ಬುಧವಾರ, ಜನವರಿ 28, 2009

ದುರ್ಗದ ಜನತೆಗೊಂದು ಕಹಿಸುದ್ದಿ


ದುರ್ಗದ ಜನರಲ್ಲಿ ಅತಿ ಉತ್ಸುಕತೆ, ಸಂಭ್ರಮದ ವಾತಾವರಣ ಮೂಡಿದ್ದು ನಿಜ. ಆದರೆ ಇವರಿಗೆ ಕಾದಿದೆ ಕಹಿಸುದ್ದಿ. ಅದೇನೆಂದರೆ ಭಾರತದ ಮಾಜಿ ರಾಷ್ಟ್ರಪತಿಯಾದ ಶ್ರೀ ವೆಂಕಟರಾಮನ್ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 7 ದಿನಗಳ ಶೋಕಾಚರಣೆ ಆಚರಿಸಲು ಸರ್ಕಾರ ಸುತ್ತೋಲೆ ಹೊರಡಿಸಿದೆ. ಪ್ರಯುಕ್ತ ಜಿಲ್ಲೆಯಲ್ಲಿ ಜನವರಿ 29 ರಿಂದ ಪ್ರಾರಂಭಗೊಳ್ಳಬೇಕಿದ್ದ ಅಮೃತ ಸಮ್ಮೇಳನವು ಫೆಬ್ರವರಿ 4, 5, 6 ಮತ್ತು 7ನೇ ತಾರೀಖಿಗೆ ಮುಂದೂಡಲಾಗಿರುತ್ತದೆ.


ರಾಜ್ಯದಲ್ಲಿ ಆಚರಿಸುತ್ತಿರುವ ಶೋಕಾಚರಣೆಯ ಹಿನ್ನೆಲೆಯಲ್ಲಿ ಸಮ್ಮೇಳನದಂತಹ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ಆಚರಿಸಲು ಸಾಧ್ಯವಿಲ್ಲ. ಆದ್ದರಿಂದ ಈಗಾಗಲೇ ನಿಗಧಿಪಡಿಸಿರುವ ಸಮ್ಮೇಳನದ ಕಾರ್ಯಕ್ರಮಗಳ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲದೇ, ಬರುವ ಫೆಬ್ರವರಿ 4, 5, 6 ಮತ್ತು 7ರಂದು ಸಮ್ಮೇಳನವು ಅದ್ಧೂರಿಯಾಗಿ ನಡೆಯಲಿದೆ ಎಂದು ರಾಜ್ಯ ಕ.ಸಾ.ಪ. ಅಧ್ಯಕ್ಷರಾದ ಶ್ರೀ ನಲ್ಲೂರು ಪ್ರಸಾದ್, ಸ್ವಾಗತ ಸಮಿತಿಯ ಮಹಾಪೋಷಕರಾಗಿರುವ ಶ್ರೀ ಶಿವಮೂರ್ತಿ ಶರಣರು, ಜಿಲ್ಲಾಧಿಕಾರಿಗಳಾದ ಶ್ರೀ ಅಮ್ಲಾನ್ ಆದಿತ್ಯ ಬಿಸ್ವಾಸ್, ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾದ ಶ್ರೀ ಕೆ.ಎಂ.ವೀರೇಶ್ ರವರು ಮಂಗಳವಾರ ರಾತ್ರಿ ಕರೆದಿದ್ದ ತುರ್ತು ಸಭೆಯಲ್ಲಿ ವಿಷಯವನ್ನು ಚರ್ಚಿಸಲಾಯಿತು.


ದುರ್ಗದ ಜನತೆಗೆ ನಿಜಕ್ಕೂ ನಿರಾಶೆ. ಆದರೆ ಒಂದೆರಡು ದಿನಗಳ ನಂತರ ಬರುವ ಸಮ್ಮೇಳನದ ಸಂಭ್ರಮದ ನಿರಾಶೆಯ ಮೇಲೆ ತಣ್ಣೀರೆರಚಿದೆ. ತಡವಾದರೂ ಸೈ, ಅದೇ ಉತ್ಸಾಹ, ಸಂಭ್ರಮ, ಸಂತಸದಿಂದ ಅಮೃತ ಸಮ್ಮೇಳನದಲ್ಲಿ ಪಾಲ್ಗೊಳ್ಳೋಣ... ಜೈ ಕರ್ನಾಟಕ ಮಾತೆ.

