣೆ: ಶ್ರೀ ನಿರಂಜನ ದೇವರಮನೆ.
ಗೋಷ್ಠಿ: ಮಹಿಳಾ ಚಿಂತನೆ
ಆಶಯ ಭಾಷಣ: ಡಾ. ಕೆ.ಆರ್.ಸಂಧ್ಯಾರೆಡ್ಡಿ, ಅಧ್ಯಕ್ಷತೆ: ಡಾ. ಎಸ್.ಮಾಲತಿ, ಮಹಿಳೆ ಮತ್ತು ಮೀಸಲಾತಿ: ಡಾ.ಶುಭಾದಾಸ್, ಮರವಂತೆ, ಮಹಿಳೆ ಮತ್ತು ಉದ್ಯೋಗ: ಶ್ರೀಮತಿ ಬಿ.ಟಿ.ಕುಮುದಾನಾಯಕ್, ಮಹಿಳೆ ಮತ್ತು ರಂಗಭೂಮಿ: ಡಾ. ಗುಡಿಹಳ್ಳಿ ನಾಗರಾಜ. ಸ್ವಾಗತ: ಶ್ರೀಮತಿ ರೋಹಿಣಿ ಬಸವರಾಜ್, ವಂದನಾರ್ಪಣೆ: ಶ್ರೀಮತಿ ಗೀತಾ ಪ್ರಸಾದ್, ನಿರೂಪಣೆ: ಪ್ರೋ. ಎಸ್.ವಿ.ಗಾಯಿತ್ರಿದೇವಿ
ಗೋಷ್ಠಿ: ಕವಿಗೋಷ್ಠಿ-1
ಆಶಯ ಭಾಷಣ: ಡಾ. ಎಲ್.ಹನುಮಂತಯ್ಯ, ಅಧ್ಯಕ್ಷತೆ: ಡಾ. ಸುಮತೀಂದ್ರನಾಡಿಗ, ಕಾವ್ಯವಾಚನ: ಶ್ರೀ ಸತ್ಯಾನಂದ ಪಾತ್ರೋಟ, ಡಾ.ಕರುಣಾಕರಶೆಟ್ಟಿ, ಶ್ರೀ ಸರಜೂ ಕಾಟ್ಕರ್, ಶ್ರೀಮತಿ ಕವಿತಾ ರೈ, ಶ್ರೀಮತಿ ಜಂಬಣ್ಣ ಅಮರಚಿಂತ, ಶ್ರೀಮತಿ ಲತಾ ರಾಜಶೇಖರ್, ಡಾ. ಬಾಲಸುಬ್ರಹ್ಮಣ್ಯ ಕಂಜರ್ಪಣೆ, ಶ್ರೀಮತಿ ಬಾ.ಹ.ರಮಾಕುಮಾರಿ, ಶ್ರೀ ಜಯಪ್ಪಹೊನ್ನಾಳಿ, ಶ್ರೀ ಕೃಷ್ಣಮೂರ್ತಿ ಬಿಳಿಗೆರೆ, ಶ್ರೀ ಇಟಗಿ ಈರಣ್ಣ, ಶ್ರೀ ಲಕ್ಷ್ಮಿಪತಿ ಕೋಲಾರ, ಶ್ರೀಮತಿ ಇಂದಿರಾ ಶಿವಣ್ಣ, ಶ್ರೀ ಅರವಿಂದ ಕರ್ಕಿಕೊಡಿ, ಡಾ. ನಟರಾಜ ಬೂದಾಳು, ಶ್ರೀ ಮನೋಹರ ಜನ್ನು, ಶ್ರೀಮತಿ ದು.ಸರಸ್ವತಿ, ಡಾ. ವಸಂತಕುಮಾರ ಪೆರ್ಲ, ಶ್ರೀ ಎ.ಕೆ.ಹಂಪಣ್ಣ, ಡಾ. ಕೆ.ವಿ.ಚಂದ್ರಣ್ಣಗೌಡ, ಶ್ರೀ ಪ್ರಹ್ಲಾದ ಅಗಸನಕಟ್ಟೆ, ಶ್ರೀ ನಿಸಾರ್ ಅಹಮದ್, ಶ್ರೀ ಬಾಗೂರು ಮಾರ್ಕಾಂಡೇಯ, ಶ್ರೀ ಜಯರಾಮ ಕಾರಂತ, ಶ್ರೀ ಅಶೋಕ್ ಮೂಡಿಗೆರೆ, ಶ್ರೀ ನೀಲಾವರ ಸುರೇಂದ್ರ ಅಡಿಗ, ಡಾ. ಕೆ.ರಾಜೇಶ್ವರಿ ಗೌಡ, ಶ್ರೀ ಜಂಬುನಾಥ ಕಂಚ್ಯಾಣಿ, ಶ್ರೀ ವೈ.ಬಿ.ಎಚ್.ಶಿವಯೋಗಿ, ಪ್ರೋ. ಸಕಲವಾರ ಕಾವೇರಪ್ಪ, ಶ್ರೀ ಓಬಳೇಶ ಫಟ್ಟಿ, ಸ್ವಾಗತ: ಶ್ರೀ ನೆಲ್ಲಿಕಟ್ಟೆ ಸಿದ್ದೇಶ್, ವಂದನಾರ್ಪಣೆ: ಶ್ರೀಮತಿ ಉಷಾ ತವನಿಧಿ, ನಿರೂಪಣೆ: ಶ್ರೀಮತಿ ಸಿ.ಬಿ.ಶೈಲಜಾ, ಶ್ರೀ ಬಸವರಾಜ ಮಹಾದೇವಪುರ್

ದಿನಾಂಕ: 05-02-2009ರ ಕಾರ್ಯಕ್ರಮಗಳು

ಬೆಳಿಗ್ಗೆ 9-00 ಗಂಟೆಗೆ "ಜಾಗತಿಕ ಸಮಸ್ಯೆಗಳು" ಎಂಬ ವಿಷಯಾಧಾರಿತ ಗೋಷ್ಠಿ.
ಆಶಯ ಭಾಷಣ: ಶ್ರೀ ವಿಶ್ವೇಶ್ವರ ಭಟ್ಟ, ಅಧ್ಯಕ್ಷತೆ: ಶ್ರೀ ಡಿ.ವಿ. ರಾಜಶೇಖರ, ಭಯೋತ್ಪಾದನೆ, ಕೋಮುವಾದ ಮತ್ತು ಆಧುನಿಕ ಆತಂಕಗಳು: ಶ್ರೀ ಡಿ.ಎಸ್.ಚೌಗಲೆ, ಆರ್ಥಿಕ ಬಿಕ್ಕಟ್ಟುಗಳು ಮತ್ತು ತೃತಿಯ ಜಗತ್ತು: ಶ್ರೀ ಟಿ.ಆರ್.ಚಂದ್ರಶೇಖರ, ಸಾಮ್ರಾಜ್ಯ ಶಾಹಿ ವಿದ್ಯಮಾನಗಳು ಮತ್ತು ವಿದೇಶಾಂಗ ನೀತಿ: ಶ್ರೀ ದಿನೇಶ ಅಮೀನ್ ಮಟ್ಟು, ಸ್ವಾಗತ: ಶ್ರೀ ಎಂ.ಕೆ.ತಾಜ್ ಪೀರ್, ನಿರೂಪಣೆ: ಶ್ರೀ ಹುರುಳಿ ಬಸವರಾಜ್ ಮತ್ತು ವಂದನಾರ್ಪಣೆ: ಶ್ರೀ ಮಹಡಿ ಶಿವಮೂರ್ತಿ.
ಬೆಳಿಗ್ಗೆ 11-00 ಗಂಟೆಗೆ "ನಾಡು-ನುಡಿ" ಎಂಬ ವಿಷಯಾಧಾರಿತ ಗೋಷ್ಠಿ
ಆಶಯ ಭಾಷಣ; ಡಾ. ಮಳಲಿ ವಸಂತಕುಮಾರ್, ಅಧ್ಯಕ್ಷತೆ: ಶ್ರೀ ಕೋ.ಚೆನ್ನಬಸಪ್ಪ, ಶಾಸ್ತ್ರೀಯ ಭಾಷೆ-ಮುಂದಿನ ಹೆಜ್ಜೆಗಳು: ಪ್ರೋ.ಲಿಂಗದೇವರು ಹಳೇಮನೆ, ಗಡಿ-ಸಮಸ್ಯೆಗಳು-ಪರಿಹಾರದ ಮಾರ್ಗೋಪಾಯಗಳು: ಶ್ರೀ ಬಿ.ವಿ.ಕಕ್ಕಿಲ್ಲಾಯ, ನೆಲ,ಜಲ ಸಮಸ್ಯೆ-ಪ್ರಾಂತೀಯ ಬಿಕ್ಕಟ್ಟುಗಳು: ಶ್ರೀ ಪಿ.ಜಿ.ಆರ್.ಸಿಂಧ್ಯಾ, ಸ್ವಾಗತ: ಶ್ರೀ ಪಿ.ಎಲ್.ಲೋಕೇಶ್ವರ್, ವಂದನಾರ್ಪಣೆ: ಶ್ರೀ ರೇವಣ್ಣ, ನಿರೂಪಣೆ: ಶ್ರೀ ಪ್ರೋ. ಸಿ.ವಿ.ಸಾಲಿಮಠ.
ಮಧ್ಯಾಹ್ನ 2-30ಕ್ಕೆ "ಕೃಷಿ-ಬದುಕು" ಎಂಬ ವಿಷಯಾಧಾರಿತ ಗೋಷ್ಠಿ
ಅಧ್ಯಕ್ಷತೆ: ನಾಡೋಜ ಎಲ್. ನಾರಾಯಣರೆಡ್ಡಿ, ಜಾಗತೀಕರಣ ಮತ್ತು ರೈತರ ಆತ್ಮಹತ್ಯೆ: ಶ್ರೀ ಕೆ.ಎಸ್.ಪುಟ್ಟಣ್ಣಯ್ಯ, ಜೈವಿಕ ಕೃಷಿ ಪದ್ಧತಿಯ ಅನಿವಾರ್ಯತೆ: ಶ್ರೀ ಬಾಳೇಕಾಯಿ ಶಿವನಂಜಯ್ಯ, ಕರ್ನಾಟಕದ ಸಾಂಪ್ರದಾಯಿಕ ಜಲಸಂರಕ್ಷಣಾ ಪದ್ಧತಿಗಳು: ಶ್ರೀ ಶ್ರೀಪಡ್ರೆ, ದೇಸೀಯ ಮೂಲತಳಿಗಳ ಸಂರಕ್ಷಣೆ: ಶ್ರೀ ಕೆ.ಕೃಷ್ಣಪ್ರಸಾದ್, ಸ್ವಾಗತ: ಶ್ರೀಯಾದವರೆಡ್ಡಿ, ವಂದನಾರ್ಪಣೆ: ಶ್ರೀ ಮಮತಾ ತಿಪ್ಪಣ್ಣ, ನಿರೂಪಣೆ: ಶ್ರೀಮತಿ ವೀರಮ್ಮ
ಮಧ್ಯಾಹ್ನ 4-30ಕ್ಕೆ "ಚಿತ್ರದುರ್ಗ ಜಿಲ್ಲೆಯ ಸಮಸ್ಯೆ-ಪರಿಹಾರ" ಎಂಬ ವಿಷಯಾಧಾರಿತ ಗೋಷ್ಠಿ
ಆಶಯ ಭಾಷಣ: ಶ್ರೀ ಏಕಾಂತಯ್ಯ, ಅಧ್ಯಕ್ಷತೆ: ಶ್ರೀ ಶ್ರೀ ಪಂಡಿತಾರಾಧ್ಯ ಮಹಾಸ್ವಾಮಿಗಳು, ಸಾಣೆಹಳ್ಳಿ, ಭದ್ರಾಮೇಲ್ದಂಡೆ ಯೋಜನೆ ಭೂಹೀನ ಸಮುದಾಯಗಳು ಮತ್ತು ಅಭಿವೃದ್ಧಿ ಯೋಜನೆಗಳು: ಡಾ. ಬಂಜಗೆರೆ ಜಯಪ್ರಕಾಶ, ಚಿತ್ರದುರ್ಗ ಜಿಲ್ಲೆಯ ಗುಡಿ ಕೈಗಾರಿಕೆಗಳು: ಡಾ. ಜಿ.ಎನ್.ಮಲ್ಲಿಕಾರ್ಜುನಪ್ಪ, ಪ್ರವಾಸೋದ್ಯಮ ಪ್ರಗತಿ-ಸಮಸ್ಯೆ-ಪರಿಹಾರ: ಶ್ರೀ ವಿಲಾಸ್ ಮೇಲಗಿರಿ. ಸ್ವಾಗತ: ಶ್ರೀ ಮುರುಘ ರಾಜೇಂದ್ರ ಒಡೆಯರ್, ವಂದನಾರ್ಪಣೆ: ಶ್ರೀ ಪಾಂಡುರಂಗ ಹುಯಿಲಗೋಳ, ನಿರೂಪಣೆ: ಶ್ರೀ ಶೇಷಣ್ಣಕುಮಾರ್.

ಸಮ್ಮೇಳನದ ಉದ್ಘಾಟನೆ

ಶುಕ್ರವಾರ, ಫೆಬ್ರವರಿ 6, 2009

ಗುರುವಾರ, ಫೆಬ್ರವರಿ 5, 2009

ಯಡಿಯೂರಪ್ಪರವರ 'ಕೋಟಿ' ಪುರಾಣ


ಚಿತ್ರದುರ್ಗದಲ್ಲಿ ನಿನ್ನೆ ನಡೆದ ಅಮೃತ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾತನಾಡಿದ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಜಿಲ್ಲೆಗಾಗಿ ಹಾಗೂ ಕನ್ನಡದ ಅಭಿವೃದ್ಧಿಗಾಗಿ ಈ ಕೆಳಕಂಡಂತೆ ಕೈಗೆತ್ತಿಕೊಳ್ಳಲಾಗುವ ಯೋಜನೆಗಳ ಕುರಿತು ವಿವರಣೆಯನ್ನು ನೀಡಿದರು

  • ರಾಜ್ಯದ ಎಲ್ಲಾ ವಿಶ್ವವಿದ್ಯಾಲಯದಲ್ಲಿ ಕನ್ನಡ ಸಂಶೋಧನೆ ಮತ್ತು ಅಭಿವೃದ್ದಿ - 2.00 ಕೋಟಿ.
  • ರಾಜ್ಯದ ಮತ್ತು ಹೊರದೇಶದ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಅಧ್ಯಯನ ಕೇಂದ್ರ ಸ್ಥಾಪನೆಗಾಗಿ - ತಲಾ 1.00 ಕೋಟಿಯಂತೆ ಒಟ್ಟು 5.00 ಕೋಟಿಗಳ ಅನುದಾನ
  • ದುರ್ಗದಲ್ಲಿ ಒನಕೆ ಓಬವ್ವ ಪ್ರಥಮ ದರ್ಜೆ ಕಾಲೇಜು ಸ್ಥಾಪನೆ
  • ಕುವೆಂಪು ವಿಶ್ವವಿದ್ಯಾಲಯಕ್ಕೆ 100 ಎಕರೆ ಜಮೀನು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ 5.00 ಕೋಟಿಗಳ ಧನಸಹಾಯ.
  • ವಾಲ್ಮೀಕಿ ಭವನ ನಿರ್ಮಾಣಕ್ಕೆ - 1.00 ಕೋಟಿ
  • ಕನ್ನಡ ತಂತ್ರಾಂಶದ ಅಭಿವೃದ್ಧಿಗಾಗಿ - 2.00 ಕೋಟಿ
  • ಕನ್ನಡದಲ್ಲಿ ವಿಕಿಪೀಡಿಯ ಮಾಹಿತಿಯ ವೆಬ್ ಸೈಟ್ ಗಾಗಿ - 1.00 ಕೋಟಿ

ಹೀಗೆ ಹತ್ತುಹಲವು ಕೋಟಿ ರೂಪಾಯಿಗಳ ಮಹತ್ತರ ಭರವಸೆಯನ್ನು ನಿನ್ನೆ ನಡೆದ ಅಮೃತ ಸಮ್ಮೇಳನದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಘಂಟಾಘೋಷವಾಗಿ ನೀಡಿದರು.

ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಕರ್ನಾಟಕ ರಾಜ್ಯದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ನಲ್ಲೂರು ಪ್ರಸಾದ್ ರವರು ಮಾತನಾಡುತ್ತಾ, ಯಡಿಯೂರಪ್ಪನವರನ್ನು "ಕನ್ನಡದ ಮುಖ್ಯಮಂತ್ರಿ" ಎಂದೂ, ಚಿತ್ರದುರ್ಗ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಪಶ್ಚಿಮಬಂಗಾಲ ಮೂಲದ ಶ್ರೀ ಅಮ್ಲಾನ್ ಆದಿತ್ಯ ಬಿಸ್ವಾಸ್, ರವರ ಕರ್ತವ್ಯ ನಿಷ್ಟೆ, ಕನ್ನಡದ ಪ್ರೀತಿಯನ್ನು ಮೆಚ್ಚಿ, "ಕನ್ನಡದ ಕಟ್ಟಾಳು" ಬಿರುದು ನೀಡಿದರು.

ಮೊದಲೇ ನಿರೀಕ್ಷಿಸಿದಂತೆ ಕಡಿಮೆ ಜನ ಬರುವ ನಿಟ್ಟಿನಲ್ಲಿ ಸಮ್ಮೇಳನದ ಊಟದ ವ್ಯವಸ್ಥೆಯಲ್ಲಿ ಸ್ವಲ್ಪ ಏರುಪೇರು ಕಂಡಿತು. 90 ಊಟದ ಕೌಂಟರ್ ಗಳನ್ನು ತೆರೆದಿದ್ದರೂ, ಬಫೆ ಸಿಸ್ಟಂ ಮಾಡಿದ್ದರೂ, ಕೂಪನ್ ಇರುವವರಿಗೆ ಮಾತ್ರ ಊಟದ ವ್ಯವಸ್ಥೆ ಮಾಡದೇ, ಎಲ್ಲರಿಗೂ ನೀಡುವಲ್ಲಿ ಹೋಗಿ, ಊಟದ ವ್ಯವಸ್ಥೆಯಲ್ಲಿ ಸಾಹಿತ್ಯಾಸಕ್ತರಿಗೆ ಸ್ವಲ್ಪ ಅಸಮಾಧಾನವಾಯಿತು. ಜಿಲ್ಲೆಯಲ್ಲಿ ಈಗಾಗಲೇ ಶಾಲಾ ಕಾಲೇಜುಗಳಿಗೆ ರಜಾ ಘೋಷಣೆಯಾಗಿದ್ದರಿಂದ ಶಾಲಾ ಮಕ್ಕಳು, ಶಿಕ್ಷಕರು ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಭಾಗವಹಿಸಿದ್ದರಿಂದ ಸುಮಾರು 60000ಕ್ಕೂ ಹೆಚ್ಚು ಮಂದಿ ಊಟಕ್ಕೆ ಪರದಾಡುವಂತಾಯಿತು.


