ಶುಕ್ರವಾರ, ಜನವರಿ 9, 2009

ಕನ್ನಡ ಸಾಹಿತ್ಯ ಸಮ್ಮೇಳನದ ಅಗತ್ಯತೆ..........

ಇಂದು ಕರುನಾಡು, ಕನ್ನಡ ಭಾಷೆ, ನಮ್ಮ ಸಂಸ್ಕೃತಿ ರಕ್ಷಣೆ, ಅಳಿವು, ಉಳಿವು ಎಂದೆಲ್ಲಾ ಹೋರಾಟ ನಡೆಸುತ್ತಿರುವ ಈ ಸಮಯದಲ್ಲಿ ಸಾಂಸ್ಥಿಕ ಪ್ರತಿನಿಧಿ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ ನ ವತಿಯಿಂದ ಹಮ್ಮಿಕೊಂಡಿರುವ 75ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಂಡಿರುವುದು ಹೆಮ್ಮೆಯ ಸಂಗತಿ. ಆದರೂ ಇಂದು ಕನ್ನಡ ಸಾಹಿತ್ಯ ಸಮ್ಮೇಳನಗಳು ಪ್ರತಿಷ್ಟಿತ ವ್ಯಕ್ತಿಗಳ ಹಬ್ಬವಾಗಿ ಗೋಚರಿಸುತ್ತಿರುವುದು ಸಹಾ ದುಃಖಕರವಾದ ಸಂಗತಿಯಾಗಿದೆ. ಒಂದೆಡೆ ಪರ, ಮತ್ತೊಂದೆಡೆ ವಿರೋಧ ವಾದ-ವಿವಾದಗಳು ಮಂಡನೆಯಾಗುತ್ತಿದೆ. ಇದರ ನಡುವೆ ಕನ್ನಡ ಸಾಹಿತ್ಯ ಸಮ್ಮೇಳನಗಳ ಅಗತ್ಯತೆ ಕುರಿತು ಚರ್ಚೆ ನಡೆಯಬೇಕಿದೆ.

ಸಮ್ಮೇಳನದ ಅಗತ್ಯತೆಯನ್ನು ಈ ಕೆಳಕಂಡ ಅಂಶಗಳಿಂದ ವ್ಯಕ್ತಪಡಿಸಬಹುದು.

