ಬುಧವಾರ, ಜನವರಿ 7, 2009

ಎಸ್.ನಿಜಲಿಂಗಪ್ಪರವರ ಶ್ವೇತಭವನ



ಐತಿಹಾಸಿಕ ನಗರಿ ಚಿತ್ರದುರ್ಗದಲ್ಲಿ ನಡೆಯುತ್ತಿರುವ 75ನೇ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ನಗರದಲ್ಲಿರುವ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ನಿಜಲಿಂಗಪ್ಪ ರವರ ನಿವಾಸ "ಶ್ವೇತಭವನ" ತಾತ್ಕಾಲಿಕವಾಗಿ ವಸ್ತುಸಂಗ್ರಹಾಲಯವಾಗಿ ರೂಪಾಂತರಗೊಳ್ಳಲಿದೆ.


ಸಮ್ಮೇಳನ ನಡೆಯುವ ನಾಲ್ಕು ದಿನ ಶ್ವೇತಭವನದಲ್ಲಿ ನಿಜಲಿಂಗಪ್ಪರವರ ಜೀವನ ಚರಿತ್ರೆ, ಪ್ರಮುಖ ಘಟನಾವಳಿಗಳ ಕುರಿತು ಸಚಿತ್ರ ವಸ್ತು ಪ್ರದರ್ಶನ ನಡೆಯಲಿದೆ. ಇದಕ್ಕೆ ಅವರ ಪುತ್ರ ಸಮ್ಮತಿ ಸೂಚಿಸಿದ್ದು, ಜಿಲ್ಲಾಧಿಕಾರಿಗಳಾದ ಶ್ರೀ ಅಮ್ಲಾನ್ ಆದಿತ್ಯ ಬಿಸ್ವಾಸ್, ರವರು ಶ್ವೇತಭವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಶ್ವೇತಭವನವನ್ನು ನಿಜಲಿಂಗಪ್ಪ ರವರ ಜೀವನ ಚರಿತ್ರೆ ಸಾರುವ ಮ್ಯೂಸಿಯಂ ಆಗಿ ಬಳಸಿಕೊಳ್ಳುವುದಾಗಿ ಜಿಲ್ಲಾಡಳಿತ ಮನವಿ ಮಾಡಿತು. ಹಾಗಾಗಿ ದುರ್ಗದಲ್ಲಿ ನಡೆಯುವ ಸಮ್ಮೇಳನದ ನಾಲ್ಕು ದಿನದ ಮಟ್ಟಿಗೆ ಅವಕಾಶ ನೀಡಲಾಗಿದೆ ಎಂದು ನಿಜಲಿಂಗಪ್ಪರವರ ಪುತ್ರ ಎಸ್.ಎನ್.ಕಿರಣ್ ಶಂಕರ್ ರವರು ಪತ್ರಿಕೆಗೆ ತಿಳಿಸಿದ್ದಾರೆ. ತಂದೆಯವರಿಗೆ ಸಂಬಂಧಿಸಿದಂತೆ ತಾಲ್ಲೂಕಿನ ಸೀಬಾರದ ಸಮೀಪವಿರುವ ಸ್ಮಾರಕ ಸ್ಥಳದಲ್ಲಿ ಶಾಶ್ವತ ವಸ್ತುಸಂಗ್ರಹಾಲಯ ಸ್ಥಾಪಿಸಲಾಗುವುದು. ಶ್ವೇತಭವನವನ್ನು ಇದೇ ನಿಟ್ಟಿನಲ್ಲಿ ಬಳಸಿಕೊಳ್ಳಲು ಸರಕಾರ ಮನವಿ ಮಾಡಿದರೆ ಷರತ್ತುಬದ್ಧರಾಗಿ ಒಪ್ಪಿಗೆ ನೀಡಲಾಗುವುದು ಎಂದು ಕಿರಣ್ ಶಂಕರ್ ಹೇಳುತ್ತಾರೆ.


ರಾಷ್ಟ್ರನಾಯಕ ದಿವಂಗತ ಎಸ್.ಎನ್.ನಿಜಲಿಂಗಪ್ಪ ರವರು ಇದೇ ಜಿಲ್ಲೆಯವರಾಗಿದ್ದು, ಸಮ್ಮೇಳನದ ಸಮಯದಲ್ಲಿ ಅವರ ನಿವಾಸ ಶ್ವೇತಭವನವನ್ನು ಮ್ಯೂಸಿಯಂ ಆಗಿ ರೂಪಿಸಿ, ಅವರಿಗೆ ಸಂಬಂಧಿಸಿದ ಪುಸ್ತಕ, ಉಡುಪು, ಪೆನ್ನು, ಪ್ರಮುಖ ಘಟನಾವಳಿಗಳ ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗುವುದು ಎಂದು ಸಮ್ಮೇಳನದ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕೆ.ಎಂ. ವೀರೇಶ್ ರವರು ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