ಭವ್ಯ ಮೆರವಣಿಗೆ:

ಮದಕರಿನಾಯಕ ಮತ್ತು ಮುರುಘಶ್ರೀಗಳ ಪ್ರತಿಕೃತಿ, ಭೂಗೋಲದ ಸ್ಥಬ್ದ ಚಿತ್ರ, ಬೆಂಗಳೂರು ಹಾಗೂ ವಿವಿಧ ಜಿಲ್ಲೆಗಳ ಕನ್ನಡ ಸಂಘಗಳು, ಹಲಗೆ ಕುಣಿತ, ಜಿಲ್ಲೆಯ ತಾಲ್ಲೂಕುಗಳ ಕಲಾತಂಡಗಳು, ಬೇಡರ ಪಡೆ, ನಂದಿಧ್ವಜ ಕುಣಿತ, ಕೋಲಾಟ, ವೀರಗಾಸೆ, ಸೋಮನ ಕುಣಿತ, ಮಹಿಳೆಯರ ಡೊಳ್ಳುಕುಣಿತ, ಹೀಗೆ ಹತ್ತು ಹಲವು ವಿಶಿಷ್ಟತೆಯಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಕಂಡುಬಂದಿತು. ಹೊಳಲ್ಕೆರೆ ರಸ್ತೆಯ ಕನಕ ವೃತ್ತದಿಂದ ಬಿ.ಡಿ. ರಸ್ತೆ ಮಾರ್ಗವಾಗಿ ಮಧ್ಯಾಹ್ನ 2-20ರ ವೇಳೆಗೆ ಒನಕೆ ಓಬವ್ವ ಕ್ರೀಡಾಂಗಣಕ್ಕೆ ಮೆರವಣಿಗೆ ಸೇರಿತು.

ಸಮ್ಮೇಳನದ ಮೊದಲ ದಿನ: ದೃಶ್ಯಾವಳಿ










ಬುಧವಾರ, ಫೆಬ್ರವರಿ 4, 2009

ಸಮ್ಮೇಳನದ ಮೊದಲನೇ ದಿನ: ಭವ್ಯ ಮೆರವಣಿಗೆ


ಚಿತ್ರದುರ್ಗದಲ್ಲಿ ಇಂದು ಬೆಳಿಗ್ಗೆ ಉಷೆ ಮೂಡಿದಾಗಿನಿಂದಲೂ ಹೊಸಕಳೆ, ಮೆರುಗು ಚಿತ್ರದುರ್ಗದ ಅಮೃತ ಸಮ್ಮೇಳನಕ್ಕೆ ಬಂದಿದೆ. ಇಂದು ಸಮ್ಮೇಳನಾಧ್ಯಕ್ಷರನ್ನು ನಗರದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದಿಂದ ಒನಕೆ ಓಬವ್ವ ಕ್ರೀಡಾಂಗಣದವರೆಗೆ ಭವ್ಯ ಮೆರವಣಿಗೆಯೊಂದಿಗೆ ಸಮ್ಮೇಳನಾಧ್ಯಕ್ಷರಾದ ಶ್ರೀ ಡಾ. ಎಲ್.ಬಸವರಾಜು ರವರನ್ನು ಕರೆದೊಯ್ಯಲಾಯಿತು. ಸುಮಾರು 75 ಸಾಂಸ್ಕೃತಿಕ ಸಂಘಗಳಿಂದ ದಾರಿಯುದ್ದಕ್ಕೂ ನಾಡಿನ ಹಿರಿಮೆಯನ್ನು ಗರಿಗೆದರುತ್ತಾ ಸಮ್ಮೇಳನಾಧ್ಯಕ್ಷರನ್ನು ತ.ರಾ.ಸು. ವೇದಿಕೆಗೆ ಗೌರವಪೂರ್ವಕವಾಗಿ ಕರೆದೊಯ್ಯಲಾಯಿತು.

ಸಮ್ಮೇಳನದಲ್ಲಿ ಭಾಗವಹಿಸಿದ ಕಲಾವಿದರು
ಸಮ್ಮೇಳನಧ್ಯಾಕ್ಷರ ಕರೆದೊಯ್ಯುತ್ತಿರುವ ಭವ್ಯ ಮರೆವಣಿಗೆಯಲ್ಲಿ ಭಾಗವಹಿಸಿದ ಕಲಾತಂಡ

ಬಿಸಿಲಿನ ಜಳವಿದ್ದರೂ, ದುರ್ಗದಲ್ಲಿ ಉತ್ಸಾಹ ಕುಂದಲಿಲ್ಲ, ಯಾವುದೇ ಲೋಪದೋಷಗಳಿಗೆ ಜಗ್ಗಲಿಲ್ಲ. ಅಮೃತ ಸಮ್ಮೇಳನಕ್ಕೆ ಯಶಸ್ಸು ಈಗಾಗಲೇ ಕಂಡಿದೆ. ನಿರೀಕ್ಷೆಗಿಂತ ಹೆಚ್ಚು ಜನರು ಚಿತ್ರದುರ್ಗದಲ್ಲಿ ಸೇರಿದ್ದು, ಹಿಂದೆದಿಗಿಂತಲೂ ಉತ್ಕೃಷ್ಟ ಸಮ್ಮೇಳನವಾಗಲಿದೆ.

ಭವ್ಯ ಸಾಹಿತ್ಯ ಸಮ್ಮೇಳನಕ್ಕೆ ದಾಖಲೆ ದೇಣಿಗೆ ಸಂಗ್ರಹ

ಚಿತ್ರದುರ್ಗದಲ್ಲಿ ನಡೆಯುತ್ತಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲೆಯ ಜನತೆ ಅತಿ ಉತ್ಸಾಹದಿಂದ ಮುಂದಾಗಿದ್ದು, ಈವರೆಗೂ ದಾಖಲಾಗದ ದಾಖಲೆಯ ದೇಣಿಗೆಯನ್ನು ನೀಡುವುದರ ಮೂಲಕ ಅಕ್ಷರ ಜಾತ್ರೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಅಲ್ಲದೇ ಅಮೃತ ಸಾಹಿತ್ಯ ಸಮ್ಮೇಳನಕ್ಕೆ ನಾವೆಲ್ಲಾ ಕಂಕಣಬದ್ಧರಾಗಿ ಕಾರ್ಯೋನ್ಮುಖರಾಗುತ್ತೇವೆ ಎಂಬಂತೆ ದುರ್ಗದ ಜನತೆ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.


ನಿಜಕ್ಕೂ ದುರ್ಗದಲ್ಲಿ ಕಲ್ಲುಗಳಲ್ಲರಳಿದ ಸಾಹಿತ್ಯ ರಾಜ್ಯದ, ದೇಶದ, ಪ್ರಪಂಚದ ಮೂಲೆ ಮೂಲೆಗಳಲ್ಲಿರುವ ಸಾಹಿತ್ಯಾಸಕ್ತರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆದಿದೆ. ದುರ್ಗದಲ್ಲಿ ಎಲ್ಲಿ ನೋಡಿದರೂ ಜನರಲ್ಲಿ ದಣಿಯದ ಉತ್ಸಾಹ, ಸಂಭ್ರಮ ಅಕ್ಷರಪ್ರಿಯರನ್ನು ಮೂಕವಿಸ್ಮಿತರನ್ನಾಗಿಸಿದೆ. ಇದು ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ದುರ್ಗದ ಜನರ ಒಲುಮೆಯನ್ನು ತೋರಿಸುತ್ತದೆ.

ಎಸ್. ನಿಜಲಿಂಗಪ್ಪ ಮ್ಯೂಸಿಯಂ

ಐತಿಹಾಸಿಕ ನಗರಿ ಚಿತ್ರದುರ್ಗದಲ್ಲಿ ನಡೆಯುತ್ತಿರುವ 75ನೇ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ನಗರದಲ್ಲಿರುವ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ನಿಜಲಿಂಗಪ್ಪ ರವರ ನಿವಾಸ "ಶ್ವೇತಭವನ" ತಾತ್ಕಾಲಿಕವಾಗಿ ವಸ್ತುಸಂಗ್ರಹಾಲಯವಾಗಿ ರೂಪಾಂತರಗೊಳ್ಳಲಿದೆ.
ಸಮ್ಮೇಳನ ನಡೆಯುವ ನಾಲ್ಕು ದಿನ ಶ್ವೇತಭವನದಲ್ಲಿ ನಿಜಲಿಂಗಪ್ಪರವರ ಜೀವನ ಚರಿತ್ರೆ, ಪ್ರಮುಖ ಘಟನಾವಳಿಗಳ ಕುರಿತು ಸಚಿತ್ರ ವಸ್ತು ಪ್ರದರ್ಶನ ನಡೆಯಲಿದೆ. ಇದಕ್ಕೆ ಅವರ ಪುತ್ರ ಸಮ್ಮತಿ ಸೂಚಿಸಿದ್ದು, ಜಿಲ್ಲಾಧಿಕಾರಿಗಳಾದ ಶ್ರೀ ಅಮ್ಲಾನ್ ಆದಿತ್ಯ ಬಿಸ್ವಾಸ್, ರವರು ಶ್ವೇತಭವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶ್ವೇತಭವನವನ್ನು ನಿಜಲಿಂಗಪ್ಪ ರವರ ಜೀವನ ಚರಿತ್ರೆ ಸಾರುವ ಮ್ಯೂಸಿಯಂ ಆಗಿ ಬಳಸಿಕೊಳ್ಳುವುದಾಗಿ ಜಿಲ್ಲಾಡಳಿತ ಮನವಿ ಮಾಡಿತು. ಹಾಗಾಗಿ ದುರ್ಗದಲ್ಲಿ ನಡೆಯುವ ಸಮ್ಮೇಳನದ ನಾಲ್ಕು ದಿನದ ಮಟ್ಟಿಗೆ ಅವಕಾಶ ನೀಡಲಾಗಿದೆ ಎಂದು ನಿಜಲಿಂಗಪ್ಪರವರ ಪುತ್ರ ಎಸ್.ಎನ್.ಕಿರಣ್ ಶಂಕರ್ ರವರು ಪತ್ರಿಕೆಗೆ ತಿಳಿಸಿದ್ದಾರೆ. ತಂದೆಯವರಿಗೆ ಸಂಬಂಧಿಸಿದಂತೆ ತಾಲ್ಲೂಕಿನ ಸೀಬಾರದ ಸಮೀಪವಿರುವ ಸ್ಮಾರಕ ಸ್ಥಳದಲ್ಲಿ ಶಾಶ್ವತ ವಸ್ತುಸಂಗ್ರಹಾಲಯ ಸ್ಥಾಪಿಸಲಾಗುವುದು. ಶ್ವೇತಭವನವನ್ನು ಇದೇ ನಿಟ್ಟಿನಲ್ಲಿ ಬಳಸಿಕೊಳ್ಳಲು ಸರಕಾರ ಮನವಿ ಮಾಡಿದರೆ ಷರತ್ತುಬದ್ಧರಾಗಿ ಒಪ್ಪಿಗೆ ನೀಡಲಾಗುವುದು ಎಂದು ಕಿರಣ್ ಶಂಕರ್ ಹೇಳುತ್ತಾರೆ.

ನಿಜಲಿಂಗಪ್ಪನವರ ಜೀವನವನ್ನು ನಮ್ಮ ಬಿಚ್ಚಿಡುವ ವಸ್ತು ಸಂಗ್ರಹಾಲಯವಾಗಿ ತೆರೆದುಕೊಳ್ಳಲಿದೆ.ಸುಮಾರು 2 ಲಕ್ಷ ವೆಚ್ಚದಲ್ಲಿ ಮನೆಯನ್ನು ಎಸ್ಸೆನ್ ಸ್ಮಾರಕ ವಸ್ತು ಸಂಗ್ರಾಹಲಯವನ್ನಾಗಿ ಮಾಡಲಾಗಿದ. ಎಸ್ಸೆನ್ ಸದಾ ಕೂರುತ್ತಿದ್ದ ಕುರ್ಚಿ, ವಾಕಿಂಗ್ ಸ್ಟಿಕ್, ಹಿರಿಯರೊಂದಿಗೆ ಬೆರೆತ ಕ್ಷಣಗಳನ್ನು ನಮ್ಮ ಮುಂದಿಡುವ ಭಾವಚಿತ್ರಗಳು. ನಿಜಲಿಂಗಪ್ಪ ಅವರಿಗೆ ಸಂದ ಪ್ರಶಸ್ತಿ, ಫಲಕಗಳು ಸೇರಿದಂತೆ ಇನ್ನೂ ಅನೇಕ ವಸ್ತುಗಳು ಇಲ್ಲಿ ನೋಡಲು ಸಿಗುತ್ತವೆ.ಸಮ್ಮೇಳನದ ಮೊದಲ ದಿನ ಈ ವಸ್ತು ಸಂಗ್ರಹಾಲಯ ಉದ್ಘಾಟನೆಯಾಗಲಿದೆ. ಜಿಲ್ಲೆಯ ಹಿರಿಯ ನಾಯಕರೊಬ್ಬರ ಬದುಕನ್ನು ಪರಿಚಯಿಸುವ ಈ ಸಂಗ್ರಹಾಲಯಕ್ಕೆ ತಪ್ಪದೇ ಭೇಟಿ ಕೊಡಿ.

ಮಂಗಳವಾರ, ಫೆಬ್ರವರಿ 3, 2009

"ಎಲ್ಲಾದರೂ ಇರು, ಎಂತಾದರು ಇರು
ಎಂದೆಂದಿಗೂ ನೀ ಕನ್ನಡಿಗನಾಗಿರು"
ನೀ ಮೆಟ್ಟುವ ನೆಲ ಅದೇ ಕರ್ನಾಟಕ
ನೀ ಕುಡಿಯುವ ನೀರ್ ಕಾವೇರಿ"
ಜೈ ಕರ್ನಾಟಕ.... ಜೈ ಕನ್ನಡಾಂಬೆ.
ದಿನಾಂಕ: 04-02-2009 ರಿಂದ 07-02-2009ರವರೆಗೆ ನಡೆಯುವ
ಅಮೃತ ಸಮ್ಮೇಳನಕ್ಕೆ ಶುಭಾಷಯ ಹಾಗೂ ಸ್ವಾಗತ ಕೋರುವವರು
ಆರ್.ರಾಘವೇಂದ್ರ
ಚಳ್ಳಕೆರೆ, ಚಿತ್ರದುರ್ಗ ಜಿಲ್ಲೆ.
Phone: 08195 - 250093, Mobile: +91 99168 22102
(A first Kannada website of Chitradurga Dist)

ಮಾಧ್ಯಮ ಪ್ರತಿನಿಧಿಗಳ ಮಾಹಿತಿ ಕೈಪಿಡಿ




ಚಿತ್ರದುರ್ಗ ಜಿಲ್ಲೆಯ ಒಂದು ಪಕ್ಷಿನೋಟ


ಸರ್ಕಾರಿ ನೌಕರರಿಗೆ ಓ.ಓ.ಡಿ. ಸೌಲಭ್ಯದ ಆದೇಶ ಪ್ರತಿ.


ಸೋಮವಾರ, ಫೆಬ್ರವರಿ 2, 2009

ಪೈಲ್ವಾನ್ ನಂಜಪ್ಪ


“ಗಂಡು ಮೆಟ್ಟಿನ ನಾಡು” ಎಂದೇ ಹೆಸರಾದ ಚಿತ್ರದುರ್ಗದ ಕುಸ್ತಿಕಲೆಯೂ ಸಾಹಸಮಯ ಕ್ರೀಡೆಯಾಗಿ ಇತಿಹಾಸ ಪುಟಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಹಿಂದೆ ವಿಜಯನಗರದ ಅರಸರು ಈ ಪ್ರಾಂತ್ಯವನ್ನು ಆಳುತ್ತಿದ್ದಾಗ ಹೆಬ್ಬಂಡೆಗಳ ನಡುವಿನ ಗುಹೆಯೊಂದು ‘ಗೋಪೆನಾಯಕಯ್ಯ’ ಎಂಬುವವನ ಗರಡಿಯಾಗಿತ್ತು. ಮುಂದೆ ಅದೇ ಗರಡಿಯೂ ಪಾಳೆಯಗಾರರ ಕಾಲದಲ್ಲಿಯೂ ಮುಂದುವರೆಯಿತು. ಹಾಗೆಯೇ ಇದರೊಂದಿಗೆ ಕೆಲವು ಹೊಸ ಗರಿಗಳು ಅಸ್ತಿತ್ವಕ್ಕೆ ಬಂದವು. ಮಲ್ಲ (ಕುಸ್ತಿ) ಕಲೆಯನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡು ಬಂದಿದ್ದ “ಜಟ್ಟಿ” ಎಂಬ ಜನಾಂಗವು ಇಲ್ಲಿಯ ಪಾಳೆಯಗಾರರಿಗೆ ತಮ್ಮ ಕಲೆಯನ್ನು ಕಲಿಸುತ್ತಿದ್ದರು ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ. ಈ ಮಲ್ಲ ಕಲೆ ಪರಂಪರೆಯ ಚಿತ್ರದುರ್ಗ ಈಗಿನ ಕೆಲವು ಗರಡಿಮನೆಗಳಲ್ಲಿ ಮುಂದುವರೆದಿರುತ್ತದೆ.


ಇಲ್ಲಿಯ ಪ್ರಸಿದ್ಧ ಗರಡಿಗಳೆಂದರೆ ದೊಡ್ಡಗರಡಿ, ಸಣ್ಣಗರಡಿ, ಬುರುಜನಹಟ್ಟಿಯ ಗರಡಿ ಮತ್ತು ಹಗಲು ನೀವಟಿಗೆ ಗರಡಿ, ಚಿತ್ರದುರ್ಗದ ಬೃಹನ್ಮಠವೂ ಸಹ ಕುಸ್ತಿಕಲೆಗೆ ವಿಶೇಷ ಪ್ರೋತ್ಸಾಹ ನೀಡಿದ್ದುಂಟು. ಈಗ್ಗೆ ಕೆಲವು ದಶಕಗಳ ಹಿಂದೆ ಬೃಹನ್ಮಠ ನಡೆಸುತ್ತಿದ್ದ “ಜಯದೇವ ಜಂಗೀ ಕುಸ್ತಿ”ಗಳೇ ಸಾಕ್ಷಿ.