  • ಕನ್ನಡ ಭಾಷೆಯು ಇಂದು ಭಾಷಾ ಸ್ಥಾನಮಾನ ಪಡೆದುಕೊಂಡಿದೆ. ಅದರ ಸದ್ಬಳಕೆಯ ದೃಷ್ಟಿಯಲ್ಲಿ ಕನ್ನಡದ ಬೆಳವಣಿಗೆ ಇಂತಹ ಸಮ್ಮೇಳನಗಳು ಒಂದು ವೇದಿಕೆಯಾಗುವ ಎಲ್ಲಾ ಅವಕಾಶಗಳಿವೆ.
  • ಕನ್ನಡ ಭಾಷೆಯು ಅತಿ ಪ್ರಾಚೀನವಾದ ದ್ರಾವಿಡ ಭಾಷೆಯಾಗಿದೆ. ಇದು ಇಂದು ಕರ್ನಾಟಕದ ಅಧಿಕೃತ ಭಾಷೆ. ಇದರ ಬೆಳವಣಿಗೆಗೆ ಅಗಾಧವಾಗಿದೆ. ಇದು ಕರ್ನಾಟಕದ ಸಾಂಸ್ಕೃತಿಕ ಪ್ರತಿನಿಧಿಯೂ ಹೌದು. ಹೀಗಿರುವಾದ ಕನ್ನಡ ಭಾಷೆಯ ಸಾಹಿತ್ಯ ವಿಚಾರ ಮಂಥನಕ್ಕೆ ಸಮ್ಮೇಳನಗಳು ಪ್ರಮುಖ ವೇದಿಕೆಯಾಗುವುದರಲ್ಲಿ ಅನುಮಾನವಿಲ್ಲ.
  • ಯಾವ ಭಾಷೆಗಳಾಗಲಿ ಅಳಿವು ಎಂಬುದು ಇಲ್ಲ. ಆದರೆ ಬದಲಾವಣೆಯು ಸಹಜ. ಈ ಬದಲಾಗುವ ಜಗತ್ತಿನಲ್ಲಿ ಇತರ ಭಾಷೆಗಳಂತೆ ಕನ್ನಡ ಭಾಷೆಯು ಸಹ ಬದಲಾಗುತ್ತಿರುವ ಪ್ರವೃತ್ತಿಗೆ ಒಳಗಾಗುತ್ತದೆ. ಇಂತಹ ಪರಿವರ್ತನೆಯ ಸಮಯದಿ ಭಾಷಾ ಬದಲಾವಣೆಗಳ ಆಗು-ಹೋಗುಗಳನ್ನು ಚರ್ಚಿಸಲು ಅನುವು ಮಾಡಿಕೊಡುವುದು ಇಂತಹ ಸಮ್ಮೇಳನಗಳ ಹೊಣೆಗಾರಿಕೆ.
  • ಭಾವನೆಗಳನ್ನು ವ್ಯಕ್ತಪಡಿಸಲು ಮಾತೃಭಾಷೆಗಿಂತ ಬೇರೆ ಭಾಷೆ ಪರಿಣಾಮಕಾರಿಯಲ್ಲ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಹಾಗೆಯೇ ಭಾಷೆಯ ಬೆಳವಣಿಗೆಗೆ ಅಲ್ಲಿನ ಪ್ರಾಥಮಿಕ ಶಿಕ್ಷಣವು ಮಾತೃಭಾಷೆಯಲ್ಲಿರಬೇಕು ಎಂಬುದು ಪ್ರಚಲಿತವಾಗಿರುವ ವಿಷಯ. ಇಂತಹ ಸೂಕ್ಷ್ಮ ಸಂಗತಿಗಳ ಗಹನವಾದ ಚರ್ಚೆ. ಸಾಧಕ-ಭಾದಕಗಳ ಕುರಿತು ಚಿಂತಿಸಲು ಇಂತಹ ಸಮ್ಮೇಳನಗಳು ಮಾರ್ಗದರ್ಶಿಯಾಗಬೇಕು.
  • ಕನ್ನಡ ಸಾಹಿತ್ಯ ಅತ್ಯುನ್ನತವಾದ 7 ಜ್ಞಾನಪೀಠ ಪ್ರಶಸ್ತ್ರಿಯನ್ನು ತನ್ನ ಮುಡಿಗೇರಿಸಿಕೊಂಡಿರುವ ಭಾಷೆ, ಇಂತಹ ಭಾಷೆಯಲ್ಲಿರುವ ಉತ್ತಮವಾಗಿ ಸಾಹಿತ್ಯಗಳನ್ನು ಕನ್ನಡಾಸಕ್ತರಿಗೆ ಪರಿಚಯಿಸುವ ಹಾಗೂ ವಿಶ್ವದ್ಯಾಂತ ಸಾರುವ ಕೆಲಸಗಳನ್ನು ಈ ಸಮ್ಮೇಳನಗಳು ಮಾಡಬೇಕಿದೆ.
  • ಕನ್ನಡನಾಡು ವಿಭಿನ್ನ ಸಂಸ್ಕೃತಿಗಳ ನೆಲೆಬೀಡು. ಇಂತಹ ಕರುನಾಡಿನ ಹತ್ತು ಹಲವು ಸಾಂಸ್ಕೃತಿಕತೆಯನ್ನು ಇಂದು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳು ಕೆಲಸ ಮಾಡಬೇಕಿದೆ.
  • ಕನ್ನಡ ನಾಡು ಕಲೆಗಳ ತವರೂರು. ಇಲ್ಲಿನ ಕಲೆಗಳು ವಿಶ್ವವಿಖ್ಯಾತ ಇಂತಹ ಕಲೆಗಳ ಉಳಿವು, ಪುನರುತ್ಥಾನ, ಬೆಳಸುವ ಜವಬ್ದಾರಿಯು ಸಹ ಇಂತಹ ಸಮ್ಮೇಳನಗಳ ಮೇಲೆ ಇದೆ.