ಸಮ್ಮೇಳನಾಧ್ಯರ ಮಾತು


ಸೋಮವಾರ, ಜನವರಿ 26, 2009

ದುರ್ಗದ ಸಾಹಿತಿಗಳು.- 1

ಬಿ.ತಿಪ್ಪೇರುದ್ರಪ್ಪ
ಬದುಕಿನ ವ್ಯಂಗ್ಯ ಸಮಾಜದ ಓರೆಕೋರೆಗಳನ್ನು ತಮ್ಮ ಹಾಸ್ಯ, ವಿಡಂಬನೆಯ ಲೇಖನಗಳಿಂದ ಮೂಲಕ ಮನಮುಟ್ಟುವಂತೆ ಚಿತ್ರಿಸಿರುವ ಬಿ.ತಿಪ್ಪೇರುದ್ರಪ್ಪ, ಚಿತ್ರದುರ್ಗದ ಹೆಮ್ಮೆಯ ಹಾಸ್ಯ ಲೇಖಕರಷ್ಟೇ ಅಲ್ಲ, ಮಕ್ಕಳ ಸಾಹಿತಿಯೂ ಹೌದು. ಧಾರವಾಡ ಕರ್ನಾಟಕ ವಿವಿಯಿಂದ ರಾಜ್ಯಶಾಸ್ತ್ರದಲ್ಲಿ ಎಂ.ಎ. ಪದವಿ. 1968ರಲ್ಲಿ ಚಿಕ್ಕಮಗಳೂರು ತರಳಬಾಳು ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು, ಹರಪನಹಳ್ಳಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಮಕ್ಕಳಿಗಾಗಿ ಕತೆ, ಕವನ ಬರೆದಿರುವ ತಿಪ್ಪೇರುದ್ರಪ್ಪ ಅವರ ಕವನವೊಂದನ್ನು ಮಹಾರಾಷ್ಟ್ರದ ಕನ್ನಡ ಭಾಷಾ ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ. ನಿಂಗಣ್ಣನ ಎಲೆಕ್ಷನ್ ಡ್ಯೂಟಿ, 30 ವಿಡಂಬನೆಗಳು ಎಂಬ ಹಾಸ್ಯ ಲೇಖನ ಸಂಕಲನ, ಕಾಡಿನ ಕ್ರಿಕೆಟ್, ಪುಟ್ಟನ ಕಾನ್ವೆಂಟ್, ಹಕ್ಕಿಗಳು ಎಂಬ ಮಕ್ಕಳ ಕವನ ಸಂಕಲನ, ಬಡವ ಬದುಕಿದ ಎಂಬ ನಾಟಕ ಹಾಗೂ ದ್ವಿತಿಯ ಪಿ.ಯು.ಸಿ. ತರಗತಿಗಾಗಿ ರಾಜ್ಯಶಾಸ್ತ್ರ ಪಠ್ಯಪುಸ್ತಕ ರಚಿಸಿ ಪ್ರಕಟಿಸಿದ್ದಾರೆ.
ರಾಘವೇಂದ್ರ ಪಾಟೀಲ
ರಾಘವೇಂದ್ರ ಪಾಟೀಲ ಎಂದಾಕ್ಷಣ 'ಸಂವಾದ' ನೆನಪಾಗಲೆಬೇಕು. ಈ ತ್ರೈಮಾಸಿಕದ ಮೂಲಕ ಸಾಹಿತ್ಯ ಸಂವಾದಕ್ಕೆ ವೇದಿಕೆ ಒದಗಿಸಿಕೊಟ್ಟವರು ಪಾಟೀಲರು. ಜಿಲ್ಲೆಯ ನಾಡಿನ ಸಾಹಿತ್ಯ ವಲಯದಲ್ಲಿ ಪರಿಚಿತವಾಗಿರುವ ಪಾಟೀಲರು ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ಪದವಿಪೂರ್ವ ಕಾಲೇಜು ಉಪನ್ಯಾಸಕ. ಕಥನಕಲೆಯಲ್ಲಿ ಪಳಗಿದ ಕೈ. ಕಥಾಲೋಕ ಅವರ ಆದ್ಯತೆಯ ಕ್ಷೇತ್ರ. ಇವರ ಮೊದಲ ಕಥೆ 'ಒಡಪುಗಳು' 1977ರಲ್ಲಿ ಉದಯವಾಣಿ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದೆ. ಒಡಪುಗಳು, ಪ್ರತಿಮೆಗಳು, ದೇಶಗತಿ, ಕಳಕೊಂಡವರು, 'ಮಾಯಿಯ ಮುಖಗಳು' ಎಂಬ ಕಥಾಸಂಕಲನ, ಬಾಳವ್ವನ ಕನಸು ಕಾದಂಬರಿ ಹಾಗೂ 'ವಾಗ್ವಾದ' ವಿಮರ್ಶಾ ಲೇಖನ, ಸಂಕಲನ ಪ್ರಕಟಿಸಿದ್ದಾರೆ.
ಚದುರಂಗ ಸ್ಮಾರಕ ಪ್ರಶಸ್ತಿ, ಆರ್ಯಭಟ, ಕಾರಂತ, ಸಿರಿಗನ್ನಡ, ಡಾ. ಬಸವರಾಜ ಪಟ್ಟೇದ ಸ್ಮಾರಕ ಪ್ರಶಸ್ತಿ ಪಡೆದಿರುವ ಪಾಟೀಲರ ಮಡಿಲಿಗೆ ತೇರು ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಸಿಕ್ಕಿದೆ. 'ಸಂಕೀರ್ಣ', 'ಕೃಷ್ಣ ಆಲನಹಳ್ಳಿ ಸ್ಮರಣ ಸಂಚಿಕೆ', 'ಮಾಸ್ತಿ ಸಾಹಿತ್ಯ' ಸಮಗ್ರ ದರ್ಶನ ಹಾಗೂ ನವ ಮೇಘ ರೂಪಿ ಎಂಬ ಕೃತಿಗಳನ್ನು ರಚಿಸಿದ್ದಾರೆ.
- ವಿ.ಕ. ಚಿತ್ರದುರ್ಗ, 25.01.2009

ಕಲ್ಲರಳಿ ಹೂವಾಗಿ... : ಚಲನಚಿತ್ರ

ಬಿ.ಎಲ್.ವೇಣುರವರ 'ಕಲ್ಲರಳಿ ಹೂವಾಗಿ' ಕಾದಂಬರಿ ಆಧಾರಿತ ಟಿ.ಎಸ್.ನಾಗಾಭರಣ ರವರ 'ಕಲ್ಲರಳಿ ಹೂವಾಗಿ' ಚಿತ್ರದ ಗೀತೆಗಳು




ಈ ಭೂಮಿ, ಈ ನಾಡು - ಕಲ್ಲರಳಿ ಹೂವಾಗಿ





ಕಲ್ಲರಳಿ... ಹೂವಾಗಿ.... - ಕಲ್ಲರಳಿ ಹೂವಾಗಿ





ನಿನ್ನ ನೆನಪಿನಲಿ.. ನನ್ನ ಬದುಕಿರಲಿ.. - ಕಲ್ಲರಳಿ ಹೂವಾಗಿ




ನನ್ನ ನೆಚ್ಚಿನ ಕೋಟೆಯ - ಕಲ್ಲರಳಿ ಹೂವಾಗಿ

"ನಾಗರಹಾವು" ಚಲನಚಿತ್ರದಲ್ಲಿ "ಚಿತ್ರದುರ್ಗ"



ಕನ್ನಡ ನಾಡಿನ ವೀರರಮಣಿಯ - ನಾಗರಹಾವು.