ಕುಸ್ತಿ ಎಂದೊಡನೇ ಚಿತ್ರದುರ್ಗದ ಜನಮನಗಳಲ್ಲಿ ಥಟ್ಟನೇ ಮೂಡುವ ಚಿತ್ರ “ಪೈಲ್ವಾನ್ ನಂಜಪ್ಪ”ನವರದು. ಇವರು ಇಹಲೋಕವನ್ನು ತ್ಯಜಿಸಿ ಸುಮಾರು ನಾಲ್ಕು ದಶಕಗಳೇ ಕಳೆದರೂ, ಈಗಲೂ ಸಹ ಜನರು ಹಾಗೂ ಅವರ ಸಮಕಾಲೀನರು ಅವರ ಸಾಹಸಮಯ ಕ್ರೀಡಾ ಪ್ರತಿಭೆಯನ್ನು ಕೊಂಡಾಡತ್ತಾರೆ. ಈ ಶತಮಾನದಲ್ಲಿ ಚಿತ್ರದುರ್ಗವು ಕುಸ್ತಿಕ್ಷೇತ್ರಕ್ಕೆ ನೀಡಿದ ದೊಡ್ಡ ಕೊಡುಗೆ “ಪೈಲ್ವಾನ್ ನಂಜಪ್ಪ” ಎಂದರೇ ಅತಿಶಯವಿಲ್ಲ. ನಂಜಪ್ಪನವರು ಮೂಲತಃ ಉತ್ತರದಿಂದ ಬಂದ ‘ಲಾಡರು’ ಎಂಬ ಜನಾಂಗದವರಾಗಿದ್ದರು. ವಿದ್ಯಾಭ್ಯಾಸದ ಕಡೆ ಅಂಥ ಒಲವಿಲ್ಲದ ನಂಜಪ್ಪನವರು ಕುಸ್ತಿ ಕಲೆಯೆಡೆಗೆ ಆಕರ್ಷಿತರಾದರು. ನಂಜಪ್ಪನವರು ನಗರದ ದೊಡ್ಡಗರಡಿಯ ಉಸ್ತಾದರಾಗಿದ್ದು, ಬುಡ್ಡಣ್ಣನವರ ಬಳಿ ಕುಸ್ತಿ ಕಲೆಯ ಸೂಕ್ಷ್ಮ ಪಟ್ಟುಗಳನ್ನು ಕಲಿತುಕೊಂಡರು. ತದನಂತರ ಮೂಲತಃ ಲಾಹೋರ್ ನಿಂದ ಬಂದ ಉಸ್ತಾದ್ ಪರಿಪೈಗರ್ ನಂಜಪ್ಪನವರನ್ನು ಅಪರೂಪದ ಕುಸ್ತಿಪಟುವಾಗಿ ತಿದ್ದಿತೀಡಿದರು. ಈ ಗುರುಶಿಷ್ಯರ ಸಂಭಂಧದ ಅನ್ಯೋನ್ಯತೆಯು ಹಿಂದೂ-ಮುಸ್ಲಿಂ ಭಾವೈಕ್ಯದ ಒಂದು ಶ್ರೇಷ್ಠ ಉದಾಹರಣೆಯಾಗಿದೆ.


ಪೈಲ್ವಾನ್ ನಂಜಪ್ಪ ಕುಸ್ತಿಪಟು ಅಷ್ಟೇ ಆಗಿರದೇ ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದರು. 1947ರಲ್ಲಿ ನಡೆದ “ಮೈಸೂರು ಚಲೋ” ಚಳುವಳಿಯಲ್ಲಿ ತಾಲ್ಲೂಕು ಕಚೇರಿಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿದ ವೀರ ನಂಜಪ್ಪ ಅಂದು ಪೋಲಿಸರ ಗುಂಡೇಟಿನಿಂದ ಕ್ಷಣಾರ್ಧದಲ್ಲಿ ತಪ್ಪಿಸಿಕೊಂಡಿದ್ದರು. ಈ ಒಂದು ನಂಜಪ್ಪನವರ ದೇಶಭಕ್ತಿಗೆ ಒಂದು ನಿದರ್ಶನವಾಗಿದೆ. ಅಷ್ಟೇ ಅಲ್ಲದೇ ಆಗಿನ ಹಲವಾರು ನಾಟಕ ಕಂಪನಿಗಳಲ್ಲಿ ಹವ್ಯಾಸಿ ತಬಲವಾದಕರಾಗಿ ಹಿರಣಯ್ಯರವರಂತಹ ದಿಗ್ಗಜರ ಮೆಚ್ಚುಗೆಗೆ ಪಾತ್ರರಾಗಿದ್ದರು. ಹಲವಾರು ನಾಟಕ ಕಂಪನಿಗಳ ಸಂಪರ್ಕವಿದ್ದ ನಂಜಪ್ಪನವರಿಗೆ ಸಹಜವಾಗಿ ಕನ್ನಡದ ವರನಟ ‘ಡಾರಾಜ್’ ರವರ ಸ್ನೇಹವುಂಟಾಗಿ, ರಾಜ್ ರವರ “ರಣಧೀರ ಕಂಠೀರವ” ಚಿತ್ರದಲ್ಲಿ ಅತಿಥಿ ನಟನಾಗಿ, ಪೈಲ್ವಾನ್ ಪಾತ್ರವನ್ನೇ ಅಭಿನಯಿಸಿದ್ದರು. ಇವರ ಪೈಲ್ವಾನ್ ಶಿಷ್ಯರಲ್ಲಿ ಹೆಚ್ಚು ಪ್ರಸಿದ್ದರಾದವರು ಗೌಳಿಗರ ಲಿಂಗಣ್ಣ(ಮೂಗ).


ಬಹುಮುಖ ಪ್ರತಿಭಾವಂತರು, ಕುಸ್ತಿಪಟು, ರಾಷ್ಟ್ರಪ್ರೇಮಿಯೂ ಆಗಿದ್ದ ಪೈಲ್ವಾನ್ ನಂಜಪ್ಪನವರು 1965ರಲ್ಲಿ ವಿಧಿವಶರಾದರು. ಕುಸ್ತಿಕಲೆಗೆ ಇವರು ಮಾಡಿದ ಸಾಧನೆಯ ಸ್ಮರಣಾರ್ಥವಾಗಿ ಕಾಮನ ಬಾಗಿಲು ಎದುರಿಗೆ ಮಹಾರಾಣಿ ಕಾಲೇಜಿನ ಬದಿಯಲ್ಲಿ ಅವರ ಒಂದು ಸ್ಮಾರಕವನ್ನು ನಿರ್ಮಿಸಲಾಗಿದೆ. ದೊಡ್ಡಗರಡಿಯವರು ನೂಲಹುಣ್ಣಿಮೆಯನ್ನು ಆಚರಿಸುವಾಗ ಇವರ ದೊಡ್ಡ ಭಾವಚಿತ್ರವು ಮೆರವಣಿಗೆಯಲ್ಲಿ ಸಾಗುತ್ತದೆ.

ಚಿತ್ರದುರ್ಗದ "ಚಿತ್ತಾರದುರ್ಗ" ವೆಬ್ ತಾಣ


ಈ ವೆಬ್ ತಾಣದಲ್ಲಿ ಚಿತ್ರದುರ್ಗ ಜಿಲ್ಲೆಯ ಇತಿಹಾಸ, ಪ್ರೇಕ್ಷಣೀಯ ಸ್ಥಳಗಳು, ಸಾಹಿತ್ಯ, ಕಲೆ, ಸಂಸ್ಕೃತಿ, ಜಾನಪದ, ಪ್ರಾತಃಸ್ಮರಣೀಯರು ಸೇರಿದಂತೆ ಅನೇಕ ಅಂಶಗಳನ್ನು ಪರಿಚಯಿಸಲಾಗಿದೆ. ಈ ವೆಬ್ ತಾಣವು ಚಿತ್ರದುರ್ಗ ಜಿಲ್ಲೆಯ ಪ್ರಪ್ರಥಮ ಕನ್ನಡ ವೆಬ್ ತಾಣವಾಗಿದ್ದೂ ಅಲ್ಲದೇ, ಒಂದು ಜಿಲ್ಲೆಯ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿರುವ ರಾಜ್ಯದ ಏಕೈಕ ಕನ್ನಡ ಜಿಲ್ಲಾ ವೆಬ್ ಸೈಟ್.

- R Raghavendra. Challakere
Mobile: +91 99168 22102

ಚಿತ್ರದುರ್ಗ ಜಿಲ್ಲಾ ದರ್ಶನ; ಡಿ.ವಿ.ಡಿ.ಯಲ್ಲಿ...


ತ.ರಾ.ಸು. ಅವರ ಐತಿಹಾಸಿಕ ಕಾದಂಬರಿಗಳನ್ನು ಓದಿದವರು, ನಾಗರಹಾವು, ಹಂಸಗೀತೆ ಮತ್ತು ಕಲ್ಲರಳಿ ಹೂವಾಗಿ ಚಲನಚಿತ್ರಗಳನ್ನು ನೋಡಿದವರು, ದುರ್ಗದ ಕೋಟೆಯನ್ನು ಮಾತ್ರ ನೋಡಿದಂತಾಗಿದೆ. ಚಿತ್ರದುರ್ಗದ ಬಗ್ಗೆ ಇನ್ನೂ ಹೆಚ್ಚು ತಿಳಿಯಬೇಕು ಎಂಬ ಆಸೆ, ಕುತೂಹಲ ಇರುವವರಿಗಾಗಿ ಚಿತ್ರದುರ್ಗದ ಚಿನ್ಮೂಲಾದ್ರಿ ಕ್ರಿಯೇಷನ್ಸ್ ನವರು ಚಿತ್ರದುರ್ಗ ಜಿಲ್ಲಾ ದರ್ಶನ ಎಂಬ ಐತಿಹಾಸಿಕ ಮತ್ತು ಪ್ರವಾಸಿ ತಾಣಗಳ ಕಿರುಚಿತ್ರದ ಡಿವಿಡಿ ಹೊರತಂದಿದ್ದು ಕೇವಲ 99 ರೂಪಾಯಿಗಳಲ್ಲಿ ಜಿಲ್ಲೆಯ ಸೊಗಡನ್ನು ವರ್ಣರಂಜಿತವಾಗಿ ಕಟ್ಟಿಕೊಟ್ಟಿದ್ದಾರೆ. ಸುದ್ದಿಗಿಡುಗ ಪತ್ರಿಕೆಯ ಸಂಪಾದಕ ಶ. ಮಂಜುನಾಥ್ ಅವರ ಸಲಹೆ, ಪಿ.ವಿ. ರಮೇಶ್ ರೆಡ್ಡಿ, ಪಿ.ವಿ. ವಾಸುದೇವ ರೆಡ್ಡಿ ಮತ್ತು ಮಕ್ಕಳ ಸಹಕಾರ, ಯುವ ಉತ್ಸಾಹಿಗಳಾದ ಕೆ.ಜಿ. ವೀರೇಂದ್ರಕುಮಾರ್ ಮತ್ತು ಎಸ್. ಸಾನಿಕಂ ಮಂಜುನಾಥ ರೆಡ್ಡಿ ಅವರ ನಿದರ್ೇಶನ, ಪಿ.ಆರ್. ಚಂದ್ರಕಾಂತ್ ಛಾಯಾಗ್ರಹಣ, ಸಿ. ನಾಗರತ್ನ, ಆರ್. ಗುರುಮೂತರ್ಿ, ಕೋಲಂನಳ್ಳಿ ಪೀತಾಂಬರ್ ಮತ್ತು ಜಯಪ್ರಕಾಶ್ ನಾಗತಿಹಳ್ಳಿ ಅವರ ಮಧುರ ನಿರೂಪಣೆಯಲ್ಲಿ ಅದ್ಭುತವಾಗಿ ಮೂಡಿಬಂದಿರುವ ಚಿತ್ರದುರ್ಗ ಜಿಲ್ಲಾ ದರ್ಶನ ಎಂಬ ಐತಿಹಾಸಿಕ ಮತ್ತು ಪ್ರವಾಸಿ ತಾಣಗಳ ಕಿರುಚಿತ್ರದ ಡಿವಿಡಿ ಅಮೃತ ಸಾಹಿತ್ಯ ಸಮ್ಮೇಳನದ ಸಂದರ್ಭಕ್ಕೆ ಸರಿಯಾಗಿ ಹೊರಬಂದಿರುವುದು ಅಪರೂಪದ ಸಾಧನೆಯೇ. ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವವರೆಲ್ಲರೂ ಒಂದೊಂದು ಡಿವಿಡಿ ತೆಗೆದುಕೊಂಡು ಹೋಗಲು ಅನುವಾಗುವಂತೆ ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಏಪರ್ಾಡು ಮಾಡಿರುವುದು ಅಭಿನಂದನಾರ್ಹ ಕೆಲಸ. ಸುಮಾರು ಎರಡೂವರೆ ಗಂಟೆಗೂ ಹೆಚ್ಚುಕಾಲ, ಒಂದು ಚಲನಚಿತ್ರ ನೋಡುವಂತೆ, ಕೂತು ನೋಡಬಹುದಾದ ಈ ಡಿವಿಡಿಯಲ್ಲಿ ಮೂಡಿಬಂದಿರುವ ದೃಶ್ಯಾವಳಿಗೆ ಏಳು ಜನ ಲೇಖಕರು ನಿರೂಪಣಾ ಸಾಹಿತ್ಯ ಒದಗಿಸಿದ್ದಾರೆ. {ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ - ಚಿತ್ರದುರ್ಗ (50 ನಿಮಿಷ), ಕೋಲಂನಳ್ಳಿ ಪೀತಾಂಬರ್ - ಚಳ್ಳಕೆರೆ (17 ನಿಮಿಷ), ಬೆಲಗೂರು ಶ್ರೀಕಾಂತ್ ಮತ್ತು ಪೀಲಾಪುರ ಕಂಠೇಶ್ - ಹೊಸದುರ್ಗ (28 ನಿಮಿಷ), ಕೆ.ಜಿ. ವೆಂಕಟೇಶ್ - ಮೊಳಕಾಲ್ಮುರು (17 ನಿಮಿಷ), ಚಂದ್ರಶೇಖರ ತಾಳ್ಯ - ಹೊಳಲ್ಕೆರೆ (24 ನಿಮಿಷ) ಹಾಗೂ ಯಳನಾಡು ಅಂಜನಪ್ಪ - ಹಿರಿಯೂರು (12 ನಿಮಿಷ).} ಲಭ್ಯವಿರುವ ಜಿಲ್ಲಾ ಹಾಗೂ ತಾಲ್ಲೂಕು ದರ್ಶನಗಳು, ಲೇಖನಗಳು, ಜನಜನಿತ ನಂಬಿಕೆಗಳು, ಹೇಳಿಕೆಗಳು, ಐತಿಹ್ಯಗಳು ಮತ್ತು ದಾಖಲೆಗಳಲ್ಲಿ ದೊರೆತ ಮಾಹಿತಿಯನ್ನು ಆಧರಿಸಿ ಈ ಲೇಖಕರು ನಿರೂಪಣಾ ಸಾಹಿತ್ಯ ರಚಿಸಿರುವುದರಿಂದ ಅಲ್ಲಲ್ಲಿ ಚಚರ್ಾಸ್ಪದ ಅಂಶಗಳು ಉಳಿದಿವೆ. ಪ್ರಾಜ್ಞರು ಇವರ ಬಗ್ಗೆ ಹರಿಹಾಯದೆ ಇತಿಹಾಸಕಾರರಿಂದ ಪರಾಮಶರ್ಿತ ಮಾಹಿತಿ ಒದಗಿಸಿಕೊಟ್ಟಲ್ಲಿ, ಉತ್ತಮಗೊಳಿಸುವ ಸಲಹೆ ಸೂಚನೆಗಳನ್ನು ನೀಡಿದಲ್ಲಿ ಕೂಡಲೇ ಅಳವಡಿಸಿಕೊಳ್ಳುವ ವಿಶಾಲ ಮನೋಭಾವ ಡಿವಿಡಿ ಸಿದ್ಧಪಡಿಸಿರುವ ಚಿನ್ಮೂಲಾದ್ರಿ ಕ್ರಿಯೇಷನ್ಸ್ ನವರಿಗೆ ಖಂಡಿತಾ ಇದೆ ಎಂದು ಹೇಳಬಹುದು. ತಾಲ್ಲೂಕುವಾರು ಮಾಹಿತಿಯನ್ನು ಆಯಾಯ ತಾಲ್ಲೂಕಿನವರಿಂದ ಕ್ರೋಢೀಕರಿಸಿ, ಅಪರೂಪದ ಸ್ಥಳಗಳ ದೃಶ್ಯಗಳನ್ನು ಸೆರೆಹಿಡಿದು, ಸುಮಾರು ಮೂರು ವರ್ಷಗಳಿಗೂ ಹೆಚ್ಚುಕಾಲ ಶ್ರಮವಹಿಸಿದ ವೀರೇಂದ್ರ ಕುಮಾರ್ ಮತ್ತು ಗೆಳೆಯರ ತಂಡ ಚಿತ್ರದುರ್ಗದ ಅಮೃತ ಸಾಹಿತ್ಯ ಸಮ್ಮೇಳನದ ಸಂದರ್ಭಕ್ಕೆ ಕಳೆ ಕಟ್ಟುವಂತಹ ಅಪರೂಪದ ಕೆಲಸ ಮಾಡಿ, ಮಾಹಿತಿ ತಂತ್ರಜ್ಞಾನದ ಬಳಕೆಯಲ್ಲಿ ಚಿತ್ರದುರ್ಗ ಯಾವಾಗಲೂ ಒಂದು ಹೆಜ್ಜೆ ಮುಂದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ನೀವೂ ಒಂದು ಡಿ.ವಿ.ಡಿ. ಕೊಳ್ಳಿ. ನೋಡಿ. ಖುಷಿಯಾದರೆ ಚಿತ್ರದುರ್ಗದ ಚಚರ್್ ಬಡಾವಣೆಯಲ್ಲಿರುವ ಚಿನ್ಮೂಲಾದ್ರಿ ಕ್ರಿಯೇಷನ್ಸ್ ನವರಿಗೆ ಒಂದು ಥ್ಯಾಂಕ್ಸ್ ಹೇಳಿ. ಫೋನ್ : 9986142889 / 9844311515
ಪರಿಚಯಿಸಿದವರು: ಬೇದ್ರೆ ಮಂಜುನಾಥ ವಿಳಾಸ: ಪ್ರಸಾರ ನಿವರ್ಾಹಕರು, ಆಕಾಶವಾಣಿ, ಚಿತ್ರದುರ್ಗ

ಸಮ್ಮೇಳನಾಧ್ಯಕ್ಷರ ಸಂದರ್ಶನ...