ಈ ಮೇಲಿನ ಅಂಶಗಳೊಡನೆ ಹತ್ತು ಹಲವು ಅಂಶಗಳು ಕನ್ನಡ ಸಾಹಿತ್ಯ ಸಮ್ಮೇಳನಗಳ ಅಗತ್ಯತೆಯನ್ನು ಒತ್ತಿ ಹೇಳುತ್ತದೆ. ಹಲವಾರು ಬಂಡಾಯ ಸಮ್ಮೇಳನಗಳ ನಡುವೆ 74 ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದ ಕನ್ನಡ ಸಾಹಿತ್ಯ ಪರಿಷತ್ ಇಂದು 75 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುತ್ತದೆ.


ಈ ಕೆಳಕಂಡ ಅಂಶಗಳನ್ನೊಳಗೊಂಡ ಸಮ್ಮೇಳನದ ಅಗತ್ಯತೆ ಅಷ್ಟಾಗಿ ಬೇಕಿರುವುದಿಲ್ಲ.

  • ಇಂದಿನ ಸಮ್ಮೇಳನಗಳು ಆಯಾಯ ಆಯೋಜಕರ ಪ್ರತಿಷ್ಟತೆಯ ಪಣವಾಗಿ ರೂಪಿತವಾಗುತ್ತಿದೆ.
  • ಇಂದು ಕನ್ನಡದ ಹೆಸರಿನಲ್ಲಿ, ಸಮ್ಮೇಳನದ ಹೆಸರಿನಲ್ಲಿ, ಜಾತ್ರೆ ಸ್ವರೂಪದ ಹೆಸರಿನಲ್ಲಿ ಸಮ್ಮೇಳನಗಳು ನಡೆಯುತ್ತಿದ್ದು, ಪಕ್ಷಪಾತಿಗಳ ಮೇಲುಗೈ ಕಂಡು ಬರುತ್ತಿದೆ.
  • ಕನ್ನಡ ಭಾಷೆಯನ್ನು ಮೆರೆಸಬೇಕಾದ ಸಮ್ಮೇಳನಗಳಲ್ಲಿ ಇಂದು ವ್ಯಕ್ತಿಗಳನ್ನು ಮೆರೆಸುವ ಪ್ರವೃತ್ತಿ ಹೆಚ್ಚಾಗಿ ಕಂಡು ಬರುತ್ತಿದೆ. ಇದರಿಂದ ಸಮ್ಮೇಳನದ ಮೂಲ ಉದ್ದೇಶವೇ ಮರೆಯಾಗಿದೆ.
  • ಸಮ್ಮೇಳನದ ಅಧ್ಯಕ್ಷತೆಯ ಆಯ್ಕೆಯಿಂದ ಹತ್ತು ಹಲವು ಗೋಷ್ಟಿಗಳಲ್ಲಿ ಪಾಲ್ಗೊಳ್ಳುವಿಕೆಗಾಗಿ ನಡೆಯುವ ಲಾಬಿ ಇಂದಿನ ಕೀಳು ಮಟ್ಟದ ರಾಜಕಾರಣವನ್ನು ನಾಚಿಸುವಂತಿದೆ.
  • ಇಂದಿನ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯದ ಗಂಧವೇ ಮರೆಯಾಗಿದೆ. ಇಂತಹ ಸಮ್ಮೇಳನಗಳು ಬೇಕು ಬೇಡಗಳ ಸ್ಥಿತಿಯನ್ನು ನೆನೆದರೆ ಸಮ್ಮೇಳನಗಳು ಅಗತ್ಯವಿಲ್ಲ ಎಂಬುದರಲ್ಲಿ ಎರಡು ಮಾತಿಲ್ಲ.
  • ಇಂದಿನ ಸಮ್ಮೇಳನದಲ್ಲಿ ಎಲ್ಲರೂ ಪಾಲ್ಗೊಳ್ಳುವುದು ಅಗತ್ಯ. ಆದರೆ ಇಂದು ಕೇವಲ ಗುಂಪುಗಾರಿಕೆ ಕಂಡು ಬರುತ್ತಿರುವ ಇಂದಿನ ಸಮ್ಮೇಳನಗಳಲ್ಲಿ ನಿಜವಾದ ಆಸಕ್ತರು ಹಾಗೂ ಕನ್ನಡ ಪರವಿರುವವರು ದೂರ ಉಳಿದಿರುವುದು ಬೇಸರದ ಸಂಗತಿ ಹೀಗಿರುವಾಗ ಸಮ್ಮೇಳನ ಬೇಕೆ?