ಹಾವಿನ ದ್ವೇಷ - ನಾಗರಹಾವು




ಬಾರೆ.. ಬಾರೇ... ಚಂದದ ಚೆಲುವಿನ ತಾರೆ.. - ನಾಗರಹಾವು



ಸಂಗಮ ಸಂಗಮ - ನಾಗರಹಾವು

ಶುಕ್ರವಾರ, ಜನವರಿ 23, 2009

ನಮ್ಮೂರ ಗಾಂಧಿ..!



ಬೆಳಗೆರೆ ಕೃಷ್ಣಶಾಸ್ತ್ರಿಯೆಂದೊಡನೆ ನಮ್ಮ ಸೀಮೆಯ ಜನಮನಗಳಲ್ಲಿ ಥಟ್ಟನೆ ಮೂಡುವ ಚಿತ್ರ; ನಿಷ್ಕಲ್ಮಷ ನಗುವಿನ ಶ್ವೇತಧಾರಿಯಾದ ತೊಂಬತ್ತರ ಯುವಕನ ಚಿತ್ರ ! ತಮ್ಮ ಈ ಇಳಿವಯಸ್ಸಿನಲ್ಲಿಯೂ ಪಾದರಸದಂತೆ ಓಡಾಡಿಕೊಂಡು ಸಾಮಾಜಿಕ, ಆಧ್ಯಾತ್ಮಿಕ, ಜಾನಪದ ಹಾಗು ಸಾಹಿತ್ಯ ಕ್ಷೇತ್ರಗಳಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿರುವ ಶಾಸ್ತ್ರಿಗಳು ಇಂದಿನ ಯುವಕರಿಗೆ ಆದರ್ಶಪ್ರಾಯರು.ಬೆಳಗೆರೆ ಕೃಷ್ಣಶಾಸ್ತ್ರಿಗಳು 22ರ ಮೇ 1918 ಬೆಳಗೆರೆಯಲ್ಲಿ ಜನಿಸಿದರು. ಇವರ ತಂದೆಯಾದಂತ ಶ್ರೀ ಚಂದ್ರಶೇಖರ ಶಾಸ್ತ್ರಿಗಳು ಆಶುಕವಿಯೂ, ಸಂಸ್ಕೃತ ವಿದ್ವಾಂಸರು, ವೇದ ವಿದ್ಯ ಪಾರಂಗತರಾಗಿದ್ದರು ಆ ವಿದ್ಯೆಯನ್ನು ಹೊಟ್ಟೆಪಾಡಿಗೆ ಬಳಿಸಿಕೊಳ್ಳಬಾರದು! ಎಂಬ ಮನೋಭಾವದ ವಿಶಿಷ್ಠ ವ್ಯಕ್ತಿ! ಇಂಥ ಸಂಧರ್ಭದಲ್ಲಿ, ಇವರ ತಾಯಿ ಶ್ರೀಮತಿ ಅನ್ನಪೂರ್ಣಮ್ಮನವರು ಮನೆತನದ ವಿದ್ಯೆ ಆಯುರ್ವೇದದಿಂದ ಮನೆವೈದ್ಯ ಮಾಡಿ ಇಡಿ ಮನೆಯ ನಿರ್ವಹಣೆಯನ್ನು ನಿಭಾಯಿಸಿದರು. ಕ್ಷೀರಸಾಗರ ಕಾವ್ಯನಾಮ ಖ್ಯಾತಿಯ ನಾಟಕಕಾರ ಹಾಗು ಗಣಿತ ಪ್ರಾಧ್ಯಾಪಕರಾದ ಸೀತಾರಾಮ ಶಾಸ್ತ್ರಿಗಳು ಇವರ ಹಿರಿಯ ಸಹೊದರರು. ನವೋದಯ ಸಾಹಿತ್ಯದ ಪ್ರಥಮ ಕವಿಯತ್ರಿಯೆಂದೆ ಖ್ಯಾತರಾದ ಬೆಳಗೆರೆ ಜಾನಕಮ್ಮ ಹಿರಿಯ ಸಹೊದರಿ ಹಾಗು ಮತ್ತೋರ್ವ ಕತೆಗಾರ್ತಿಯಾದಂತ ಬೆಳಗೆರೆ ಪಾರ್ವತಮ್ಮನವರು ಇವರ ಕಿರಿಯ ಸಹೊದರಿ. ಹೀಗೆ ಸಾಹಿತ್ಯಿಕ ಕುಟುಂಬದಿಂದ ಬಂದ ಕೃಷ್ಣಶಾಸ್ತ್ರಿಗಳು, ಸಹಜವಾಗಿಯೇ ಸಾಹಿತ್ಯದೆಡೆಗೆ ಆಕರ್ಷಿತರಾದರ ಕೃಷ್ಣಶಾಸ್ತ್ರಿಗಳು ಮುಂದೆ ಹಲವಾರು ಅಪರೂಪದ ಕೃತಿಗಳನ್ನು ಸಾರಸತ್ವಲೋಕಕ್ಕೆ ಅರ್ಪಸಿದರು.'ತುಂಬಿ' ಇವರ ಪ್ರಥಮ ಕವನ ಸಂಕಲನವೆನ್ನ ಬಹುದು. ಇವರು ಬರೆದ ನಾಟಕಗಳೆಂದರೆ ಹಳ್ಳಿಚಿತ್ರ, ಹಳ್ಳಿಮೇಷ್ಟ್ರು, ಆಕಸ್ಮಿಕ, ಪಾಶುಪತಾಸ್ತ್ರ, ಏಕಲವ್ಯ, ಸೋಹ್ರಾಬ್ - ರುಸ್ತುಂ, ತೆನಾಲಿ ರಾಮ, ವಿಚಿತ್ರ ಸಾಮ್ರಾಜ್ಯಂ, ಅಲ್ಲಾವುದ್ದೀನ್, ಹಿಂಗೂ ಮಾಡಿ ನೋಡ್ರೀ. ಆಕಾಶದಗಲ ನಗುವಿನ ಅವಧೂತ, ಸಾಹಿಗಳ ಸ್ಮೃತಿ (ಬೇಂದ್ರ, ವಿ.