"ಬರಿಮಾತಿನ ಸಾಹಿತಿ, ಸ್ವಾಮೀಜಿ, ರಾಜಕಾರಣಿಗಳಿಂದ ದೇಶ ಹಾಳು"ಚಿತ್ರದುರ್ಗ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಎಲ್. ಬಸವರಾಜು ಅವರು ಆಯ್ಕೆಯಾದ ಕೂಡಲೇ ಅದುವರೆಗಿದ್ದ ವಿವಾದದ ಹೊಗೆಯೆಲ್ಲವೂ ಒಮ್ಮೆಗೇ ಮಾಯವಾಯಿತು. ಆ ಸ್ಥಾನಕ್ಕೆ ಪ್ರೊಫೆಸರ್ ಎಲ್‌ಬಿ ಅಷ್ಟು ಸೂಕ್ತರು ಹಾಗೂ ವಿವಾದಾತೀತರು. 90ರ ಹರೆಯದಲ್ಲೂ ಗ್ರಂಥ ಸಂಪಾದನೆ ಮತ್ತು ಸೃಜನಶೀಲ ಸಾಹಿತ್ಯದ ಸಹವಾಸದಿಂದ ಅವರು ದೂರವಾಗಿಲ್ಲ. ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಎಲ್‌ಬಿ ಅವರೊಂದಿಗೆ ಬಿ.ಎಸ್. ನಾರಾಯಣಸ್ವಾಮಿ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನೀವು ಬಹು ಹಿಂದೆಯೇ ಆಯ್ಕೆಯಾಗಬೇಕಿತ್ತು. ಇದೀಗ ನಾಡೋಜ ಪ್ರಶಸ್ತಿಯೂ ಸಂದಿದೆ. ಈ ಬಗ್ಗೆ...?ಈ ಪ್ರಶಸ್ತಿಗಳೆಲ್ಲಾ ನಮ್ಮೊಳಗಿನ ಅಹಂಕಾರವನ್ನು ತೃಪ್ತಿಪಡಿಸುತ್ತವೆ ಅಷ್ಟೆ. ಪ್ರಶಸ್ತಿ, ಪದವಿಯನ್ನೆಲ್ಲಾ ನಾನು ಯಾವತ್ತೂ ನಿರೀಕ್ಷಿಸಿದವನಲ್ಲ; ಅದಕ್ಕಾಗಿ ಕೆಲಸ ಮಾಡಿದವನಲ್ಲ.ಗ್ರಂಥ ಸಂಪಾದನೆ ಮತ್ತು ಸೃಜನಶೀಲ ಬರಹಗಳೆರಡರಲ್ಲೂ ತೊಡಗಿಸಿಕೊಂಡಿದ್ದೀರಿ. ನಿಮಗೆ ಖುಷಿ ಕೊಟ್ಟಿದ್ದು...ಗ್ರಂಥ ಸಂಪಾದನೆ ಇರಲಿ, ಸೃಜನಶೀಲ ಬರವಣಿಗೆ ಇರಲಿ ಎರಡನ್ನೂ ಖುಷಿಯಿಂದಲೇ ಮಾಡಿದ್ದೀನಿ ಅಂತ ಹೇಳಬಲ್ಲೆ. ಈಗ ತಿರುಗಿ ನೋಡಿದರೆ ಇವನ್ನೆಲ್ಲಾ ಬರೆದದ್ದು ನಾನೇನಾ ಅನಿಸುತ್ತದೆ. ನಾನು ಬರೆದಿಲ್ಲ; ಯಾವುದೋ ಶಕ್ತಿ ನನ್ನ ಕೈಯಿಂದ ಬರೆಸಿತು ಅನ್ನುವುದೇ ನಿಜ. ಏನೇ ಮಾಡಿದರೂ ಆ ಒಂದು ಆವೇಶದಿಂದ, ಮನಃಪೂರ್ವಕವಾಗಿ ಮಾಡಬೇಕು. ಇಲ್ಲದೇ ಹೋದರೆ ಅದು ಕೂಲಿ ಕೆಲಸ ಆಗುತ್ತದೆ.ಗ್ರಂಥ ಸಂಪಾದನೆಯತ್ತ ನಿಮ್ಮ ಒಲವು ಹರಿದಿದ್ದು ಹೇಗೆ?ನಾನು ವಿದ್ಯಾರ್ಥಿ ದೆಸೆಯಲ್ಲಿ ನಮ್ಮ ಪ್ರಾಚೀನ ಪಠ್ಯಗಳನ್ನು ಓದುತ್ತಾ, ಅರ್ಥ ಮಾಡಿಕೊಳ್ಳುತ್ತಿದ್ದಾಗ ಕೆಲವು ಕಡೆ ಏನೋ ತಪ್ಪಿದೆ; ಅರ್ಥ ಸರಿ ಬರುತ್ತಿಲ್ಲಾ ಎನಿಸುತ್ತಿತ್ತು. ಇದನ್ನು ನಮ್ಮ ಗುರುಗಳಿಗೂ ಹೇಳುತ್ತಿದ್ದೆ. ಅವರೂ ಕೂಡಾ ನನ್ನ ಹಾಗೇ ಅಭಿಪ್ರಾಯಪಡುತ್ತಿದ್ದರು. ಆನಂತರ ಪ್ರಾಚೀನ ಕೃತಿಯೊಂದರ ಹಲವು ಪಠ್ಯಗಳನ್ನು ಓದಿ ಯಾವುದು ಸರಿ ಎಂದು ನಿರ್ಣಯಿಸುವುದೇ ನನಗೆ ಒಂದು ಹವ್ಯಾಸವಾಗಿ ಹೋಯಿತು. ಹೀಗಾಗಿ ಗ್ರಂಥ ಸಂಪಾದನೆಯತ್ತ ನನ್ನನ್ನು ತೊಡಗಿಸಿಕೊಂಡೆ. ಮೇಲಾಗಿ ನಮ್ಮ ಪ್ರಾಚೀನ ಕೃತಿಗಳಲ್ಲಿ ಸಾಕಷ್ಟು ಪ್ರಕ್ಷೇಪಗಳಿವೆ. ಕೃತಿಯ ಉದ್ದೇಶವೇ ಮರೆಯಾಗಿ ಹೋಗುವಂತಹ ಪ್ರಕ್ಷೇಪಗಳಾಗಿವೆ. ಬಸವಣ್ಣನವರದಲ್ಲದ ಹಲವು ವಚನಗಳು ಅವರ ಅಂಕಿತನಾಮದಿಂದ ಪ್ರಕಟವಾಗಿದ್ದವು. ನಾನು ಅವನ್ನೆಲ್ಲಾ ಸ್ಥೂಲವಾಗಿ ಅಧ್ಯಯನ ಮಾಡಿ ಇವು ಬಸವಣ್ಣ ಅವರದಲ್ಲ ಎಂದು ಹೇಳಿದೆ. ಹೀಗೆ ಹೇಳಿದ್ದಕ್ಕೆ ಹಲವು ವಿರೋಧಗಳೂ ಬಂದವು. ಇನ್ನು 'ಶೂನ್ಯಸಂಪಾದನೆ'ಯಂತಹ ಕೃತಿಗಳು ಬಹಳಷ್ಟು ಕಾಲ ಕೃತಿಕಾರನ ಹೆಸರಿನ ಬದಲಿಗೆ ಯಾರ್‍ಯಾರದೋ ಹೆಸರಿನಲ್ಲಿ ಪ್ರಕಟಗೊಳ್ಳುತ್ತಿತ್ತು. ಇಂತಹ 'ಕಳ್ಳತನ'ದಲ್ಲಿ ಹಲವು ಮಠಗಳು, ಸ್ವಾಮೀಜಿಗಳೂ ಪಾಲ್ಗೊಂಡಿದ್ದು ಬೇಸರ ತರುವ ವಿಷಯ.ಪ್ರಾಚೀನ ಕೃತಿಗಳು ಇಂದಿನ ಕಾಲಕ್ಕೆ ಎಷ್ಟು ಪ್ರಸ್ತುತ?ಪ್ರಾಚೀನ ಕೃತಿಗಳಲ್ಲಿ ಎಲ್ಲಾ ಕಾಲಕ್ಕೂ ಪ್ರಸ್ತುತವಾಗುವ ಗಟ್ಟಿ ಕೃತಿಗಳೇ ಈಗಲೂ ಉಳಿದಿರುವುದು. ಅವು ಇಂದಿಗೂ ಪ್ರಸ್ತುತ. ಪಂಪ, ರನ್ನ, ಬಸವಾದಿ ಶರಣರು... ಅವರೆಲ್ಲಾ ಎಂಥಾ ನೀತಿ ಹೇಳಿದ್ದಾರೆ? ಆದರೆ ಅವುಗಳನ್ನೆಲ್ಲಾ ಈಗಿನವರು ಓದಬೇಕಲ್ಲಾ... ಓದಿ ಅದರಂತೆ ನಡೆಯಬೇಕಲ್ಲಾ... ರನ್ನನ ಒಂದು ಕಂದ ಪದ್ಯ ಹೀಗಿದೆ: 'ಶ್ರೀಯುತನೊಳುದಾರತೆ, ವಾಕ್‌ಶ್ರೀಯುತನೊಳಮತ್ಸರತ್ವಂ ಆಗದು...' ಅಂದರೆ ಶ್ರೀಮಂತರಲ್ಲಿ ಉದಾರತೆಯೂ, ಕವಿ-ಸಾಹಿತಿಗಳಲ್ಲಿ ಅಮತ್ಸರವೂ (ಪ್ರೀತಿ) ಇರುವುದಿಲ್ಲ. ಅದರ ಬದಲು ಉದಾರವಂತನೇ ಶ್ರೀಮಂತನಾಗಿ, ಅಮತ್ಸರನು ಕವಿಯಾದರೆ ಎಷ್ಟು ಚೆನ್ನ ಎನ್ನುತ್ತಾನೆ ರನ್ನ. ಇದು ಈಗಲೂ ಎಷ್ಟು ನಿಜ ನೋಡಿ. ನಮ್ಮ ಸಾಹಿತ್ಯವಲಯದಲ್ಲಿ ಎಷ್ಟು ಮತ್ಸರ ಇದೆ ಗೊತ್ತಲ್ಲ! ಇಂದಿನವರು ಹಿರಿಯರ ನೀತಿಯನ್ನು ಪಾಲಿಸುವುದಿಲ್ಲ. 12ನೇ ಶತಮಾನದಲ್ಲಿ ಬಸವಣ್ಣ ವೈದಿಕ ಧರ್ಮಕ್ಕೆ ಪ್ರತಿಯಾಗಿ ಸಮಾಜ ಸುಧಾರಣೆಯಾಗುವಂತಹ ಕಾಯಕ ಧರ್ಮವನ್ನು ಬೋಧಿಸಿದ. ಅದು ಜಾತಿರಹಿತ ಧರ್ಮ. ಆದರೆ ಈಗ ಬಸವನ ಅನುಯಾಯಿ ಎಂದುಕೊಳ್ಳುವವರು 'ಬ್ರಾಹ್ಮಣ'ರಾಗಲು ಹೊರಟಿದ್ದಾರೆ; ಜಾತಿ ರಾಜಕೀಯದಲ್ಲೇ ತೊಡಗಿದ್ದಾರೆ.ಹಾಗಿದ್ದರೆ ಈಗಿನ ಸಾಹಿತ್ಯದ ಜಾಡು ಎತ್ತ ಸಾಗುತ್ತಿದೆ?ಈಗಿನ ಸಾಹಿತ್ಯವೇ? ಅದೇ ನೋಡಿ, ಯಾರಿಗೆ ಅಕಾಡೆಮಿ ಪ್ರಶಸ್ತಿ ಬಂತು, ಯಾರಿಗೆ ಪಂಪ ಪ್ರಶಸ್ತಿ ಬಂತು, ನಾಡೋಜ ಬಂತು; ತನಗೆ ಬರಲಿಲ್ಲ... ಎಂಬ ಮತ್ಸರದಲ್ಲಿ ತೊಡಗಿದೆ ಅಷ್ಟೇ. ನನಗೆ ಪ್ರಶಸ್ತಿ ಬಂತು ಅಂತ ನಾನು ಉಳಿದವರ ಬಗ್ಗೆ ತಿರಸ್ಕಾರದಿಂದ ಈ ಮಾತು ಹೇಳುತ್ತಿಲ್ಲ. ಆದರೆ ವಾಸ್ತವ ಹೀಗಿದೆ. ಸಾಹಿತ್ಯ ಎನ್ನುವುದು ಸತ್ಕ್ರಿಯೆಗೆ ಪ್ರೇರೇಪಣೆ ನೀಡಬೇಕು. ಅಂದರೆ ಒಂದು ರೀತಿಯಲ್ಲಿ ದೀಪದಿಂದ ದೀಪ ಹಚ್ಚುವ ಕೆಲಸ ಮಾಡಬೇಕು. ಆದರೆ ಇವತ್ತು ಸಾಹಿತಿಗಳು ಬರೀ ಮಾತನಾಡುತ್ತಿದ್ದಾರೆಯೇ ವಿನಾ ಕೆಲಸ ಮಾಡುತ್ತಿಲ್ಲ. ಇವತ್ತಿನ ಜ್ವಲಂತ ಸಮಸ್ಯೆಗಳಿಗೂ ತನಗೂ ಸಂಬಂಧವೇ ಇಲ್ಲ ಎನ್ನುವಂತೆ ಸಾಹಿತ್ಯ ಸಾಗುತ್ತಿದೆ. ಜನರಲ್ಲಿ ಜಾಗೃತಿ ಮೂಡಿಸುವಂಥ ಕೃತಿಗಳು ಬರುತ್ತಿಲ್ಲ. ಸಾಮಾನ್ಯವಾಗಿ ಬರೆಯುವವರು, ಸಾಹಿತಿಗಳನ್ನು ಜನ ಮಹಾತ್ಮ ಎಂದೇ ತಿಳಿಯುತ್ತಾರೆ. ಆದರೆ ಆತ ಮಹಾತ್ಮನೇನೂ ಆಗಿರುವುದಿಲ್ಲ. ಅವನಲ್ಲೂ ಎಲ್ಲರಂತೆ ಓರೆ-ಕೋರೆಗಳು ಇರುತ್ತವೆ. ಯುರೋಪ್‌ನಲ್ಲಿ ಇಂಗ್ಲೆಂಡ್-ಫ್ರೆಂಚ್ ಯುದ್ಧದ ಸಂದರ್ಭದಲ್ಲಿ ವರ್ಡ್ಸ್‌ವರ್ತ್ ಕವಿ ತನ್ನ ದೇಶದ ಬಗ್ಗೆ ಬಹಳ ಅಭಿಮಾನದಿಂದ ಬರೆದ. ಆದರೆ ಅದೇ ವೇಳೆ ಅವನ ದೇಶದ ಜನ ಭಾರತದಲ್ಲಿ ಶೋಷಣೆ ಮಾಡುತ್ತಿದ್ದಾಗ ಅದರ ಬಗ್ಗೆ ಚಕಾರ ಎತ್ತಲಿಲ್ಲ. ಹೀಗಾಗಿ ಕವಿಗಳೆಲ್ಲಾ ಮಹಾತ್ಮರೇನಲ್ಲ. ಇಂದು ಎಲ್ಲಾ ಕ್ಷೇತ್ರ ಹೊಲಸಾದ ಹಾಗೆ ಸಾಹಿತ್ಯವಲಯ ಕೂಡಾ ಹೊಲಸಾಗಿಬಿಟ್ಟಿದೆ. ನನಗಂತೂ ಯಾವುದೇ ಆಶಾವಾದ ಕಾಣುತ್ತಿಲ್ಲ. ಇವತ್ತು ಸ್ವಾಮೀಜಿಗಳು, ರಾಜಕಾರಣಿಗಳು ಮತ್ತು ಸಾಹಿತಿಗಳನ್ನು ಒಂದೇ ತಕ್ಕಡಿಯಲ್ಲಿ ತೂಗಬಹುದು.ಸಾಹಿತ್ಯ ಸಮ್ಮೇಳನಗಳು ಕೂಡಾ ವಿವಾದಗಳಿಂದ ಹೊರತಾಗುತ್ತಿಲ್ಲ...ಅದೇ ನಾನು ಹೇಳಿದೆನಲ್ಲಾ. ಇವತ್ತು ದುಡ್ಡು, ದುರಹಂಕಾರ, ದುರಾಡಳಿತ ಇವುಗಳಿಂದ ಎಲ್ಲಾ ಕ್ಷೇತ್ರಗಳೂ ಹೊಲಸಾಗುತ್ತಿವೆ. ಸಾಹಿತ್ಯ ವಲಯ ಕೂಡಾ ತಪ್ಪು ದಾರಿಯಲ್ಲಿ ಸಾಗುತ್ತಿದೆ. ನನಗೆ ಪರಮಾಶ್ಚರ್ಯ ಆಗುವಂಥ, ಆತಂಕಕಾರಿ ವಿಷಯ ಎಂದರೆ, ನಾವು ಪರಸ್ಪರ ಪ್ರೀತಿಸುತ್ತಲೇ ಇಲ್ಲ. ಬರೀ ದ್ವೇಷ ತುಂಬಿದೆ. ಪ್ರಾಯಶಃ ಯಾವ ದೇಶದಲ್ಲಿಯೂ ಇಷ್ಟೊಂದು ದ್ವೇಷ, ಕಚ್ಚಾಟ ಇಲ್ಲ ಎನಿಸುತ್ತೆ. ದ್ವೇಷ ಮಾಡುವುದೇ ನಮ್ಮ ಸಂಸ್ಕೃತಿಯಾ ಎಂಬ ಶಂಕೆ ಮೂಡಿಬಿಟ್ಟಿದೆ ನನಗೆ.ಸಮ್ಮೇಳನಗಳಲ್ಲಿ ಕೈಗೊಳ್ಳುವ ನಿರ್ಣಯಗಳು ಕೂಡಾ ಕೇವಲ ನೆಪಮಾತ್ರಕ್ಕೆ ಎನಿಸಿಬಿಟ್ಟಿವೆ. ಅವುಗಳಿಗೆ ಏನಾದರೂ ಅರ್ಥ ಇದೆ ಎನ್ನುತ್ತೀರಾ?ನಮ್ಮ ಭಾಷೆಯ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಸರ್ಕಾರ ನಿರ್ಣಯ ಕೈಗೊಳ್ಳಬೇಕು. ಆದರೆ ಅದು ಯಾವುದೇ ನಿರ್ಣಯ ಕೈಗೊಳ್ಳುತ್ತಿಲ್ಲ. ಹೀಗಾಗಿ ನಾವು ಕೈಗೊಳ್ಳಬೇಕಿದೆ. ಇದು ಒಂದು ರೀತಿ ಬಾಯಿ ಬಡಿದುಕೊಳ್ಳುವ ಕೆಲಸ, ಅಷ್ಟೇ.ಶಾಸ್ತ್ರೀಯ ಸ್ಥಾನ-ಮಾನ ಸಿಕ್ಕ ಹಿನ್ನೆಲೆಯಲ್ಲಿ ಕನ್ನಡಕ್ಕೆ ಈಗ ಆಗಬೇಕಾದ ಕೆಲಸಗಳೇನು?ಪ್ರಾಚೀನ ಸಾಹಿತ್ಯ ಮತ್ತು ಜನಪದ ಸಾಹಿತ್ಯವನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಸಂಶೋಧನಾ ಕ್ಷೇತ್ರಕ್ಕೆ ನೆರವು ನೀಡಬೇಕು. ಅದಿರಲಿ. ಈ ಶಾಸ್ತ್ರೀಯ ಸ್ಥಾನ-ಮಾನ ಗಳಿಸಿಕೊಳ್ಳೋದಕ್ಕೆ ಎಷ್ಟೆಲ್ಲಾ ಹೋರಾಡಬೇಕಾಯಿತು ನೋಡಿ. ಅದೂ 90ರ ಅಂಚಿನಲ್ಲಿರುವ ದೇಜಗೌ ಅವರಂತಹ ಹಿರಿಯರು ಉಪವಾಸ ಮಾಡಬೇಕಾಯಿತು. ಆದರೆ ಕೇಂದ್ರ ಸರ್ಕಾರ ಕೊಡೋ ದುಡ್ಡಿನಿಂದಲೇ ಕನ್ನಡ ಭಾಷೆ ಅಭಿವೃದ್ಧಿ ಆಗಬೇಕೆ? ಏಕೆ, ರಾಜ್ಯ ಸರ್ಕಾರದ ಬಳಿ ದುಡ್ಡು ಇರಲಿಲ್ಲವೇ? ನಮ್ಮ ಭಾಷೆಯನ್ನು ನಾವೇ ಪ್ರೀತಿಸುತ್ತಿಲ್ಲ; ಮನುಷ್ಯ ಸ್ವಭಾವ ಎಷ್ಟು ವಿಚಿತ್ರ ನೋಡಿ. ನಮ್ಮ ಭಾಷೆಯನ್ನು ಉದ್ಧಾರ ಮಾಡೋದಕ್ಕೆ ನಮಗೇ ಮನಸಿಲ್ಲ!ಈಗಿನ ಭಯೋತ್ಪಾದನೆ ಜಾಗತಿಕ ಸಮುದಾಯದ ಮೇಲೆ ಒಡ್ಡಿರುವ ಸವಾಲಿಗೆ ಸಾಹಿತ್ಯ ಹೇಗೆ ಪ್ರತಿಕ್ರಿಯಿಸಬೇಕು?ಎಲ್ಲಿ ಮಹಾಕವಿ ವಿಫಲನಾಗುತ್ತಾನೋ ಅಲ್ಲಿ ಭಯೋತ್ಪಾದನೆ ದೈತ್ಯ ಸ್ವರೂಪ ತಾಳುತ್ತದೆ. ಇವತ್ತು ಮಹಾಕವಿ ವಿಫಲನಾಗಿದ್ದಾನೆ. ಎಲ್ಲಕ್ಕೂ ದ್ವೇಷವೇ ಮೂಲ ಆಗಿದೆ. ತಾನು ಒಂದು ಧರ್ಮ ಅನುಸರಿಸುತ್ತಿದ್ದೇನೆಂದರೆ ಮತ್ತೊಂದು ಧರ್ಮವನ್ನು ವಿರೋಧಿಸಬೇಕು, ದ್ವೇಷಿಸಬೇಕು ಎಂದು ಅರ್ಥವಲ್ಲ. ಪರಸ್ಪರ ಪ್ರೀತಿ, ಸೌಹಾರ್ದವನ್ನು ನಮ್ಮ ಹಿಂದಿನವರು ಹೇಳುತ್ತಲೇ ಬಂದಿದ್ದಾರೆ. ಆದರೆ ಕೇಳುವವರಿಲ್ಲ ಅಷ್ಟೇ. ಧರ್ಮವನ್ನು ಹೊಡೆದಾಟಕ್ಕೆ ಬಳಸಿಕೊಳ್ಳಲಾಗ್ತಿದೆ. ಆಡಳಿತ ಕೂಡಾ ಇದಕ್ಕೆ ಕುಮ್ಮಕ್ಕು ಕೊಡ್ತಿದೆ. ಪಾಕಿಸ್ತಾನದಲ್ಲಿ ಆಗುತ್ತಿರುವುದು ಇದೇ. ಹಿಂದೆ ಜೈನ, ವೈಷ್ಣವ ಮತ್ತು ಶೈವರ ನಡುವೆ ಕಿತ್ತಾಟ, ಜಗಳಗಳು ನಡೆದಿವೆ. ಅಂದರೆ ಪರಸ್ಪರ ದ್ವೇಷವೇ ಮನುಷ್ಯನ ಸಂಸ್ಕೃತಿ ಎನಿಸಿಬಿಟ್ಟಿದೆ. ಇದಕ್ಕೆ ಸಣ್ಣ ನೆಪಗಳು ಸಿಕ್ಕರೂ ಸಾಕು. ಬೇಸರದ ವಿಷಯ ಅಂದರೆ ಎಳೆಯ ಮಕ್ಕಳ ಮನಸ್ಸನ್ನು ತಿದ್ದುವಂಥ ಶಿಕ್ಷಕರು, ಅಧ್ಯಾಪಕರು ಬಹುಮಂದಿ ಇಲ್ಲ. ಶಿಕ್ಷಣ ವ್ಯವಸ್ಥೆ ಕೂಡಾ ಹಾಳಾಗಿದೆ. ಮನುಷ್ಯನ ಮನಸ್ಸು ಸಾತ್ವಿಕತೆ ಕಡೆ ಸಾಗಲು ಬೇಕಾದ ತಯಾರಿ ಕೂಡಾ ಇಲ್ಲದಂತಾಗಿದೆ. ವಿದ್ಯಾಭ್ಯಾಸವನ್ನೇ ಖಾಸಗೀಕರಣ ಮಾಡಿಬಿಟ್ಟಿದ್ದಾರೆ. ಅಂದರೆ ವಿದ್ಯೆಯನ್ನು ಶ್ರಮಪಟ್ಟು ಗಳಿಸುವುದಲ್ಲ; ಬದಲಿಗೆ ದುಡ್ಡುಕೊಟ್ಟು ಖರೀದಿಸುವಂಥ ಪರಿಸ್ಥಿತಿ ಇದೆ. ಹೀಗಾಗಿ ಮುಂದಿನ ಪೀಳಿಗೆ ಬಗ್ಗೆ ಯಾವುದೇ ಆಶಾವಾದ ಇಟ್ಟುಕೊಳ್ಳದಂಥ ಪರಿಸ್ಥಿತಿ ಇದೆ. ಇದನ್ನು ಹೇಗೆ ಉತ್ತಮಪಡಿಸುವುದು, ನನಗಂತೂ ಗೊತ್ತಾಗುತ್ತಿಲ್ಲ.ನಿಮ್ಮ ಮುಂದಿನ ಬರವಣಿಗೆ?ಪಂಪನ 'ವಿಕ್ರಮಾರ್ಜುನ ವಿಜಯಂ' ಕಾವ್ಯವನ್ನು ಮೂಲ ಮಹಾಭಾರತದೊಡನೆ ತುಲನೆ ಮಾಡಿ ಬರೆದ ಕೃತಿ ಅಚ್ಚಿನಲ್ಲಿದೆ. ಬಸವಣ್ಣನವರ ವಚನಗಳು ಈ ಕಾಲಕ್ಕೆ ಹೇಗೆ ಪ್ರಸ್ತುತವಾಗಿವೆ ಎಂಬುದರ ಬಗೆಗಿನ ವಿಮರ್ಶಾ ಕೃತಿಯೂ ಸದ್ಯವೇ ಪ್ರಕಟಗೊಳ್ಳಲಿದೆ. ಸದ್ಯಕ್ಕೆ ಈ ಎರಡು ಕೃತಿಗಳು ಬರಲಿವೆ. ಈಗಿನ ದೇಹಪ್ರಕೃತಿಯಲ್ಲಿ ಮುಂಚಿನ ಹಾಗೆ ಬರೆಯಲು ಸಾಧ್ಯವಾಗುವುದಿಲ್ಲ.ಯುವ ಜನಾಂಗಕ್ಕೆ, ಯುವ ಬರಹಗಾರರಿಗೆ ನಿಮ್ಮ ಕಿವಿಮಾತು ಏನು?ನಾನು ಆಗಲೇ ಹೇಳಿದೆನಲ್ಲಾ, ಕಿವಿಮಾತು ಹೇಳಿದರೆ ಅದನ್ನು ಕೇಳುವವರು ಯಾರು? ನಮ್ಮ ಪ್ರಾಚೀನರೇ ಎಲ್ಲಾ ಹೇಳಿದ್ದಾರೆ. ಆದರೆ ಅನುಸರಿಸುವವರಿಲ್ಲ ಅಷ್ಟೇ. ನಮ್ಮ ದೇಶ, ಸಂಸ್ಕೃತಿಯನ್ನು ನಾನು ತುಂಬಾ ಬೈಯುತ್ತಿದ್ದೀನಿ ಅಂತ ನಿಮಗೆ ಅನಿಸುತ್ತಿದೆಯೇ? ಹಾಗೇನಾದರೂ ನಿಮಗೆ ಅನಿಸಿದ್ದರೆ ನಾನು ವಿವೇಕಸ್ಥ ಅಂತ ಅರ್ಥ!
(ಕೃಪೆ: ಸಂಡೇ ಇಂಡಿಯನ್)