ಹೀಗೆ ಹತ್ತು ಹಲವು ಬೇಕು ಬೇಡಗಳ ನಡುವೆ ನಡೆಯುತ್ತಿರುವ 75ನೇ ಕನ್ನಡ ಸಾಹಿತ್ಯ ಸಮ್ಮೇಳನವು ಏಕೆ ಬೇಕು? ಏಕೆ ಬೇಡ ಎಂಬ ಬಗ್ಗೆ ವಿಸ್ತೃತವಾದ ಚರ್ಚೆಯು ನಡೆಯಬೇಕಿದೆ. ಹಾಗೂ ಪ್ರತಿಯೊಬ್ಬ ಕನ್ನಡಿಗರು ಮನೆಮನೆಯ ಮನದ ಹಬ್ಬವಾಗಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಚರಿಸುವ ಬಗ್ಗೆ ಜಾಗೃತಿಯನ್ನು ಕನ್ನಡ ಸಾಹಿತ್ಯ ಸಮ್ಮೇಳನಗಳು ಮಾಡಬೇಕಿದೆ.


- ಯ.ಮ.ಹೇಮಂತಕುಮಾರ್

ಅಂಬಾ ಪ್ರಕಾಶನ

ಕೆ.ಕೆ.ರಸ್ತೆ, ಯಳಂದೂರು- 571441

ಚಾಮರಾಜನಗರ ಜಿಲ್ಲೆ.

ದೂರವಾಣಿ: 08226-240196, 9448596343

2 ಕಾಮೆಂಟ್‌ಗಳು:

  1. ಕನ್ನಡ ಸಾಹಿತ್ಯ ಸಮ್ಮೇಳನದ ಬೇಕು ಬೇಡಗಳ ವಿಮರ್ಶೆ ಅಚ್ಚು ಕಟ್ಟಾಗಿ ಮೂಡಿಬಂದಿದೆ.

    ಪ್ರತ್ಯುತ್ತರಅಳಿಸಿ
  2. ಬರೀ ಆಡಂಬರ, ನೀರಸ, ಪಕ್ಷಪಾತಿಗಳ ಪಾಲಾಗದೇ ಸಮ್ಮೇಳನಗಳು ಸತ್ವಪೂರ್ಣವಾಗಿರಬೇಕು.. ಹೇಮಂತ್ ಕುಮಾರ್ ರವರೇ ನಿಮ್ಮ ಅಭಿಮತ, ನನಗೆ ಖುಷಿ ತಂದಿತು. ಪ್ರತಿಯೊಬ್ಬ ಕನ್ನಡಿಗರು ಇದರ ಕುರಿತು ಆಲೋಚಿಸಲೇಬೇಕಾದ ಅಂಶವಾಗಿದ್ದು, ಆಲೋಚಿಸುವಂತೆ ಮಾಡುವ ನಿಮ್ಮ ಲೇಖನ ಸತ್ವಪೂರ್ಣ. ಧನ್ಯವಾದಗಳು ಹೇಮಂತಕುಮಾರ್, ಯಳಂದೂರು.

    ಪ್ರತ್ಯುತ್ತರಅಳಿಸಿ