ಸೀ.,ಡಿ.ವಿ.ಜಿ.,ದೇವುಡು ಅವರೊಂದಿಗಿನ ನೆನಪುಗಳು), ಮರೆಯಾಲಾದೀತ್ತೇ?, ಎಲೆ ಮರೆಯ ಆಲರು (ನಿರೂಪಣೆ: ನ.ರವಿಕುಮಾರ್) ಇವರ ಕೃತಿಗಳು . ಡಬ್ಲ್ಯ.ಸಿ.ಸ್ಯಾಂಡರ್ಸ್ರ 'ಇನ್ನರ್ ವಾಯ್ಸ್' ಕೃತಿಯನ್ನು 'ಅಂತರ್ ಧ್ವನಿ'ಯಾಗಿ ಕನ್ನಡಕ್ಕೆ ಭಾವಾನುವಾದ ಮಾಡಿದ್ದಾರೆ.ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಹೈಸ್ಕೂಲ್ ಓದುತ್ತಿರುವಾಗ ಮಹಾತ್ಮ ಗಾಂಧಿಯವರ ಗಾಢಪ್ರಭಾವಕ್ಕೆ ಒಳಗಾಗಿ ಸ್ವಾತಂತ್ರ ಚಳುವಳಿಯಲ್ಲಿಯೂ ಭಾಗವಹಿಸಿದರು. 1926 ರಲ್ಲಿ ಗಾಂಧಿಜಿಯವರು ಮೈಸೂರು ಸಂಸ್ಥಾನದ ಅತಿಥಿಯಾಗಿ ಬಂದಾಗ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದ್ದಾರೆ. ಗಾಂಧಿವಾದದ ಅಪ್ಪಟ ಅಭಿಮಾನಿಯಾದ ಇವರು ಸಂಕಲ್ಪದಂತೆ ಇಂದಿಗೂ ಖಾದಿಧಾರಿಯಾಗಿಯೆ ಉಳಿದಿದ್ದಾರೆ. ಆಚಾರ್ಯ ವಿನೋಬಾ ಅವರ ಭೂದಾನ ಚಳುವಳಿಯಲ್ಲಿಯೂ ಭಾಗವಹಿಸಿದ್ದಾರೆ.ಮೈಸೂರುನಲ್ಲಿ ಬಿ.ಇಡಿ. ಪದವಿಯನ್ನು ಮುಗಿಸಿದ ನಂತರ ಹೆಗ್ಗೆರೆ, ಮೀರಾಸಾಬಿಹಳ್ಳಿ, ದೇವನೂರು, ಚಿತ್ರದುರ್ಗ,ಕಳಸಾ ಮುಂತಾದ ಕಡೆಗಳಲ್ಲಿ ಉಪಾದ್ಯಾಯ ವೃತ್ತಿಯನ್ನು ನಿರ್ವಹಿಸಿದ್ದಾರೆ. ಚಳ್ಳಕೆರೆ ತಾಲ್ಲೂಕಿನ ಮೀರಾಸಾಬಿಹಳ್ಳಿ, ಹೆಗ್ಗೆರೆ ಗ್ರಾಮಗಳಲ್ಲಿ ಸ್ಥಳಿಯ ಸಂಘನೆಯಿಂದ ಸರ್ಕಾರದ ನೆರವಿಲ್ಲದೆ ಶಾಲಾ ಕಟ್ಟಡ, ಆಸ್ಪತ್ರೆ, ಬಯಲು ರಂಗಮಂದಿರ, ಶಿವಾಲಯ, ಶಿಕ್ಷಕರ ವಸತಿ ಗೃಹ, ರಸ್ತೆಗಳ ನಿರ್ಮಾಣ ಇವೆಲ್ಲವೂ ಇವರ ಸಾಮಾಜಿಕ ಸೇವೆಗೆ ಸಾಕ್ಷಿ .ಸಣ್ಣವಯಸಿನಲ್ಲಿಯೇ ಗರ್ಭಿಣಿ ಪತ್ನಿ ಹಾಗು ಮಗುನನ್ನು ಕಳೆದುಕೊಂಡ ಇವರು ಸಹಜವಾಗಿಯೆ ಆಧ್ಯಾತ್ಮದೆಡೆಗೆ ಆಕರ್ಷಿತರಾದರು. ಎರಡನೇ ಮದುವೆಯಾಗಲು ಇವರ ಸಹೊದರಿಯಾದ ಪಾರ್ವತಮ್ಮನವರ ಒತ್ತಡ ತಾಳಲಾರೆದೆ ತಮ್ಮ ಎಲ್ಲಾ ಹಲ್ಲುಗಳನ್ನು ಕೀಳಿಸಿಕೊಂಡು ಬಂದಿದ್ದರಂತೆ! ತಿರುವಣ್ಣಾಮಲೈನ ಶ್ರೀ ರಮಣ ಮಹರ್ಷಿಗಳ ದಿವ್ಯ ಸನ್ನಿಧಿಯಲ್ಲಿ ಬಹುದಿನದ ಕ್ಲೇಷ ಕಳೆದು ಒಂದು ಬಗೆಯ ಅಲೌಕಿಕ ಅನುಭಾವಕ್ಕೆ ಒಳಗಾದರು. ಆಶ್ರಮದಲ್ಲೆ ಕೆಲ ಕಾಲವಿದ್ದು ಆಧ್ಯಾತ್ಮಿಕ ಸಾದನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಮುಂದೆ ಆನಂದ ಆಶ್ರಮದ ಶ್ರೀ ರಾಮದಾಸರು, ಹೃಷಿಕೇಶದ ಸ್ವಾಮಿ ಶಿವಾನಂದರು, ಬಾಗೂರಿನ ಶ್ರೀ ಶರಣಮ್ಮ , ಮಲ್ಲಾಡಿಹಳ್ಳಿಯ ಶ್ರೀ ರಾಘವೇಂದ್ರ ಸ್ವಾಮಿಗಳು (ತಿರುಕ), ಶ್ರೀ ಜಿಡ್ಡು ಕೃಷ್ಣಮೂರ್ತಿ ಮೊದಲಾದ ಸತ್ಪರುಷರೊಂದಿಗೆ ಒಡನಾಟವಿಟ್ಟು ಕೊಂಡಿದ್ದರು. ಸಿದ್ಧಪುರುಷರು, ಅವಧೂತರು ಆದಂತ ಶ್ರೀ ಮುಕೂಂದೂರು ಸ್ವಾಮಿಗಳೊಂದಿಗೆ ಇದ್ದ ಇವರ ಒಡನಾಟಕ್ಕೆ ಅಕ್ಷರ ರೂಪು ಕೊಟ್ಟು ಯೆಗ್ದಾಗೆಲ್ಲಾ ಐತೆ ಕೃತಿರೂಪದಲ್ಲಿ ಹೊರ ತಂದಿರುತ್ತಾರೆ. ಈ ಕೃತಿಯು ಹಿಂದಿ, ಇಂಗ್ಲೀಷ್, ತೆಲಗು, ಮರಾಠಿ ಭಾಷೆಗಳಲ್ಲಿ ಅನುವಾದಗೊಂಡಿದೆ. ಪ್ರಸ್ತುತ ಸಂಸ್ಕೃತ, ಮಲೆಯಾಳಿ, ಬಂಗಾಳಿ, ತಮಿಳು, ಒರಿಯಾ, ಭಾಷೆಗಳಲ್ಲಿ ಅನುವಾದಕ್ಕೆ ಅಣಿಯಾಗುತ್ತಿದೆ. ನಾಡಿನ ಜಾನಪದ ಕ್ಷೇತ್ರಕ್ಕೆ ಇವರ ಸೇವ ಅಪಾರ. ಜಾನಪದ ಕಂಪ್ಯೂಟರ್, ನಾಡೋಜಾ ಹಾಗು ರಾಜ್ಯೋತ್ಸವ ಪ್ರಶಸ್ತಿ ವಿಜೇತ ' ಜನಪದ ಸಿರಿ' ಸಿರಿಯಜ್ಜಿಯನ್ನು ಪರಿಚಯಿಸಿದ ಹಿರಿಮೆ ಇವರದು. ಟಿಮೇಟಿ ಕ್ರಿಸ್ಟೋಫರ್ , ಕೆ.ಹಿಲ್. ಫೀಟರ್ ಜೆ.ಕ್ಲಾವುಸ್, ಆಂಡ್ರೂಸ್ ಮುಂತಾದವರಿಗೆ ಸಂಪನ್ಮೂಲ ವ್ಯಕ್ತಿಯಾಗಿ ಕೃಷ್ಣಶಾಸ್ತ್ರಿಗಳು ನೆರವಾಗಿದ್ದಾರೆ. ದೇಶಿಯ ಸಂಶೋಧಕರಾದ ಸನ್ಮಾನ್ಯ ಡಾ.ತಿ.ನಂ.ಶಂಕರನಾರಯಣ, ಢಾ.ಆರ್.ಶೇಷ ಶಾಸ್ತ್ರಿ, ಡಾ.ಕೃಷ್ಣಮೂರ್ತಿ ಹನೂರು, ಡಾ.ಎಂ.ಜಿ.ಈಶ್ವರಪ್ಪ ಮೊದಲಾದ ಜಾನಪದ ಸಂಶೋಧನೆಗೆ ಇವರಿದ್ದ ಕುಟೀರವೇ ಸ್ಪೂರ್ತಿಯ ನೆಲೆಯಾಗಿದೆ. ಜಾನಪದ ಜಂಗಮ ಡಾ.ಎಸ್.ಕೆ.ಕರೀಂಖಾನ್ ಅವರನ್ನು ಬೆಳಗೆರೆ ನಾರಯಣಪುರದಲ್ಲಿ ಗ್ರಾಮಸ್ಥರವತಿಯಿಂದ ಸನ್ಮಾನಿಸಿದ್ದಾರೆ.ಹಳ್ಳಿಚಿತ್ರ ನಾಟಕಕ್ಕೆ - ಶ್ರೇಷ್ಟ ನಾಟಕ ಪ್ರಶಸ್ತಿ, ಕೇಂದ್ರ ಸರ್ಕಾರದ ರಾಷ್ಟ್ರೀಯ ನಾಟಕ ಪುರಸ್ಕಾರ. ಮೈಸೂರು ರಾಜ್ಯ ಸರ್ಕಾರದಿಂದ ಉತ್ತಮ ಶಿಕ್ಷಕ ಪ್ರಶಸ್ತಿ (1970), ಕೇಂದ್ರ ಸರ್ಕಾರದಿಂದ ಉತ್ತಮ ಶಿಕ್ಷಕ ಪ್ರಶಸ್ತಿ (1971), ಚಿತ್ರದುರ್ಗದಲ್ಲಿ ನಡೆದ ಧರ್ಮ ಸಮ್ಮೇಳನದಲ್ಲಿ ಸೇವಾರತ್ನ ಪ್ರಶಸ್ತಿ. ಚಿಕ್ಕಮಗಳೂರಿನ ಅಳಾಸಿಂಗಚಾರ್ ಪ್ರಶಸ್ತಿ. 