ಭಾನುವಾರ, ಫೆಬ್ರವರಿ 1, 2009

ದುರ್ಗದ ಚಲನಚಿತ್ರಗಳು


ಚಿತ್ರದುರ್ಗ ಇತಿಹಾಸವನ್ನು ನೆನಪಿಸುವ ಹಾಗೂ ಸಾಮಾಜಿಕವಾಗಿದ್ದರೂ ದುರ್ಗದ ಸ್ಮಾರಕಗಳ ಮಧ್ಯೆ ಚಿತ್ರಿತವಾದ ಚಲನಚಿತ್ರಗಳು ಜನರ ಮೇಲೆ ಬೀರಿದ ಪ್ರಭಾವ ಅಪಾರ. ತ.ರಾ.ಸು. ಸೃಷ್ಟಿಸಿದ 'ಹಂಸಗೀತೆ' ಕನ್ನಡದಲ್ಲಿ ಚಿತ್ರವಾಗುವ ಮೊದಲೇ ಹಿಂದಿಯಲ್ಲಿ 'ಬಸಂತ್ ಬಹಾರ್' ಆಗಿ ದೇಶದಲ್ಲೆಲ್ಲಾ ಮನೆಮಾತಾಗಿದ್ದು, ಈಗ ಇತಿಹಾಸ. ದುರ್ಗಾಧಾರಿತ ಕನ್ನಡ ಕಾದಂಬರಿಯೊಂದು ಮೊದಲ ಬಾರಿಗೆ ಹಿಂದಿನ ಚಲನಚಿತ್ರವಾದುದು ದುರ್ಗದವರ ಮಟ್ಟಿಗೆ ಹೆಮ್ಮೆಯ ಸಂಗತಿ. ಈ ಚಿತ್ರ ಅಮೇರಿಕಾದ ಟಿ.ವಿ. ವಾಹಿನಿ (ಚಾನೆಲ್)ಯಲ್ಲಿ ಪ್ರದರ್ಶಿತಗೊಂಡಿದ್ದು ಸ್ಮರಣಾರ್ಹ ಘಟನೆ. ಕನ್ನಡದಲ್ಲಿ 'ಹಂಸಗೀತೆ' ಸಿನಿಮಾ ಆದುರು 1975ರಲ್ಲಿ. ಅದರ ನಿರ್ದೇಶಕರು ಜಿ.ವಿ.ಅಯ್ಯರ್. ಅದೇ ವರ್ಷ ಈ ಚಿತ್ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಪಾತ್ರವಾದರೆ, 1975-76ನೇ ಸಾಲಿನಲ್ಲಿ ದ್ವಿತಿಯ ಅತ್ಯುತ್ತಮ ಚಿತ್ರವೆಂದು ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. 1978ರಲ್ಲಿ ಮದರಾಸಿನಲ್ಲಿ ಏರ್ಪಟ್ಟ ಭಾರತಿಯ ಪನೋರಮಾದಲ್ಲೂ ಈ ಚಿತ್ರ ಪ್ರದರ್ಶಿಲ್ಪಟ್ಟಿತು. ಅಲ್ಲದೇ ಪ್ರಪಂಚದಾದ್ಯಂತ ಪ್ರದರ್ಶಿತವಾಗಿ ದುರ್ಗದ ಬೆಟ್ಟ, ಸ್ಮಾರಕಗಳನ್ನು ಪರಿಚಯಿಸಿಕೊಟ್ಟಿತು.

'ಹಂಸಗೀತೆ'ಗೂ ಮೊದಲು 1972ರಲ್ಲಿಯೇ ನಿರ್ದೇಶಕರ ನಿರ್ದೇಶಕ ಎಂದೇ ಖ್ಯಾತಿಯ 'ಎಸ್.ಆರ್.ಪುಟ್ಟಣ್ಣ ಕಣಗಾಲ್' ರವರ ದಿಗ್ದರ್ಶನದಲ್ಲಿ ನಿರ್ಮಿತವಾದ ಚಿತ್ರ 'ನಾಗರಹಾವು'. ಇದೇ ಚಿತ್ರದ ಮೂಲಕ ನಟ 'ವಿಷ್ಣುವರ್ಧನ್' ರವರು ರಾಮಾಚಾರಿಯಾಗಿಯೂ, ನಟ 'ಅಂಬರೀಶ್' ರವರು ಜಲೀಲ್ಆಗಿಯೂ ಕನ್ನಡದ ಬೆಳ್ಳಿತೆರೆಗೆ ಪರಿಚಯವಾದರು. ಚಿತ್ರರಂಗದಲ್ಲಿ ಮೈಲಿಗಲ್ಲು ಸ್ಥಾಪಿಸಿದ ಈ ಚಿತ್ರವೂ ದುರ್ಗದವರಿಗೆ ತಮ್ಮ ಊರಿನ ಬಗೆಗೆ ಎಷ್ಟು ಅಭಿಮಾನವಿತ್ತೊ ಅದರ ಹತ್ತರಷ್ಟು ಅಭಿಮಾನ ಬೆಳೆಯಲು ಈ ಚಿತ್ರ ಕಾರಣವಾದುದರಲ್ಲಿ ಆಶ್ಚರ್ಯವೇನಿಲ್ಲ. 'ನಾಗರಹಾವು' ಚಿತ್ರದ ಹಿಂದಿಯ ಅವತರಣಿಕೆಯಾದ 'ಜಹರೀಲಾ ಸಾಂಪ್' ದುರ್ಗದ ಪರಿಸರದಲ್ಲಿ ರೂಪು ತಳೆದು ಯಶಸ್ವಿಯಾಯಿತು. ದುರ್ಗದ ಸ್ಮಾರಕಗಳನ್ನು ವಿಶ್ವದ ಮಟ್ಟದಲ್ಲಿ ಪರಿಚಯಿಸಿತು. ದುರ್ಗದ ಇತಿಹಾಸದಲ್ಲಿ ಬೆರೆತ ವೀರರಮಣಿ ಓಬವ್ವೆಯ 'ಇಮೇಜ್'ಅನ್ನು ಇನ್ನಷ್ಟು ಎತ್ತರಿಸಲು 'ನಾಗರಹಾವು' ಚಿತ್ರವು ಕಾರಣವೆನಿಸಿದುದು ವಾಸ್ತವ.

'ನಾಗರಹಾವು', 'ಹಂಸಗೀತೆ'ಗಳ ನಂತರ ಹಲವಾರು ಸಾಮಾಜಿಕ ಚಿತ್ರಗಳು ದುರ್ಗದ ಸ್ಮಾರಕಗಳ ಹಿನ್ನೆಲೆಯಲ್ಲಿ ಚಿತ್ರಿತಗೊಂಡವಾದರೂ, ದುರ್ಗದ ಹಿನ್ನೆಲೆಯಲ್ಲಿ ಪೂರ್ಣಪ್ರಮಾಣದವಾದ ಚಿತ್ರ ಬರಲು ಚಿತ್ರದುರ್ಗದ ಜನತೆ ಮೂರುವರೆ ದಶಕಗಳ ಕಾಲ ಕಾಯಬೇಕಾಯಿತು. 2006ರಲ್ಲಿ ಬಿ.ಎಲ್.ವೇಣು ರವರಿಂದ ರಚಿತವಾದ ಐತಿಹಾಸಿಕ ಕಾದಂಬರಿ 'ಕಲ್ಲರಳಿ ಹೂವಾಗಿ', ಅದೇ ಹೆಸರಿನಲ್ಲಿ ಟಿ.ಎಸ್.ನಾಗಭರಣ ರವರ ನಿರ್ದೇಶನದಲ್ಲಿ ಚಿತ್ರಿತವಾಯಿತು. ಅದೇ ವರ್ಷ ನಾಡಿನಾದ್ಯಂತ ಬಿಡುಗಡೆಯಾಗಿ ಜಯಭೇರಿ ಬಾರಿಸಿದುದು ಇತಿಹಾಸ

ಚಂದ್ರವಳ್ಳಿ



ಚಿತ್ರದುರ್ಗದ ವಾಯುವ್ಯ ಬೆಟ್ಟದ ತಪ್ಪಲಿನ ಪ್ರದೇಶವೇ ‘ಚಂದ್ರವಳ್ಳಿ’. ಅಂಕಲಿಮಠದಿಂದ ಆಂಜನೇಯಗುಡಿವರೆಗೂ ಉತ್ತರ-ದಕ್ಷಿಣಾದಿಯೋಪಾದಿಯಲ್ಲಿ ಈ ಪ್ರದೇಶ ಹಬ್ಬಿದೆ. ಈ ಪ್ರದೇಶದಲ್ಲಿ ಉತ್ಖನನ, ಭೂಸಂಶೋಧನೆ ನಡೆಸಿದಾಗ ಈ ಪ್ರದೇಶದಲ್ಲಿ ದೊರೆತ ವಸ್ತುಗಳ ನಾಣ್ಯಗಳು, ಕಟ್ಟಡದ ಅವಶೇಷಗಳಿಂದ ಇಲ್ಲಿ ಚಂದ್ರವಳ್ಳಿ (ಚಂದನಾವತಿ) ಎಂಬ ದೊಡ್ಡ ನಗರವಿದ್ದುದಾಗಿಯೂ, ಪ್ರಾಚೀನ ಸಂಸ್ಕೃತಿಯ ತಾಣವಾಗಿದ್ದಿತೆಂದು, ಈ ಸಂಸ್ಕೃತಿ ಹರಪ್ಪ, ಮೆಹೊಂಜೋದಾರ ಸಂಸ್ಕೃತಿಗೆ ಸಮಾನವೆಂದು ಸಂಶೋಧಕರ ಅಭಿಪ್ರಾಯ.
ಇಲ್ಲಿ ದೊರೆತ ಸಾವಿರಕ್ಕೂ ಮಿಗಿಲಾದ ವಸ್ತುಗಳಿಂದ ಕ್ರಿಸ್ತ ಪೂರ್ವದಲ್ಲಿಯೇ ಚಂದ್ರವಳ್ಳಿ ಪ್ರದೇಶವು ನಾಗರೀಕವಾಗಿದ್ದಿತೆಂದು ತಿಳಿದು ಬಂದಿದೆ. ಇಲ್ಲಿ ಕ್ರಿ.ಪೂ. 139ರಲ್ಲಿ ರ್ಹ್ಯಾ ಉಂಗಿಯ ಹಿತ್ತಾಳೆ ನಾಣ್ಯ, ರೋಮ್ ಚಕ್ರವರ್ತಿಯ ಅಗಸ್ಟಸ್ ನ ಬೆಳ್ಳಿಯ ನಾಣ್ಯ, ವೀರ ಬಲ್ಲಾಳನ ನಾಣ್ಯ ದೊರೆತಿವೆ. ಇಲ್ಲಿ ದೊರೆಕಿರುವ ಶಾತವಾಹನರ ನಾಣ್ಯಗಳ ಮೇಲೆ ‘ಪುಲುಮಾಯಿ’, ‘ಮಹಾರಥಿ’ ಮುಂತಾದವರ ಹೆಸರುಗಳಿವೆ. ಹಲವಾರು ಆಧಾರಗಳಿಂದ ಮೌರ್ಯ ಚಕ್ರವರ್ತಿ ಅಶೋಕನ ಕಾಲದಿಂದ ಕದಂಬರ ಮಯೂರವರ್ಮನ ಕಾಲದವರೆಗೂ ಈ ಪ್ರದೇಶದಲ್ಲಿ ಬೌದ್ಧ ಮತ ಪ್ರಚಾರದಲ್ಲಿತೆಂದು ತಿಳಿಯಬಹುದಾಗಿದೆ.
ಇಲ್ಲಿಯ ಭೈರವೇಶ್ವರ ದೇವಾಲಯದ ಬಳಿಯ ಮಯೂರವರ್ಮನ ಶಾಸನದಿಂದ ಈ ಪ್ರದೇಶದಲ್ಲಿ ಆಗಲೇ ಇದ್ದ ‘ತಟಾಕ(ಕೆರೆ)’ಯನ್ನು ದುರಸ್ಥಿ ಮಾಡಿಸಿದನೆಂದು ತಿಳಿದು ಬರುತ್ತದೆ. ಈಗ ಅದೇ ಪ್ರದೇಶದಲ್ಲಿ ಸರ್ಕಾರವು ಸುಂದರವಾದ ಕೆರೆಯನ್ನು ಕಟ್ಟಿಸಿ ನೆನಪನ್ನು ಚಿರಸ್ಥಾಯಿಯಾಗಿಸಿದ್ದಾರೆ. ಇದೇ ಚಂದ್ರವಳ್ಳಿ ಪ್ರದೇಶದಲ್ಲಿ ಶ್ರೀ ಹುಲಿಗೊಂದಿ ಭೈರವೇಶ್ವರ ದೇವಾಲಯವು, ಚಂದ್ರವಳ್ಳಿ ಕೆರೆ, ಅಂಕಲಿಮಠ, ಪಂಚಲಿಂಗೇಶ್ವರ ಗುಹಾಂತರ ದೇವಾಲಯ, ಧವಳಪ್ಪನ ಗುಡ್ಡ, ಬಾಲಾಂಜನೇಯ ಪ್ರೇಕ್ಷಣೀಯ ಸ್ಥಳಗಳಾಗಿವೆ.

more:>> www.chitharadurga.com

ತ.ರಾ.ಸು.


