ಬುಧವಾರ, ಜನವರಿ 7, 2009

ಪ್ರಮುಖ ಸಾಹಿತ್ಯ ಸಮ್ಮೇಳನಗಳು...


ಪ್ರಥಮ ಸಾಹಿತ್ಯ ಸಮ್ಮೇಳನ 1915ರಲ್ಲಿ ಬೆಂಗಳೂರಿನಲ್ಲಿ ನಡೆಯಿತು. ಅಂದಿನ ಸಮ್ಮೇಳನವು ಇಂದಿನಂತೆ ದೊಡ್ಡ ಜಾತ್ರೆಯಾಗಿರಲಿಲ್ಲ. ಎಚ್.ವಿ.ನಂಜುಂಡಯ್ಯ ರವರು ಅಧ್ಯಕ್ಷರಾಗಿದ್ದರು. 1916ರಲ್ಲಿ ಬೆಂಗಳೂರು ಹಾಗೂ 1917ರಲ್ಲಿ ಮೈಸೂರಿನಲ್ಲಿ ನಡೆದ ಸಮ್ಮೇಳನಕ್ಕೂ ಎಚ್.ವಿ.ನಂಜುಂಡಯ್ಯ ರವರು ಅಧ್ಯಕ್ಷರಾಗಿದ್ದುದು ಮೊದಲ ಸಮ್ಮೇಳನದ ಬಳುವಳಿ.

25ನೇ ಕನ್ನಡ ಸಾಹಿತ್ಯ ಸಮ್ಮೇಳನದ ಬೆಳ್ಳಿ ಹಬ್ಬ ಸಡಗರದ ಈ ಸಮ್ಮೇಳನದ ಅಧ್ಯಕ್ಷ ಪೀಠವನ್ನು ಅಲಂಕರಿಸಿದವರು ವೈ. ಚಂದ್ರಶೇಖರ. 1940ರಲ್ಲಿ ಧಾರವಾಡದಲ್ಲಿ ಸಮ್ಮೇಳನ ನಡೆಯಿತು. ಸ್ವಾತಂತ್ರ್ಯ ಹೋರಾಟದ ಉತ್ತುಂಗ ಸ್ಥಿತಿಯನ್ನು ಕನ್ನಡಿಗರು ಇದೇ ಸಂಧರ್ಭದಲ್ಲಿ ತಲುಪಿದ್ದರು.

50ನೇ ಕನ್ನಡ ಸಾಹಿತ್ಯ ಸಮ್ಮೇಳನವು ದೇಶದ ರಾಜಧಾನಿಯಾದ ದೆಹಲಿಯಲ್ಲಿ ನಡೆದದ್ದು ವಿಶೇಷ. ಸಂಘಟನೆಗೆ ಹೆಸರಾದ ಶ್ರೀ ಜಿ.ನಾರಾಯಣ ರವರೇ ಇದನ್ನೂ ಸಂಘಟಿಸಿದವರು. ಸುಪ್ರಿಂಕೋರ್ಟ್ ನಲ್ಲಿ ವಕೀಲರಾಗಿದ್ದ ಎಚ್.ಬಿ.ದಾತಾರ್ ರವರು ಬೆಂಗಳೂರಿಗೆ ಬಂದಾಗ ಆಗಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಜಿ.ನಾರಾಯಣರವರ ಬಳಿ "ನಮ್ಮಲ್ಲೂ ನಡೆಸಲು ಅವಕಾಶ ಕೊಡಿ. ನಾವು ಸಂಘಟಿಸುತ್ತೇವೆ" ಎಂದಿದ್ದರಂತೆ. ಅದೇ ಎಳೆಯನ್ನು ಹಿಡಿದು ಸುವರ್ಣ ಸಮ್ಮೇಳನದ ನೆನಪನ್ನು ವರ್ಣರಂಜಿತಗೊಳಿಸಲಾಯಿತು. ಜಿ.ಪಿ.ರಾಜರತ್ನಂ ಸಮ್ಮೇಳನದ ಅಧ್ಯಕ್ಷರಾಗಿದ್ದರು. ರಾಜ್ಯದಿಂದ 1600 ಮಂದಿ ಸಮ್ಮೇಳನಕ್ಕೆ ತೆರಳಿದ್ದೂ ವಿಶೇಷ. ಜನತಾ ಸರಕಾರದಿಂದ ಪ್ರಧಾನ ಮಂತ್ರಿಗಳಾದ ಮೊರಾರ್ಜಿ ದೇಸಾಯಿ ರವರು ಸಮ್ಮೇಳನವನ್ನು ಉದ್ಘಾಟಿಸಿದರು. ರಾಮಕೃಷ್ಣ ಹೆಗಡೆ ಅವರು ಜನತಾ ಪಕ್ಷದ ರಾಷ್ಟ್ರೀಯ ಮಟ್ಟದಲ್ಲಿ ಪದಾಧಿಕಾರಿಯಾಗಿದ್ದರು.

60ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಸಕವಿಗಳಾದ ಶ್ರೀ ಕೆ.ಎಸ್.ನರಸಿಂಹಸ್ವಾಮಿ ರವರು ಸಮ್ಮೇಳನದ ಅಧ್ಯಕ್ಷರಾಗಿದ್ದರು. ಆ ಸಮ್ಮೇಳನವನ್ನು ಸಹ ವಿಜೃಂಭಿತವಾಗಿ ಆಚರಣೆ ಮಾಡುತ್ತಾ ಕನ್ನಡಮ್ಮನ ಸೇವೆ ಮಾಡಲಾಯಿತು.



ಇನ್ನೂ 75ನೇ ಕನ್ನಡ ಸಾಹಿತ್ಯ ಸಮ್ಮೇಳನವು ಇತಿಹಾಸ ಪ್ರಸಿದ್ಧ ಚಿತ್ರದುರ್ಗದಲ್ಲಿ ನಡೆಯುತ್ತಿರುವ ನಮ್ಮೆಲ್ಲರ ಅದೃಷ್ಟ. ಜನವರಿ 29, 2009ರಿಂದ ನಾಲ್ಕು ದಿನಗಳ ಕಾಲ ಚಿತ್ರದುರ್ಗದಲ್ಲಿ ನಡೆಯುವ ಸಮ್ಮೇಳನಕ್ಕೆ ಅಮೃತೋತ್ಸವದ ಕಳಶ. ಎಂಥಾ ರೌದ್ರತೆಗೂ ಜಗ್ಗದೇ, ಸೆಟೆದು ನಿಂತಿರುವ ದುರ್ಗದ ಕಲ್ಲುಗಳು, ಸಾಹಿತ್ಯ ಕಂಪ ಸೂಸುವ ಶಿಲೆಗಳಾಗಿ ಸೌಮ್ಯತೆಯಿಂದ ನಿಂತಿವೆ. ಈ ಅಮೃತೋತ್ಸವದ ನಿಯೋಜಿತ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಡಾ. ಎಲ್.ಬಸವರಾಜು ರವರು. ಸಮ್ಮೇಳನದ ಸ್ವಾಗತಿ ಸಮಿತಿ ಮಹಾಪೋಷಕ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಗೌರವಾಧ್ಯಕ್ಷರಾದ ಶ್ರೀ ಶಿವಮೂರ್ತಿ ಮುರುಘಾ ಶರಣರು, ಅಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕಂದಾಯ ಸಚಿವ ಶ್ರೀ ಕರುಣಾಕರರೆಡ್ಡಿ, ಕೋಶಾಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ಶ್ರೀ ಅಮ್ಲಾನ್ ಆದಿತ್ಯ ಬಿಸ್ವಾಸ್ ರವರು, ಪ್ರಧಾನ ಕಾರ್ಯದರ್ಶಿಗಳಾದ ಕೆ.ಎಂ.ವೀರೇಶ್ ರವರು, ಕಾರ್ಯಾಧ್ಯಕ್ಷರು ಹಾಗೂ ಸಚಿವರಾದ ಶ್ರೀ ಡಿ.ಸುಧಾಕರ್, ಮತ್ತು ಗೂಳಿಹಟ್ಟಿ ಶೇಖರ್ ರವರ ನೇತೃತ್ವದಲ್ಲಿ ಚಿತ್ರದುರ್ಗದ ಅಮೃತೋತ್ಸವದ ಸಿದ್ದತೆ ಭರದಿಂದ ಸಾಗುತಿದೆ. ಬನ್ನಿ ... ಮಿತ್ರರೇ, ಸಂತೋಷದಿಂದ ಅಮೃತೋತ್ಸವದ ಅಮೃತ ಸವಿಯ ಸವಿಯಿರಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