1996ರಲ್ಲಿ ನಡೆದ ಚಿತ್ರದುರ್ಗ ಜಿಲ್ಲ ಸಾಹಿತ್ಯ ಸಮ್ಮೇಳನದ ಅಧ್ಕ್ಷತೆಯನ್ನೂ ವಹಿಸಿದ್ದಾರೆ.ಚಿತ್ರದುರ್ಗದ ಅಭಿಮಾನಿಗಳು ಚಿನ್ಮಯಿ ಎಂಬ ಸಂಭಾವನ ಗ್ರಂಥವನ್ನು ಅರ್ಪಸಿದ್ದಾರೆ. ಅರ್ಪಣೆ - ಚಿಕ್ಕಮಗಳೂರಿನ ಅಭಿಮಾನಿಗಳು ಅರ್ಪಸಿದ ಸಂಭಾವಾನ ಗ್ರಂಥ.ಬಬಬಬಬೆಳಗೆರೆ ಕೃಷ್ಣಶಾಸ್ತ್ರಿಗಳ ತಂದೆಯಾದ ಶ್ರೀ ಚಂದ್ರಶೇಖರ ಶಾಸ್ತ್ರಿಗಳವರ ಆಶಯದಂತೆ ಹಾಗು ಅಣ್ಣ ಸೀತಾರಾಮಶಾಸ್ತ್ರಿಗಳವರ ಆರ್ಥಿಕ ಸಹಕಾರದಿಂದ 1967ರಲ್ಲಿ , ತಮ್ಮ ಹಿರಿಯರಿಂದ ಬಳುವಳಿಯಾಗಿ ಬಂದಂತ ಮನೆಯಲ್ಲಿಯೇ ಶ್ರೀ ಶಾರದ ಮಂದಿರವನ್ನು ವಿದ್ಯುಕ್ತವಾಗಿ ಪ್ರಾರಂಭಿಸಿದರು. ಗ್ರಾಮೀಣ ಅಲಕ್ಷಿತ ಬಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವನ್ನು ನೀಡಬೇಕೆಂಬ ಮಹತ್ವಾಕಾಂಕ್ಷೆಯಿಂದ ಸರ್ಕಾರದ ಯಾವುದೇ ನೆರವಿಲ್ಲದೇ ಆರಂಭಗೊಂಡ ಈ ಸಂಸ್ಥೆ ಇಂದಿಗೂ 750 ವಿದ್ಯಾರ್ಥಗಳಿಗೆ ಯಾವುದೆ ರೀತಿಯ ಸೇವಾ ಶುಲ್ಕವಿಲ್ಲದೆ ಉಚಿತ ವಿದ್ಯೆ,ಉಚಿತ ಊಟ , ಉಚಿತ ವಸತಿ ಕಲ್ಪಸಿಕೊಡಲಾಗುತ್ತಿದೆ. ಇಂದು ಶಿಕ್ಷಣ ವ್ಯವಸ್ಥೆ ಒಂದು ಉದ್ಯಮವಾಗಿರುವಾಗ, ಬೆಳಗೆರೆ ಕೃಷ್ಣಶಾಸ್ತ್ರಿಗಳು ಏಕವ್ಯಕ್ತಿ ಸಂಸ್ಥೆಯಾಗಿ ಯಾವುಧೇ ರೀತಿಯ ಫಲಾಪೇಕ್ಷೆಯಿಲ್ಲದೆ ನಾಲ್ಕು ದಶಕಗಳಿಂದ ಅವಿರತವಾಗಿ ದುಡಿಯುತ್ತಿದ್ದಾರೆ. ಎರಡು ಬಾರಿ ಹೃದಯಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು ಎಂದು ಬತ್ತದ ಚೈತನ್ಯದ ಚಿಲುಮೆಯ ಈ ಶಾಸ್ತ್ರಿಗಳು! ಆದರ್ಶಯುತವಾಗಿ ಬದುಕಿದವರು ಬಹಳಷ್ಟು ಮಂದಿ ಬದುಕೇ ಆದರ್ಶವಾಗಿಸಿಕೊಂಡವರು ವಿರಳ ಅಂತಹರ ಸಾಲಿಗೆ ಈ ಬಿಳಿಯ ಬಟ್ಟೆಯ ಜಂಗಮ ಸೇರುತ್ತಾರೆ. ಇಂತಹ ಶಾಸ್ತ್ರಿಗಳಿಗೆ ಕೊನೆಗೂ ಡಾಕ್ಟರೇಟ್ ಗೌರವ ದಕ್ಕಿದೆ. ಪ್ರಶಸ್ತಿ-ಪುರಸ್ಕಾರಗಳೇನಿದ್ದರು ನಮ್ಮ ಮುಚ್ಚಟೆಯೇ ಹೊರತು ಈ ನಿರ್ಮೋಹಿ ಸಂತನ ಮೇಲೆ ಯಾವುದೇ ರೀತಿಯ ಪ್ರಭಾವ ಬೀರುವುದಿಲ್ಲ. ಈ ಮಹಾನ್ ಚೇತನಕ್ಕೆ ಭಗವಂತ ಇನ್ನೂ ಹೆಚ್ಚಿನ ಆರೋಗ್ಯ ಕರುಣಿಸಲಿ ,ಇದೇ ಅವರೆಲ್ಲ ಅಭಿಮಾನಿಗಳ ಹಾರೈಕೆ.