ಬರೆದಂತೆ ಬದುಕಿದವರು ವಿರಳ, ಬರೆದೇ ಬದುಕಿದವರು ಇನ್ನೂ ವಿರಳ. ಆದರೆ ತ.ರಾ.ಸು. ರವರು ಬರೆದಂತೆ ಬದುಕಿದವರು. ಬರೆದೇ ಬದುಕಿದವರು. ಸುಮಾರು 68 ಕೃತಿಗಳನ್ನು ತಮ್ಮ ಜೀವಿತಾವಧಿಯಲ್ಲಿ ರಚಿಸಿದ ನಂತರವೂ ಬರವಣಿಗೆಗಿಂತ ಬದುಕೇ ದೊಡ್ಡದು ಎಂದು ನಂಬಿಕೊಂಡವರು. ಗಂಡು ಮೆಟ್ಟಿನ ನಾಡಾದ ಚಿತ್ರದುರ್ಗ ಜಿಲ್ಲೆಯು ಕೇವಲ ಗತಕಾಲದ ಇತಿಹಾಸ ಪುಟಗಳಲ್ಲಿ ಅಷ್ಟೇ ಉಳಿಯದೇ ಸಾಹಿತ್ಯ ಲೋಕಕ್ಕೂ, ಅನರ್ಘ್ಯ ರತ್ನಗಳನ್ನು ಕಾಣಿಕೆಯಾಗಿ ನೀಡಿದೆ. ಅವರಲ್ಲಿ ಪ್ರಮುಖರೆಂದರೆ ಕನ್ನಡದ ಅಶ್ವಿನಿ ದೇವತೆಗಳಲ್ಲಿ ಒಬ್ಬರೆಂದೇ ಹೆಸರಾದ ಶ್ರೀ ಟಿ.ಎಸ್.ವೆಂಕಣ್ಣಯ್ಯ, ತ.ಸು.ಶಾಮರಾಯರು, ಆಶುಕವಿಗಳಾದ ಶ್ರೀ ಬೆಳಗೆರೆ ಚಂದ್ರಶೇಖರಶಾಸ್ತ್ರಿಗಳು, ತ.ರಾ.ಸು. ಮುಂತಾದವರನ್ನು ಹೆಸರಿಸಬಹುದು. ತ.ರಾ.ಸು. ರವರ ಜನನ 1920 ನೇ ಏಪ್ರಿಲ್ 21 ರಂದು ಹರಿಹರ ತಾಲ್ಲೂಕಿನ ಮಲೇಬೆನ್ನೂರಿನಲ್ಲಿ ಜನಿಸಿದರು. ಇವರ ತಂದೆ ರಾಮಸ್ವಾಮಯ್ಯ, ತಳಕು ಗ್ರಾಮದ ಆಶುಕವಿಗಳು. ದೊಡ್ಡಸುಬ್ಬಣ್ಣನವರ ಎರಡನೇ ಮಗ; ತ.ರಾ.ಸು. ರವರ ತಂದೆ. ಹರಿಹರದಲ್ಲಿ ಅಮಲ್ದಾರರಾಗಿದ್ದವರು. ತಾಯಿ ಸೀತಮ್ಮನವರು ಸರಳ ಸಜ್ಜನಿಕೆಯ ಸ್ವಭಾವದ ಹೆಣ್ಣುಮಗಳು. ದೊಡ್ಡಪ್ಪ ಟಿ.ಎಸ್.ವೆಂಕಣ್ಣಯ್ಯ, ತ.ಸು.ಶಾಮರಾಯರು ಇವರ ಚಿಕ್ಕಪ್ಪ. ಹೀಗಾಗಿ ಇವರ ಮನೆಯ ಪರಿಸರದಲ್ಲೂ, ಇವರ ವಂಶವಾಹಿಣಿಯಲ್ಲೂ ಸಾಹಿತ್ಯದ ಒಲವು ತಾನಾಗಿಯೇ ಹರಿದು ಬಂದಿತ್ತು.
ಖ್ಯಾತ ಸಂಶೋಧಕರಾದ ಹುಲ್ಲೂರು ಶ್ರೀನಿವಾಸ ಜೋಯಿಸರ ಚಿತ್ರದುರ್ಗದ ಬಗ್ಗೆ ಹೇಳುತ್ತಿದ್ದ ಕಥೆಗಳೇ, ಮುಂದೊಂದು ದಿನ “ದುರ್ಗಾಸ್ತಮಾನ”ದಂತಹ ಮಹಾನ್ ಐತಿಹಾಸಿಕ ಕಾದಂಬರಿಗೆ ಪ್ರೇರಣೆಯಾಯಿತು. ಅದಕ್ಕೂ ಮುಂಚೆ ಒಮ್ಮೆ ವೆಂಕಣ್ಣಯ್ಯನವರು ವಾಚಾಳಿಯಾಗಿದ್ದ ತ.ರಾ.ಸು. ರವರಿಗೆ “ಇಷ್ಟೆಲ್ಲಾ ಮಾತಾನಾಡುವಿಯೆಲ್ಲಾ, ಇದನ್ನೇ ಬರೆಯುವ ಸಾಮರ್ಥ್ಯ ನಿನ್ನಲ್ಲಿದೆಯೇ? ಒಂದು ಕಥೆ ನಿನ್ನ ಕೈಯಲ್ಲಿ ಬರೆಯಲಾದೀತೆ?” ಎಂದು ಸವಾಲು ಹಾಕಿದಾಗ ತ.ರಾ.ಸು. ರವರು ಸಂಜೆಯೊಳಗೆ ಒಂದು ಕಥೆ ಬರೆದು ಹತ್ತು ರೂಪಾಯಿ ಗಿಟ್ಟಿಸಿಕೊಂಡರು. ಆ ಕಥೆಯ ಹೆಸರು “ಪುಟ್ಟನ ಚೆಂಡು”. (ಅವರ ಕೊನೆಯ ಐತಿಹಾಸಿಕ ಕಾದಂಬರಿ ‘ದುರ್ಗಾಸ್ತಮಾನ’ವನ್ನು ಟಿ.ಎಸ್.ವೆಂಕಣ್ಣಯ್ಯನವರಿಗೆ ಅರ್ಪಿಸಿದ್ದಾರೆ.) ರಾಮಸ್ವಾಮಯ್ಯನವರ ಮಿತ್ರನಾಗಿದ್ದ ಎಸ್.ನಿಜಲಿಂಗಪ್ಪನವರು ಪ್ರೀತಿಯಿಂದ ತ.ರಾ.ಸು.ರವರನ್ನು ‘ಧ್ರುವ’ ಎಂದು ಕರೆಯುತ್ತಿದ್ದರು. ಗಾಂಧೀಜಿಯವರ ಚಳುವಳಿಯು ದೇಶಾದಾಂತ್ಯ ಸಂಚಲನ ಉಂಟುಮಾಡಿತ್ತು.1937ರ ಸುಮಾರಿನಲ್ಲಿ ಚಿತ್ರದುರ್ಗದಲ್ಲಿ ಧ್ವಜ ಸತ್ಯಗ್ರಹ ನಡೆದು ಜಿಲ್ಲೆಯ ಹೊಸದುರ್ಗ ಪಟ್ಟಣವನ್ನು ಕೇಂದ್ರವನ್ನಾಗಿಸಿಕೊಂಡು ಮಿತ್ರರೊಡನೆ ಹಳ್ಳಿ-ಹಳ್ಳಿಗಳಲ್ಲಿ ಸಂಚರಿಸಿ ಕ್ರಾಂತಿ ಗೀತೆಗಳನ್ನು ಹಾಡುತ್ತ.ಭಾಷಣ ಮಾಡುತ್ತಿದ್ದರು. ಬಾಗೂರು ಎಂಬ ಹಳ್ಳಿಯಲ್ಲಿ ಭಾಷಣ ಮಾಡುತ್ತಿದ್ದಾಗ ತ.ರಾ.ಸು. ದಸ್ತಗಿರಿಯಾದರು.ಆಗ ಅವರಿಗೆ 17ರ ಪ್ರಾಯ!
ಚಿತ್ರದುರ್ಗದಲ್ಲಿದ್ದರೆ ಮಗ ಚಳುವಳಿಗಳ ಹಿಂದೆ ಹೋಗಬಹುದೆಂದು ರಾಮಸ್ವಾಮಯ್ಯನವರು ತ.ರಾ.ಸು. ರವರನ್ನು ಬೆಂಗಳೂರಿನ ನ್ಯಾಷನಲ್ ಹೈಸ್ಕೂಲಿಗೆ ಸೇರಿಸಿದರು. ಎಸ್.ಎಸ್.ಎಲ್.ಸಿ. ಮುಗಿಸಿಕೊಂಡ ತ.ರಾ.ಸು. ಶಿವಮೊಗ್ಗದಲ್ಲಿ ಕಾಲೇಜು ಸೇರಿ, ಕಾಲೇಜಿನ ಪ್ರಬಂಧ ಸ್ಪರ್ಧೆಯಲ್ಲಿ ಬಿ.ಎಂ.ಶ್ರೀ.ಯವರಿಂದ ಬಹುಮಾನ ಸ್ವೀಕರಿಸಿದರು. ಶಿವಮೊಗ್ಗದ ಕಾಲೇಜಿನಲ್ಲಿ ತ.ರಾ.ಸು. ಓದಿದ್ದು ಒಂದೇ ವರ್ಷ. ಜೂನಿಯರ್ ಇಂಟರ್ ಮೀಡಿಯಟ್ ಪರೀಕ್ಷೆಯ ನಂತರ ಸೀನಿಯರ್ ಇಂಟರ್ ಓದಲು ತುಮಕೂರಿಗೆ ಹೋದರು. 1942ರ ಆಗಸ್ಟ್ 9 ರಂದು ಕ್ವಿಟ್ ಇಂಡಿಯಾ ಚಳುವಳಿ (ಚಲೇಜಾವ್ ಚಳುವಳಿ) ಆರಂಭವಾಗುತ್ತಿದ್ದಂತೆ ಬ್ರಿಟೀಷರು ಗಾಂಧೀಜಿ ಮೊದಲಾದ ರಾಷ್ಟ್ರನಾಯಕರನ್ನು ಬಂಧಿಸಿದರು. ಇದರಿಂದ ಇಡೀ ಶಾಲಾ ಕಾಲೇಜುಗಳಿಗೆ ಬಹಿಷ್ಕಾರ ಹಾಕಲಾಯಿತು. ವಿದೇಶಿ ವಸ್ತುಗಳ ದಹನ ನಡೆಸಲಾಯಿತು. ಇದಕ್ಕೆ ತ.ರಾ.ಸು. ಮತ್ತು ಇವರ ಮಿತ್ರರೂ ಹೊರತಾಗಿರಲಿಲ್ಲ. ಒಮ್ಮೆ ಈ ತಂಡ ರೈಲು ಹಳಿಗಳನ್ನು ತಪ್ಪಿಸಿ ಸೇತುವೆಯನ್ನು ಉರುಳಿಸುವ ಏರ್ಪಾಡು ಮಾಡಿಕೊಂಡಿದ್ದಾಗ ಅದು ಪೋಲಿಸರ ಗಮನಕ್ಕೆ ಬಂದು ದಸ್ತಗಿರಿಯಾದರು. ಸೆರೆಮನೆಯಲ್ಲಿದ್ದರೂ ಇವರ ಚಳುವಳಿ ಮುಂದುವರೆದಿತ್ತು. 1942ರ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾದರು. ಜೈಲಿನಿಂದ ಬಿಡುಗಡೆಯೇನೋ ಆದರು. ಆದರೆ ಗಾಂಧೀಜಿಯವರು ಬಿಡುಗಡೆಯಾದ ಹೊರತು ಹಾಗೂ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಹೊರತು ಪುನಃ ಕಾಲೇಜು ಮೆಟ್ಟಿಲು ಹತ್ತುವುದಿಲ್ಲ ಎಂದು ನಿರ್ಧರಿಸಿದರು.

ಬುಧವಾರ, ಜನವರಿ 28, 2009

ದುರ್ಗದ ಜನತೆಗೊಂದು ಕಹಿಸುದ್ದಿ


ದುರ್ಗದ ಜನರಲ್ಲಿ ಅತಿ ಉತ್ಸುಕತೆ, ಸಂಭ್ರಮದ ವಾತಾವರಣ ಮೂಡಿದ್ದು ನಿಜ. ಆದರೆ ಇವರಿಗೆ ಕಾದಿದೆ ಕಹಿಸುದ್ದಿ. ಅದೇನೆಂದರೆ ಭಾರತದ ಮಾಜಿ ರಾಷ್ಟ್ರಪತಿಯಾದ ಶ್ರೀ ವೆಂಕಟರಾಮನ್ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 7 ದಿನಗಳ ಶೋಕಾಚರಣೆ ಆಚರಿಸಲು ಸರ್ಕಾರ ಸುತ್ತೋಲೆ ಹೊರಡಿಸಿದೆ. ಪ್ರಯುಕ್ತ ಜಿಲ್ಲೆಯಲ್ಲಿ ಜನವರಿ 29 ರಿಂದ ಪ್ರಾರಂಭಗೊಳ್ಳಬೇಕಿದ್ದ ಅಮೃತ ಸಮ್ಮೇಳನವು ಫೆಬ್ರವರಿ 4, 5, 6 ಮತ್ತು 7ನೇ ತಾರೀಖಿಗೆ ಮುಂದೂಡಲಾಗಿರುತ್ತದೆ.


ರಾಜ್ಯದಲ್ಲಿ ಆಚರಿಸುತ್ತಿರುವ ಶೋಕಾಚರಣೆಯ ಹಿನ್ನೆಲೆಯಲ್ಲಿ ಸಮ್ಮೇಳನದಂತಹ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ಆಚರಿಸಲು ಸಾಧ್ಯವಿಲ್ಲ. ಆದ್ದರಿಂದ ಈಗಾಗಲೇ ನಿಗಧಿಪಡಿಸಿರುವ ಸಮ್ಮೇಳನದ ಕಾರ್ಯಕ್ರಮಗಳ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲದೇ, ಬರುವ ಫೆಬ್ರವರಿ 4, 5, 6 ಮತ್ತು 7ರಂದು ಸಮ್ಮೇಳನವು ಅದ್ಧೂರಿಯಾಗಿ ನಡೆಯಲಿದೆ ಎಂದು ರಾಜ್ಯ ಕ.ಸಾ.ಪ. ಅಧ್ಯಕ್ಷರಾದ ಶ್ರೀ ನಲ್ಲೂರು ಪ್ರಸಾದ್, ಸ್ವಾಗತ ಸಮಿತಿಯ ಮಹಾಪೋಷಕರಾಗಿರುವ ಶ್ರೀ ಶಿವಮೂರ್ತಿ ಶರಣರು, ಜಿಲ್ಲಾಧಿಕಾರಿಗಳಾದ ಶ್ರೀ ಅಮ್ಲಾನ್ ಆದಿತ್ಯ ಬಿಸ್ವಾಸ್, ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾದ ಶ್ರೀ ಕೆ.ಎಂ.ವೀರೇಶ್ ರವರು ಮಂಗಳವಾರ ರಾತ್ರಿ ಕರೆದಿದ್ದ ತುರ್ತು ಸಭೆಯಲ್ಲಿ ವಿಷಯವನ್ನು ಚರ್ಚಿಸಲಾಯಿತು.


ದುರ್ಗದ ಜನತೆಗೆ ನಿಜಕ್ಕೂ ನಿರಾಶೆ. ಆದರೆ ಒಂದೆರಡು ದಿನಗಳ ನಂತರ ಬರುವ ಸಮ್ಮೇಳನದ ಸಂಭ್ರಮದ ನಿರಾಶೆಯ ಮೇಲೆ ತಣ್ಣೀರೆರಚಿದೆ. ತಡವಾದರೂ ಸೈ, ಅದೇ ಉತ್ಸಾಹ, ಸಂಭ್ರಮ, ಸಂತಸದಿಂದ ಅಮೃತ ಸಮ್ಮೇಳನದಲ್ಲಿ ಪಾಲ್ಗೊಳ್ಳೋಣ... ಜೈ ಕರ್ನಾಟಕ ಮಾತೆ.

ಸಮ್ಮೇಳನಾಧ್ಯರ ಮಾತು


ಸೋಮವಾರ, ಜನವರಿ 26, 2009

ದುರ್ಗದ ಸಾಹಿತಿಗಳು.- 1

ಬಿ.ತಿಪ್ಪೇರುದ್ರಪ್ಪ
ಬದುಕಿನ ವ್ಯಂಗ್ಯ ಸಮಾಜದ ಓರೆಕೋರೆಗಳನ್ನು ತಮ್ಮ ಹಾಸ್ಯ, ವಿಡಂಬನೆಯ ಲೇಖನಗಳಿಂದ ಮೂಲಕ ಮನಮುಟ್ಟುವಂತೆ ಚಿತ್ರಿಸಿರುವ ಬಿ.ತಿಪ್ಪೇರುದ್ರಪ್ಪ, ಚಿತ್ರದುರ್ಗದ ಹೆಮ್ಮೆಯ ಹಾಸ್ಯ ಲೇಖಕರಷ್ಟೇ ಅಲ್ಲ, ಮಕ್ಕಳ ಸಾಹಿತಿಯೂ ಹೌದು. ಧಾರವಾಡ ಕರ್ನಾಟಕ ವಿವಿಯಿಂದ ರಾಜ್ಯಶಾಸ್ತ್ರದಲ್ಲಿ ಎಂ.ಎ. ಪದವಿ. 1968ರಲ್ಲಿ ಚಿಕ್ಕಮಗಳೂರು ತರಳಬಾಳು ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು, ಹರಪನಹಳ್ಳಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಮಕ್ಕಳಿಗಾಗಿ ಕತೆ, ಕವನ ಬರೆದಿರುವ ತಿಪ್ಪೇರುದ್ರಪ್ಪ ಅವರ ಕವನವೊಂದನ್ನು ಮಹಾರಾಷ್ಟ್ರದ ಕನ್ನಡ ಭಾಷಾ ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ. ನಿಂಗಣ್ಣನ ಎಲೆಕ್ಷನ್ ಡ್ಯೂಟಿ, 30 ವಿಡಂಬನೆಗಳು ಎಂಬ ಹಾಸ್ಯ ಲೇಖನ ಸಂಕಲನ, ಕಾಡಿನ ಕ್ರಿಕೆಟ್, ಪುಟ್ಟನ ಕಾನ್ವೆಂಟ್, ಹಕ್ಕಿಗಳು ಎಂಬ ಮಕ್ಕಳ ಕವನ ಸಂಕಲನ, ಬಡವ ಬದುಕಿದ ಎಂಬ ನಾಟಕ ಹಾಗೂ ದ್ವಿತಿಯ ಪಿ.ಯು.ಸಿ. ತರಗತಿಗಾಗಿ ರಾಜ್ಯಶಾಸ್ತ್ರ ಪಠ್ಯಪುಸ್ತಕ ರಚಿಸಿ ಪ್ರಕಟಿಸಿದ್ದಾರೆ.
ರಾಘವೇಂದ್ರ ಪಾಟೀಲ
ರಾಘವೇಂದ್ರ ಪಾಟೀಲ ಎಂದಾಕ್ಷಣ 'ಸಂವಾದ' ನೆನಪಾಗಲೆಬೇಕು. ಈ ತ್ರೈಮಾಸಿಕದ ಮೂಲಕ ಸಾಹಿತ್ಯ ಸಂವಾದಕ್ಕೆ ವೇದಿಕೆ ಒದಗಿಸಿಕೊಟ್ಟವರು ಪಾಟೀಲರು. ಜಿಲ್ಲೆಯ ನಾಡಿನ ಸಾಹಿತ್ಯ ವಲಯದಲ್ಲಿ ಪರಿಚಿತವಾಗಿರುವ ಪಾಟೀಲರು ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ಪದವಿಪೂರ್ವ ಕಾಲೇಜು ಉಪನ್ಯಾಸಕ. ಕಥನಕಲೆಯಲ್ಲಿ ಪಳಗಿದ ಕೈ. ಕಥಾಲೋಕ ಅವರ ಆದ್ಯತೆಯ ಕ್ಷೇತ್ರ. ಇವರ ಮೊದಲ ಕಥೆ 'ಒಡಪುಗಳು' 1977ರಲ್ಲಿ ಉದಯವಾಣಿ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದೆ. ಒಡಪುಗಳು, ಪ್ರತಿಮೆಗಳು, ದೇಶಗತಿ, ಕಳಕೊಂಡವರು, 'ಮಾಯಿಯ ಮುಖಗಳು' ಎಂಬ ಕಥಾಸಂಕಲನ, ಬಾಳವ್ವನ ಕನಸು ಕಾದಂಬರಿ ಹಾಗೂ 'ವಾಗ್ವಾದ' ವಿಮರ್ಶಾ ಲೇಖನ, ಸಂಕಲನ ಪ್ರಕಟಿಸಿದ್ದಾರೆ.
ಚದುರಂಗ ಸ್ಮಾರಕ ಪ್ರಶಸ್ತಿ, ಆರ್ಯಭಟ, ಕಾರಂತ, ಸಿರಿಗನ್ನಡ, ಡಾ. ಬಸವರಾಜ ಪಟ್ಟೇದ ಸ್ಮಾರಕ ಪ್ರಶಸ್ತಿ ಪಡೆದಿರುವ ಪಾಟೀಲರ ಮಡಿಲಿಗೆ ತೇರು ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಸಿಕ್ಕಿದೆ. 'ಸಂಕೀರ್ಣ', 'ಕೃಷ್ಣ ಆಲನಹಳ್ಳಿ ಸ್ಮರಣ ಸಂಚಿಕೆ', 'ಮಾಸ್ತಿ ಸಾಹಿತ್ಯ' ಸಮಗ್ರ ದರ್ಶನ ಹಾಗೂ ನವ ಮೇಘ ರೂಪಿ ಎಂಬ ಕೃತಿಗಳನ್ನು ರಚಿಸಿದ್ದಾರೆ.
- ವಿ.ಕ. ಚಿತ್ರದುರ್ಗ, 25.01.2009

ಕಲ್ಲರಳಿ ಹೂವಾಗಿ... : ಚಲನಚಿತ್ರ

ಬಿ.ಎಲ್.ವೇಣುರವರ 'ಕಲ್ಲರಳಿ ಹೂವಾಗಿ' ಕಾದಂಬರಿ ಆಧಾರಿತ ಟಿ.ಎಸ್.ನಾಗಾಭರಣ ರವರ 'ಕಲ್ಲರಳಿ ಹೂವಾಗಿ' ಚಿತ್ರದ ಗೀತೆಗಳು




ಈ ಭೂಮಿ, ಈ ನಾಡು - ಕಲ್ಲರಳಿ ಹೂವಾಗಿ





ಕಲ್ಲರಳಿ... ಹೂವಾಗಿ.... - ಕಲ್ಲರಳಿ ಹೂವಾಗಿ





ನಿನ್ನ ನೆನಪಿನಲಿ.. ನನ್ನ ಬದುಕಿರಲಿ.. - ಕಲ್ಲರಳಿ ಹೂವಾಗಿ




ನನ್ನ ನೆಚ್ಚಿನ ಕೋಟೆಯ - ಕಲ್ಲರಳಿ ಹೂವಾಗಿ

"ನಾಗರಹಾವು" ಚಲನಚಿತ್ರದಲ್ಲಿ "ಚಿತ್ರದುರ್ಗ"



ಕನ್ನಡ ನಾಡಿನ ವೀರರಮಣಿಯ - ನಾಗರಹಾವು.




ಹಾವಿನ ದ್ವೇಷ - ನಾಗರಹಾವು




ಬಾರೆ.. ಬಾರೇ... ಚಂದದ ಚೆಲುವಿನ ತಾರೆ.. - ನಾಗರಹಾವು



ಸಂಗಮ ಸಂಗಮ - ನಾಗರಹಾವು

ಶುಕ್ರವಾರ, ಜನವರಿ 23, 2009

ನಮ್ಮೂರ ಗಾಂಧಿ..!



ಬೆಳಗೆರೆ ಕೃಷ್ಣಶಾಸ್ತ್ರಿಯೆಂದೊಡನೆ ನಮ್ಮ ಸೀಮೆಯ ಜನಮನಗಳಲ್ಲಿ ಥಟ್ಟನೆ ಮೂಡುವ ಚಿತ್ರ; ನಿಷ್ಕಲ್ಮಷ ನಗುವಿನ ಶ್ವೇತಧಾರಿಯಾದ ತೊಂಬತ್ತರ ಯುವಕನ ಚಿತ್ರ ! ತಮ್ಮ ಈ ಇಳಿವಯಸ್ಸಿನಲ್ಲಿಯೂ ಪಾದರಸದಂತೆ ಓಡಾಡಿಕೊಂಡು ಸಾಮಾಜಿಕ, ಆಧ್ಯಾತ್ಮಿಕ, ಜಾನಪದ ಹಾಗು ಸಾಹಿತ್ಯ ಕ್ಷೇತ್ರಗಳಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿರುವ ಶಾಸ್ತ್ರಿಗಳು ಇಂದಿನ ಯುವಕರಿಗೆ ಆದರ್ಶಪ್ರಾಯರು.ಬೆಳಗೆರೆ ಕೃಷ್ಣಶಾಸ್ತ್ರಿಗಳು 22ರ ಮೇ 1918 ಬೆಳಗೆರೆಯಲ್ಲಿ ಜನಿಸಿದರು. ಇವರ ತಂದೆಯಾದಂತ ಶ್ರೀ ಚಂದ್ರಶೇಖರ ಶಾಸ್ತ್ರಿಗಳು ಆಶುಕವಿಯೂ, ಸಂಸ್ಕೃತ ವಿದ್ವಾಂಸರು, ವೇದ ವಿದ್ಯ ಪಾರಂಗತರಾಗಿದ್ದರು ಆ ವಿದ್ಯೆಯನ್ನು ಹೊಟ್ಟೆಪಾಡಿಗೆ ಬಳಿಸಿಕೊಳ್ಳಬಾರದು! ಎಂಬ ಮನೋಭಾವದ ವಿಶಿಷ್ಠ ವ್ಯಕ್ತಿ! ಇಂಥ ಸಂಧರ್ಭದಲ್ಲಿ, ಇವರ ತಾಯಿ ಶ್ರೀಮತಿ ಅನ್ನಪೂರ್ಣಮ್ಮನವರು ಮನೆತನದ ವಿದ್ಯೆ ಆಯುರ್ವೇದದಿಂದ ಮನೆವೈದ್ಯ ಮಾಡಿ ಇಡಿ ಮನೆಯ ನಿರ್ವಹಣೆಯನ್ನು ನಿಭಾಯಿಸಿದರು. ಕ್ಷೀರಸಾಗರ ಕಾವ್ಯನಾಮ ಖ್ಯಾತಿಯ ನಾಟಕಕಾರ ಹಾಗು ಗಣಿತ ಪ್ರಾಧ್ಯಾಪಕರಾದ ಸೀತಾರಾಮ ಶಾಸ್ತ್ರಿಗಳು ಇವರ ಹಿರಿಯ ಸಹೊದರರು. ನವೋದಯ ಸಾಹಿತ್ಯದ ಪ್ರಥಮ ಕವಿಯತ್ರಿಯೆಂದೆ ಖ್ಯಾತರಾದ ಬೆಳಗೆರೆ ಜಾನಕಮ್ಮ ಹಿರಿಯ ಸಹೊದರಿ ಹಾಗು ಮತ್ತೋರ್ವ ಕತೆಗಾರ್ತಿಯಾದಂತ ಬೆಳಗೆರೆ ಪಾರ್ವತಮ್ಮನವರು ಇವರ ಕಿರಿಯ ಸಹೊದರಿ. ಹೀಗೆ ಸಾಹಿತ್ಯಿಕ ಕುಟುಂಬದಿಂದ ಬಂದ ಕೃಷ್ಣಶಾಸ್ತ್ರಿಗಳು, ಸಹಜವಾಗಿಯೇ ಸಾಹಿತ್ಯದೆಡೆಗೆ ಆಕರ್ಷಿತರಾದರ ಕೃಷ್ಣಶಾಸ್ತ್ರಿಗಳು ಮುಂದೆ ಹಲವಾರು ಅಪರೂಪದ ಕೃತಿಗಳನ್ನು ಸಾರಸತ್ವಲೋಕಕ್ಕೆ ಅರ್ಪಸಿದರು.'ತುಂಬಿ' ಇವರ ಪ್ರಥಮ ಕವನ ಸಂಕಲನವೆನ್ನ ಬಹುದು. ಇವರು ಬರೆದ ನಾಟಕಗಳೆಂದರೆ ಹಳ್ಳಿಚಿತ್ರ, ಹಳ್ಳಿಮೇಷ್ಟ್ರು, ಆಕಸ್ಮಿಕ, ಪಾಶುಪತಾಸ್ತ್ರ, ಏಕಲವ್ಯ, ಸೋಹ್ರಾಬ್ - ರುಸ್ತುಂ, ತೆನಾಲಿ ರಾಮ, ವಿಚಿತ್ರ ಸಾಮ್ರಾಜ್ಯಂ, ಅಲ್ಲಾವುದ್ದೀನ್, ಹಿಂಗೂ ಮಾಡಿ ನೋಡ್ರೀ. ಆಕಾಶದಗಲ ನಗುವಿನ ಅವಧೂತ, ಸಾಹಿಗಳ ಸ್ಮೃತಿ (ಬೇಂದ್ರ, ವಿ.ಸೀ.,ಡಿ.ವಿ.ಜಿ.,ದೇವುಡು ಅವರೊಂದಿಗಿನ ನೆನಪುಗಳು), ಮರೆಯಾಲಾದೀತ್ತೇ?, ಎಲೆ ಮರೆಯ ಆಲರು (ನಿರೂಪಣೆ: ನ.ರವಿಕುಮಾರ್) ಇವರ ಕೃತಿಗಳು . ಡಬ್ಲ್ಯ.ಸಿ.ಸ್ಯಾಂಡರ್ಸ್ರ 'ಇನ್ನರ್ ವಾಯ್ಸ್' ಕೃತಿಯನ್ನು 'ಅಂತರ್ ಧ್ವನಿ'ಯಾಗಿ ಕನ್ನಡಕ್ಕೆ ಭಾವಾನುವಾದ ಮಾಡಿದ್ದಾರೆ.ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಹೈಸ್ಕೂಲ್ ಓದುತ್ತಿರುವಾಗ ಮಹಾತ್ಮ ಗಾಂಧಿಯವರ ಗಾಢಪ್ರಭಾವಕ್ಕೆ ಒಳಗಾಗಿ ಸ್ವಾತಂತ್ರ ಚಳುವಳಿಯಲ್ಲಿಯೂ ಭಾಗವಹಿಸಿದರು. 1926 ರಲ್ಲಿ ಗಾಂಧಿಜಿಯವರು ಮೈಸೂರು ಸಂಸ್ಥಾನದ ಅತಿಥಿಯಾಗಿ ಬಂದಾಗ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದ್ದಾರೆ. ಗಾಂಧಿವಾದದ ಅಪ್ಪಟ ಅಭಿಮಾನಿಯಾದ ಇವರು ಸಂಕಲ್ಪದಂತೆ ಇಂದಿಗೂ ಖಾದಿಧಾರಿಯಾಗಿಯೆ ಉಳಿದಿದ್ದಾರೆ. ಆಚಾರ್ಯ ವಿನೋಬಾ ಅವರ ಭೂದಾನ ಚಳುವಳಿಯಲ್ಲಿಯೂ ಭಾಗವಹಿಸಿದ್ದಾರೆ.ಮೈಸೂರುನಲ್ಲಿ ಬಿ.ಇಡಿ. ಪದವಿಯನ್ನು ಮುಗಿಸಿದ ನಂತರ ಹೆಗ್ಗೆರೆ, ಮೀರಾಸಾಬಿಹಳ್ಳಿ, ದೇವನೂರು, ಚಿತ್ರದುರ್ಗ,ಕಳಸಾ ಮುಂತಾದ ಕಡೆಗಳಲ್ಲಿ ಉಪಾದ್ಯಾಯ ವೃತ್ತಿಯನ್ನು ನಿರ್ವಹಿಸಿದ್ದಾರೆ. ಚಳ್ಳಕೆರೆ ತಾಲ್ಲೂಕಿನ ಮೀರಾಸಾಬಿಹಳ್ಳಿ, ಹೆಗ್ಗೆರೆ ಗ್ರಾಮಗಳಲ್ಲಿ ಸ್ಥಳಿಯ ಸಂಘನೆಯಿಂದ ಸರ್ಕಾರದ ನೆರವಿಲ್ಲದೆ ಶಾಲಾ ಕಟ್ಟಡ, ಆಸ್ಪತ್ರೆ, ಬಯಲು ರಂಗಮಂದಿರ, ಶಿವಾಲಯ, ಶಿಕ್ಷಕರ ವಸತಿ ಗೃಹ, ರಸ್ತೆಗಳ ನಿರ್ಮಾಣ ಇವೆಲ್ಲವೂ ಇವರ ಸಾಮಾಜಿಕ ಸೇವೆಗೆ ಸಾಕ್ಷಿ .ಸಣ್ಣವಯಸಿನಲ್ಲಿಯೇ ಗರ್ಭಿಣಿ ಪತ್ನಿ ಹಾಗು ಮಗುನನ್ನು ಕಳೆದುಕೊಂಡ ಇವರು ಸಹಜವಾಗಿಯೆ ಆಧ್ಯಾತ್ಮದೆಡೆಗೆ ಆಕರ್ಷಿತರಾದರು. ಎರಡನೇ ಮದುವೆಯಾಗಲು ಇವರ ಸಹೊದರಿಯಾದ ಪಾರ್ವತಮ್ಮನವರ ಒತ್ತಡ ತಾಳಲಾರೆದೆ ತಮ್ಮ ಎಲ್ಲಾ ಹಲ್ಲುಗಳನ್ನು ಕೀಳಿಸಿಕೊಂಡು ಬಂದಿದ್ದರಂತೆ! ತಿರುವಣ್ಣಾಮಲೈನ ಶ್ರೀ ರಮಣ ಮಹರ್ಷಿಗಳ ದಿವ್ಯ ಸನ್ನಿಧಿಯಲ್ಲಿ ಬಹುದಿನದ ಕ್ಲೇಷ ಕಳೆದು ಒಂದು ಬಗೆಯ ಅಲೌಕಿಕ ಅನುಭಾವಕ್ಕೆ ಒಳಗಾದರು. ಆಶ್ರಮದಲ್ಲೆ ಕೆಲ ಕಾಲವಿದ್ದು ಆಧ್ಯಾತ್ಮಿಕ ಸಾದನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಮುಂದೆ ಆನಂದ ಆಶ್ರಮದ ಶ್ರೀ ರಾಮದಾಸರು, ಹೃಷಿಕೇಶದ ಸ್ವಾಮಿ ಶಿವಾನಂದರು, ಬಾಗೂರಿನ ಶ್ರೀ ಶರಣಮ್ಮ , ಮಲ್ಲಾಡಿಹಳ್ಳಿಯ ಶ್ರೀ ರಾಘವೇಂದ್ರ ಸ್ವಾಮಿಗಳು (ತಿರುಕ), ಶ್ರೀ ಜಿಡ್ಡು ಕೃಷ್ಣಮೂರ್ತಿ ಮೊದಲಾದ ಸತ್ಪರುಷರೊಂದಿಗೆ ಒಡನಾಟವಿಟ್ಟು ಕೊಂಡಿದ್ದರು. ಸಿದ್ಧಪುರುಷರು, ಅವಧೂತರು ಆದಂತ ಶ್ರೀ ಮುಕೂಂದೂರು ಸ್ವಾಮಿಗಳೊಂದಿಗೆ ಇದ್ದ ಇವರ ಒಡನಾಟಕ್ಕೆ ಅಕ್ಷರ ರೂಪು ಕೊಟ್ಟು ಯೆಗ್ದಾಗೆಲ್ಲಾ ಐತೆ ಕೃತಿರೂಪದಲ್ಲಿ ಹೊರ ತಂದಿರುತ್ತಾರೆ. ಈ ಕೃತಿಯು ಹಿಂದಿ, ಇಂಗ್ಲೀಷ್, ತೆಲಗು, ಮರಾಠಿ ಭಾಷೆಗಳಲ್ಲಿ ಅನುವಾದಗೊಂಡಿದೆ. ಪ್ರಸ್ತುತ ಸಂಸ್ಕೃತ, ಮಲೆಯಾಳಿ, ಬಂಗಾಳಿ, ತಮಿಳು, ಒರಿಯಾ, ಭಾಷೆಗಳಲ್ಲಿ ಅನುವಾದಕ್ಕೆ ಅಣಿಯಾಗುತ್ತಿದೆ. ನಾಡಿನ ಜಾನಪದ ಕ್ಷೇತ್ರಕ್ಕೆ ಇವರ ಸೇವ ಅಪಾರ. ಜಾನಪದ ಕಂಪ್ಯೂಟರ್, ನಾಡೋಜಾ ಹಾಗು ರಾಜ್ಯೋತ್ಸವ ಪ್ರಶಸ್ತಿ ವಿಜೇತ ' ಜನಪದ ಸಿರಿ' ಸಿರಿಯಜ್ಜಿಯನ್ನು ಪರಿಚಯಿಸಿದ ಹಿರಿಮೆ ಇವರದು. ಟಿಮೇಟಿ ಕ್ರಿಸ್ಟೋಫರ್ , ಕೆ.ಹಿಲ್. ಫೀಟರ್ ಜೆ.ಕ್ಲಾವುಸ್, ಆಂಡ್ರೂಸ್ ಮುಂತಾದವರಿಗೆ ಸಂಪನ್ಮೂಲ ವ್ಯಕ್ತಿಯಾಗಿ ಕೃಷ್ಣಶಾಸ್ತ್ರಿಗಳು ನೆರವಾಗಿದ್ದಾರೆ. ದೇಶಿಯ ಸಂಶೋಧಕರಾದ ಸನ್ಮಾನ್ಯ ಡಾ.ತಿ.ನಂ.ಶಂಕರನಾರಯಣ, ಢಾ.ಆರ್.ಶೇಷ ಶಾಸ್ತ್ರಿ, ಡಾ.ಕೃಷ್ಣಮೂರ್ತಿ ಹನೂರು, ಡಾ.ಎಂ.ಜಿ.ಈಶ್ವರಪ್ಪ ಮೊದಲಾದ ಜಾನಪದ ಸಂಶೋಧನೆಗೆ ಇವರಿದ್ದ ಕುಟೀರವೇ ಸ್ಪೂರ್ತಿಯ ನೆಲೆಯಾಗಿದೆ. ಜಾನಪದ ಜಂಗಮ ಡಾ.ಎಸ್.ಕೆ.ಕರೀಂಖಾನ್ ಅವರನ್ನು ಬೆಳಗೆರೆ ನಾರಯಣಪುರದಲ್ಲಿ ಗ್ರಾಮಸ್ಥರವತಿಯಿಂದ ಸನ್ಮಾನಿಸಿದ್ದಾರೆ.ಹಳ್ಳಿಚಿತ್ರ ನಾಟಕಕ್ಕೆ - ಶ್ರೇಷ್ಟ ನಾಟಕ ಪ್ರಶಸ್ತಿ, ಕೇಂದ್ರ ಸರ್ಕಾರದ ರಾಷ್ಟ್ರೀಯ ನಾಟಕ ಪುರಸ್ಕಾರ. ಮೈಸೂರು ರಾಜ್ಯ ಸರ್ಕಾರದಿಂದ ಉತ್ತಮ ಶಿಕ್ಷಕ ಪ್ರಶಸ್ತಿ (1970), ಕೇಂದ್ರ ಸರ್ಕಾರದಿಂದ ಉತ್ತಮ ಶಿಕ್ಷಕ ಪ್ರಶಸ್ತಿ (1971), ಚಿತ್ರದುರ್ಗದಲ್ಲಿ ನಡೆದ ಧರ್ಮ ಸಮ್ಮೇಳನದಲ್ಲಿ ಸೇವಾರತ್ನ ಪ್ರಶಸ್ತಿ. ಚಿಕ್ಕಮಗಳೂರಿನ ಅಳಾಸಿಂಗಚಾರ್ ಪ್ರಶಸ್ತಿ. 1996ರಲ್ಲಿ ನಡೆದ ಚಿತ್ರದುರ್ಗ ಜಿಲ್ಲ ಸಾಹಿತ್ಯ ಸಮ್ಮೇಳನದ ಅಧ್ಕ್ಷತೆಯನ್ನೂ ವಹಿಸಿದ್ದಾರೆ.ಚಿತ್ರದುರ್ಗದ ಅಭಿಮಾನಿಗಳು ಚಿನ್ಮಯಿ ಎಂಬ ಸಂಭಾವನ ಗ್ರಂಥವನ್ನು ಅರ್ಪಸಿದ್ದಾರೆ. ಅರ್ಪಣೆ - ಚಿಕ್ಕಮಗಳೂರಿನ ಅಭಿಮಾನಿಗಳು ಅರ್ಪಸಿದ ಸಂಭಾವಾನ ಗ್ರಂಥ.ಬಬಬಬಬೆಳಗೆರೆ ಕೃಷ್ಣಶಾಸ್ತ್ರಿಗಳ ತಂದೆಯಾದ ಶ್ರೀ ಚಂದ್ರಶೇಖರ ಶಾಸ್ತ್ರಿಗಳವರ ಆಶಯದಂತೆ ಹಾಗು ಅಣ್ಣ ಸೀತಾರಾಮಶಾಸ್ತ್ರಿಗಳವರ ಆರ್ಥಿಕ ಸಹಕಾರದಿಂದ 1967ರಲ್ಲಿ , ತಮ್ಮ ಹಿರಿಯರಿಂದ ಬಳುವಳಿಯಾಗಿ ಬಂದಂತ ಮನೆಯಲ್ಲಿಯೇ ಶ್ರೀ ಶಾರದ ಮಂದಿರವನ್ನು ವಿದ್ಯುಕ್ತವಾಗಿ ಪ್ರಾರಂಭಿಸಿದರು. ಗ್ರಾಮೀಣ ಅಲಕ್ಷಿತ ಬಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವನ್ನು ನೀಡಬೇಕೆಂಬ ಮಹತ್ವಾಕಾಂಕ್ಷೆಯಿಂದ ಸರ್ಕಾರದ ಯಾವುದೇ ನೆರವಿಲ್ಲದೇ ಆರಂಭಗೊಂಡ ಈ ಸಂಸ್ಥೆ ಇಂದಿಗೂ 750 ವಿದ್ಯಾರ್ಥಗಳಿಗೆ ಯಾವುದೆ ರೀತಿಯ ಸೇವಾ ಶುಲ್ಕವಿಲ್ಲದೆ ಉಚಿತ ವಿದ್ಯೆ,ಉಚಿತ ಊಟ , ಉಚಿತ ವಸತಿ ಕಲ್ಪಸಿಕೊಡಲಾಗುತ್ತಿದೆ. ಇಂದು ಶಿಕ್ಷಣ ವ್ಯವಸ್ಥೆ ಒಂದು ಉದ್ಯಮವಾಗಿರುವಾಗ, ಬೆಳಗೆರೆ ಕೃಷ್ಣಶಾಸ್ತ್ರಿಗಳು ಏಕವ್ಯಕ್ತಿ ಸಂಸ್ಥೆಯಾಗಿ ಯಾವುಧೇ ರೀತಿಯ ಫಲಾಪೇಕ್ಷೆಯಿಲ್ಲದೆ ನಾಲ್ಕು ದಶಕಗಳಿಂದ ಅವಿರತವಾಗಿ ದುಡಿಯುತ್ತಿದ್ದಾರೆ. ಎರಡು ಬಾರಿ ಹೃದಯಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು ಎಂದು ಬತ್ತದ ಚೈತನ್ಯದ ಚಿಲುಮೆಯ ಈ ಶಾಸ್ತ್ರಿಗಳು! ಆದರ್ಶಯುತವಾಗಿ ಬದುಕಿದವರು ಬಹಳಷ್ಟು ಮಂದಿ ಬದುಕೇ ಆದರ್ಶವಾಗಿಸಿಕೊಂಡವರು ವಿರಳ ಅಂತಹರ ಸಾಲಿಗೆ ಈ ಬಿಳಿಯ ಬಟ್ಟೆಯ ಜಂಗಮ ಸೇರುತ್ತಾರೆ. ಇಂತಹ ಶಾಸ್ತ್ರಿಗಳಿಗೆ ಕೊನೆಗೂ ಡಾಕ್ಟರೇಟ್ ಗೌರವ ದಕ್ಕಿದೆ. ಪ್ರಶಸ್ತಿ-ಪುರಸ್ಕಾರಗಳೇನಿದ್ದರು ನಮ್ಮ ಮುಚ್ಚಟೆಯೇ ಹೊರತು ಈ ನಿರ್ಮೋಹಿ ಸಂತನ ಮೇಲೆ ಯಾವುದೇ ರೀತಿಯ ಪ್ರಭಾವ ಬೀರುವುದಿಲ್ಲ. ಈ ಮಹಾನ್ ಚೇತನಕ್ಕೆ ಭಗವಂತ ಇನ್ನೂ ಹೆಚ್ಚಿನ ಆರೋಗ್ಯ ಕರುಣಿಸಲಿ ,ಇದೇ ಅವರೆಲ್ಲ ಅಭಿಮಾನಿಗಳ ಹಾರೈಕೆ.