ಚಿತ್ರದುರ್ಗದ 'ಸಿರಿ'ಯಜ್ಜಿ


ಕನ್ನಡ ಸಾಹಿತ್ಯ ಪ್ರಪಂಚದ ಅನರ್ಘ್ಯರತ್ನ ಜಾನಪದ ಸಾಹಿತ್ಯ ಇಂತಹ ಜಾನಪದ ರತ್ನಗಳ ಅಸಾಧಾರಣ ಸ್ಮರಣಶಕ್ತಿಯ ಜನಪದಸಿರಿ ಸಿರಿಯಜ್ಜಿ. ಚಳ್ಳಕೆರೆ ತಾಲ್ಲೂಕು ಯಲಗಟ್ಟೆ ಗೊಲ್ಲರಹಟ್ಟಿ ಅಜ್ಜಿಯ ಹುಟ್ಟೂರು. ಈರಪ್ಪ-ಕಾಡಮ್ಮ ದಂಪತಿಗಳ ಮಗಳು. ವಿದ್ಯಾಭ್ಯಾಸದಿಂದ ವಂಚಿತಳಾದರೂ ಸಹ ವಿದ್ವತ್ತನ ಗಣಿಯಾಗಿ ಹತ್ತು ಸಾವಿರ ಪದಗಳ ಒಡತಿಯಾಗಿ ಜನಮನ ಗೆದ್ದಿದ್ದಾರೆ.


ಈ ಜಿಲ್ಲೆಯ ಕಾಡುಗೊಲ್ಲರ ಜನಾಂಗವು ನಮ್ಮ ಸಂಸ್ಕೃತಿ ಜೀವಂತ ಪಳೆಯುಳಕೆ, ಇವರ ಸಂಪ್ರದಾಯ, ನಂಬಿಕೆ ಮತ್ತು ಆಚರಣೆಯಿಂದಾಗಿ ತಮ್ಮದೇ ಆದ ವೈಶಿಷ್ಟವನ್ನು ಮೆರಿದಿದ್ದಾರೆ. ಅಂತಹ ಹಬ್ಬಹರಿದಿನಗಳ ಆಚರಣೆ, ಮದುವೆಯ ಸಮಾರಂಭಗಳಲ್ಲಿ ಸಿರಿಯಜ್ಜಿಯ ಹಾಡು ಗಂಗೆಯಂತೆ ಅಲೆಅಲೆಯಾಗಿ ಹರಿದುಬರುತ್ತೆ.


ಬೆಳಗೆರೆ ಕೃಷ್ಣಶಾಸ್ತ್ರಿಗಳ ಪ್ರೊತ್ಸಹಾದಿಂದಾಗಿ, ಸಿರಿಯಜ್ಜಿಯ ಜನಪದ ಹಾಡುಗಳ ಭಂಡಾರವೇ ನಮ್ಮ ಮುಂದಿದೆ ."ಮಹಸತಿ ಕಾಟವ್ವ”, ”ಕತ್ತಲೆ ದಾರಿದೂರ” ಎನ್ನುವ ಕತನಗೀತೆಗಳು ಜನಮನ ಗೆದ್ದಿವೆ. ಗೊಲ್ಲ ಜನಾಂಗದ ದೇವರ ಹಾಡುಗಳು ಜನರನ್ನು ಭಕ್ತಿಪರವಶರನ್ನಾಗಿಸಿದೆ. ಮಾಜಿ ಮುಖ್ಯಮಂತ್ರಿ ಗುಂಡುರಾಯರು ‘ಜನಪದಸಿರಿ’ ಎಂಬ ಬಿರುದನ್ನಿತ್ತು ಸನ್ಮಾನಿಸಿದ್ದಾರೆ. ನಾಡಿನ ಪ್ರತಿಷ್ಟಿತ ಪ್ರಶಸ್ತಿಯಾದಂತಹ ನಾಡೋಜ ಪ್ರಶಸ್ತಿಯನ್ನು ಕನ್ನಡ ವಿಶ್ವವಿದ್ಯಾಲಯ ನೀಡಿ ಗೌರವಿಸಿದೆ. ಹಾಗೂ ಕರ್ನಾಟಕ ಜನಪದ ಅಕಾಡೆಮಿಯ ಜಾನಪದಶ್ರೀ ಎಂಬ ಬಿರುದನ್ನು ನೀಡಿ ಪುರಸ್ಕರಿಸಿದೆ. ಅನೇಕ ಸಂಘ-ಸಂಸ್ಥೆಗಳು, ಜನಪದ ಮೇಳ, ಮಠಮಾನ್ಯಗಳಿಂದ ಪ್ರಶಸ್ತಿ ಪಡೆದ ಸಿರಿಯಜ್ಜಿ ‘ನಡೆದಾಡುವ ಜಾನಪದಕೋಶ’ ವಾಗಿದ್ದಾರೆ.