ಚಿತ್ರದುರ್ಗದ 'ಸಿರಿ'ಯಜ್ಜಿ


ಕನ್ನಡ ಸಾಹಿತ್ಯ ಪ್ರಪಂಚದ ಅನರ್ಘ್ಯರತ್ನ ಜಾನಪದ ಸಾಹಿತ್ಯ ಇಂತಹ ಜಾನಪದ ರತ್ನಗಳ ಅಸಾಧಾರಣ ಸ್ಮರಣಶಕ್ತಿಯ ಜನಪದಸಿರಿ ಸಿರಿಯಜ್ಜಿ. ಚಳ್ಳಕೆರೆ ತಾಲ್ಲೂಕು ಯಲಗಟ್ಟೆ ಗೊಲ್ಲರಹಟ್ಟಿ ಅಜ್ಜಿಯ ಹುಟ್ಟೂರು. ಈರಪ್ಪ-ಕಾಡಮ್ಮ ದಂಪತಿಗಳ ಮಗಳು. ವಿದ್ಯಾಭ್ಯಾಸದಿಂದ ವಂಚಿತಳಾದರೂ ಸಹ ವಿದ್ವತ್ತನ ಗಣಿಯಾಗಿ ಹತ್ತು ಸಾವಿರ ಪದಗಳ ಒಡತಿಯಾಗಿ ಜನಮನ ಗೆದ್ದಿದ್ದಾರೆ.


ಈ ಜಿಲ್ಲೆಯ ಕಾಡುಗೊಲ್ಲರ ಜನಾಂಗವು ನಮ್ಮ ಸಂಸ್ಕೃತಿ ಜೀವಂತ ಪಳೆಯುಳಕೆ, ಇವರ ಸಂಪ್ರದಾಯ, ನಂಬಿಕೆ ಮತ್ತು ಆಚರಣೆಯಿಂದಾಗಿ ತಮ್ಮದೇ ಆದ ವೈಶಿಷ್ಟವನ್ನು ಮೆರಿದಿದ್ದಾರೆ. ಅಂತಹ ಹಬ್ಬಹರಿದಿನಗಳ ಆಚರಣೆ, ಮದುವೆಯ ಸಮಾರಂಭಗಳಲ್ಲಿ ಸಿರಿಯಜ್ಜಿಯ ಹಾಡು ಗಂಗೆಯಂತೆ ಅಲೆಅಲೆಯಾಗಿ ಹರಿದುಬರುತ್ತೆ.


ಬೆಳಗೆರೆ ಕೃಷ್ಣಶಾಸ್ತ್ರಿಗಳ ಪ್ರೊತ್ಸಹಾದಿಂದಾಗಿ, ಸಿರಿಯಜ್ಜಿಯ ಜನಪದ ಹಾಡುಗಳ ಭಂಡಾರವೇ ನಮ್ಮ ಮುಂದಿದೆ ."ಮಹಸತಿ ಕಾಟವ್ವ”, ”ಕತ್ತಲೆ ದಾರಿದೂರ” ಎನ್ನುವ ಕತನಗೀತೆಗಳು ಜನಮನ ಗೆದ್ದಿವೆ. ಗೊಲ್ಲ ಜನಾಂಗದ ದೇವರ ಹಾಡುಗಳು ಜನರನ್ನು ಭಕ್ತಿಪರವಶರನ್ನಾಗಿಸಿದೆ. ಮಾಜಿ ಮುಖ್ಯಮಂತ್ರಿ ಗುಂಡುರಾಯರು ‘ಜನಪದಸಿರಿ’ ಎಂಬ ಬಿರುದನ್ನಿತ್ತು ಸನ್ಮಾನಿಸಿದ್ದಾರೆ. ನಾಡಿನ ಪ್ರತಿಷ್ಟಿತ ಪ್ರಶಸ್ತಿಯಾದಂತಹ ನಾಡೋಜ ಪ್ರಶಸ್ತಿಯನ್ನು ಕನ್ನಡ ವಿಶ್ವವಿದ್ಯಾಲಯ ನೀಡಿ ಗೌರವಿಸಿದೆ. ಹಾಗೂ ಕರ್ನಾಟಕ ಜನಪದ ಅಕಾಡೆಮಿಯ ಜಾನಪದಶ್ರೀ ಎಂಬ ಬಿರುದನ್ನು ನೀಡಿ ಪುರಸ್ಕರಿಸಿದೆ. ಅನೇಕ ಸಂಘ-ಸಂಸ್ಥೆಗಳು, ಜನಪದ ಮೇಳ, ಮಠಮಾನ್ಯಗಳಿಂದ ಪ್ರಶಸ್ತಿ ಪಡೆದ ಸಿರಿಯಜ್ಜಿ ‘ನಡೆದಾಡುವ ಜಾನಪದಕೋಶ’ ವಾಗಿದ್ದಾರೆ.

ನಮ್ಮ ಚಿತ್ರದುರ್ಗ ನಿಜವಾದ ಜಾನಪದ ಸಿರಿ ಎಂದರೆ ಸಿರಿಯಜ್ಜಿ. ಹತ್ತು ಸಾವಿರ ಜಾನಪದ ಗೀತೆಗಳನ್ನು ಕೇವಲ ತನ್ನ ನೆನಪಿನ ಶಕ್ತಿಯಿಂದಲೇ ಹಾಡುವ, ಅನಕ್ಷರಸ್ಥ ವಯೋವೃದ್ದೆ ನಮ್ಮ "ಸಿರಿಯಜ್ಜಿ".

- ಆರ್.ರಾಘವೇಂದ್ರ, ಚಳ್ಳಕೆರೆ.

+91 9916822102

ಗುರುವಾರ, ಜನವರಿ 22, 2009

ಸಾಹಿತ್ಯ ಸಮ್ಮೇಳನವ ಆಚರಿಸುವ ಬನ್ನಿ....

75ನೇ ಕನ್ನಡ ಸಾಹಿತ್ಯ ಸಮ್ಮೇಳನ,
ಅಂದು ನಮಲ್ಲಿರುವುದು ಸಂತಸದ ಚೇತನ.
ನಾವೆಲ್ಲಾ ಜೊತೆಗೂಡಿ ಹೋಗೋಣ,
ಸಂಭ್ರಮದ ಸವಿರುಚಿಯ ಸವಿಯೋಣ.


ಹಾಯ್ ಗೆಳೆಯರೇ....


2009ನೇ ಸಾಲು ಬಂದಿರುವುದು ಒಂದು ಸಂತೋಷದ ವಿಷಯ. ಏಕೆಂದರೆ ವರ್ಷದ ಆರಂಭದಲ್ಲಿಯೇ ದೇವರು ನಮಗೆ ಸಂತಸದ ಕ್ಷಣಗಳನ್ನು ಆಚರಿಸಲು ದಯಪಾಲಿಸಿರುವುದು ನಮ್ಮೆಲ್ಲರ ನಸೀಬು. ಸಾಹಿತ್ಯ ಎಂಬುದು ನಿನ್ನೆ ಇಂದಿನದಲ್ಲ. ಅದು ಗತಕಾಲದ ಗಣಿ. ಇಂತಹ ವೈಭವವನ್ನು ನಮ್ಮ 'ಚಿತ್ರದುರ್ಗ'ದಲ್ಲಿ ಅಗೆದು ಹೊರತೆಗೆದು ಇಡೀ ವಿಶ್ವಕ್ಕೇ ಇದರ ಶ್ರೇಷ್ಠತೆಯನ್ನು ಸಾರಲು ಹೊರಟಿರುವುದು ತುಂಬಾ ಗಮನಾರ್ಹ.

"ವರ್ಷದ ಸ್ಪರ್ಶದಿಂದ ಕಲ್ಲು ಹೊಳೆದಂತೆ, ಸಾಹಿತ್ಯಾಭಿಷೇಕದಿಂದ ಇಂದು ಚಿತ್ರದುರ್ಗ ಫಳಫಳನೇ ಥಳಿಸುತ್ತಿದೆ" ಅಬ್ಬಾ! ಕಲೆಯ ರುಚಿಯನ್ನು ಸವಿಯುವುದು ಎಷ್ಟೊಂದು ಜನ್ಮತಾಃ ಕೋಟಿ ಪುಣ್ಯ. ಕನ್ನಡ ನಾಡು, ನುಡಿ, ಸಂಸ್ಕೃತಿಯು ಇಂದು ಉತ್ತುಂಗ ಶಿಖರಕ್ಕೆ ಏರಿರುವುದು ಕನ್ನಡಮ್ಮನ ಕೃಪೆ. ಕಲೆ ಎಂಬುದು ಸುರಪಾನವಿದ್ದಂತೆ. ಕಲೆಯ ಸ್ವಾಧಿಷ್ಟ ರುಚಿ ಸವಿಯಲು ನಮ್ಮ ದುರ್ಗದ ಜನರ ಅದೃಷ್ಟ. ಇಂತಹ ನಾಡಲ್ಲಿ ಹುಟ್ಟಿರುವುದೇ ನಮ್ಮ ಪುಣ್ಯ. 'ಜಾತಕ ಪಕ್ಷಿ, ಮಳೆ ಬರುವುದನ್ನೇ ಕಾಯುತ್ತಾ, ಆಕಾಶವನ್ನೇ ನೋಡುವಂತೆ; ಸಾಹಿತ್ಯ ಸಮ್ಮೇಳನದ ಸಂಭ್ರಮದ ಆಚರಣೆಯನ್ನು ಸುಸೂತ್ರವಾಗಿ ನಡೆಸಲು ಹಾತೊರೆಯುತ್ತಿದ್ದೇವೆ.

ಅಂದಿನ ಈ ಹಬ್ಬ, ದುರ್ಗದ ಎಲ್ಲಾ ಮನೆಯಲ್ಲಿ ಕನ್ನಡ ದೀಪ ಹಚ್ಚಲಿ. ಆ ಬೆಳಕಿನಲಿ ದುರ್ಗದ ಕೀರ್ತಿ ಪ್ರಕಾಶಿಸಲಿ.

ಎಲ್ಲಿಂದಲಾದರೂ ಬಾ ಕನ್ನಡದ ಕಂದ,
ಮತ್ತೆಲ್ಲೂ ಸಿಗದೂ ಇಂಥಾ ಆನಂದ,
ನಮ್ಮೆಲ್ಲರ ಸಂತಸಕೆ, ಸಡಗರಕೆ ಪಾರವೇ ಇಲ್ಲ......!

- ಕೆ. ಮೆಹಬೂಬಿ, ಪಗಡಲಬಂಡೆ.
+91 99017 54041