ನಮ್ಮ ಚಿತ್ರದುರ್ಗ ನಿಜವಾದ ಜಾನಪದ ಸಿರಿ ಎಂದರೆ ಸಿರಿಯಜ್ಜಿ. ಹತ್ತು ಸಾವಿರ ಜಾನಪದ ಗೀತೆಗಳನ್ನು ಕೇವಲ ತನ್ನ ನೆನಪಿನ ಶಕ್ತಿಯಿಂದಲೇ ಹಾಡುವ, ಅನಕ್ಷರಸ್ಥ ವಯೋವೃದ್ದೆ ನಮ್ಮ "ಸಿರಿಯಜ್ಜಿ".

- ಆರ್.ರಾಘವೇಂದ್ರ, ಚಳ್ಳಕೆರೆ.

+91 9916822102

ಗುರುವಾರ, ಜನವರಿ 22, 2009

ಸಾಹಿತ್ಯ ಸಮ್ಮೇಳನವ ಆಚರಿಸುವ ಬನ್ನಿ....

75ನೇ ಕನ್ನಡ ಸಾಹಿತ್ಯ ಸಮ್ಮೇಳನ,
ಅಂದು ನಮಲ್ಲಿರುವುದು ಸಂತಸದ ಚೇತನ.
ನಾವೆಲ್ಲಾ ಜೊತೆಗೂಡಿ ಹೋಗೋಣ,
ಸಂಭ್ರಮದ ಸವಿರುಚಿಯ ಸವಿಯೋಣ.


ಹಾಯ್ ಗೆಳೆಯರೇ....


2009ನೇ ಸಾಲು ಬಂದಿರುವುದು ಒಂದು ಸಂತೋಷದ ವಿಷಯ. ಏಕೆಂದರೆ ವರ್ಷದ ಆರಂಭದಲ್ಲಿಯೇ ದೇವರು ನಮಗೆ ಸಂತಸದ ಕ್ಷಣಗಳನ್ನು ಆಚರಿಸಲು ದಯಪಾಲಿಸಿರುವುದು ನಮ್ಮೆಲ್ಲರ ನಸೀಬು. ಸಾಹಿತ್ಯ ಎಂಬುದು ನಿನ್ನೆ ಇಂದಿನದಲ್ಲ. ಅದು ಗತಕಾಲದ ಗಣಿ. ಇಂತಹ ವೈಭವವನ್ನು ನಮ್ಮ 'ಚಿತ್ರದುರ್ಗ'ದಲ್ಲಿ ಅಗೆದು ಹೊರತೆಗೆದು ಇಡೀ ವಿಶ್ವಕ್ಕೇ ಇದರ ಶ್ರೇಷ್ಠತೆಯನ್ನು ಸಾರಲು ಹೊರಟಿರುವುದು ತುಂಬಾ ಗಮನಾರ್ಹ.

"ವರ್ಷದ ಸ್ಪರ್ಶದಿಂದ ಕಲ್ಲು ಹೊಳೆದಂತೆ, ಸಾಹಿತ್ಯಾಭಿಷೇಕದಿಂದ ಇಂದು ಚಿತ್ರದುರ್ಗ ಫಳಫಳನೇ ಥಳಿಸುತ್ತಿದೆ" ಅಬ್ಬಾ! ಕಲೆಯ ರುಚಿಯನ್ನು ಸವಿಯುವುದು ಎಷ್ಟೊಂದು ಜನ್ಮತಾಃ ಕೋಟಿ ಪುಣ್ಯ. ಕನ್ನಡ ನಾಡು, ನುಡಿ, ಸಂಸ್ಕೃತಿಯು ಇಂದು ಉತ್ತುಂಗ ಶಿಖರಕ್ಕೆ ಏರಿರುವುದು ಕನ್ನಡಮ್ಮನ ಕೃಪೆ. ಕಲೆ ಎಂಬುದು ಸುರಪಾನವಿದ್ದಂತೆ. ಕಲೆಯ ಸ್ವಾಧಿಷ್ಟ ರುಚಿ ಸವಿಯಲು ನಮ್ಮ ದುರ್ಗದ ಜನರ ಅದೃಷ್ಟ. ಇಂತಹ ನಾಡಲ್ಲಿ ಹುಟ್ಟಿರುವುದೇ ನಮ್ಮ ಪುಣ್ಯ. 'ಜಾತಕ ಪಕ್ಷಿ, ಮಳೆ ಬರುವುದನ್ನೇ ಕಾಯುತ್ತಾ, ಆಕಾಶವನ್ನೇ ನೋಡುವಂತೆ; ಸಾಹಿತ್ಯ ಸಮ್ಮೇಳನದ ಸಂಭ್ರಮದ ಆಚರಣೆಯನ್ನು ಸುಸೂತ್ರವಾಗಿ ನಡೆಸಲು ಹಾತೊರೆಯುತ್ತಿದ್ದೇವೆ.

ಅಂದಿನ ಈ ಹಬ್ಬ, ದುರ್ಗದ ಎಲ್ಲಾ ಮನೆಯಲ್ಲಿ ಕನ್ನಡ ದೀಪ ಹಚ್ಚಲಿ. ಆ ಬೆಳಕಿನಲಿ ದುರ್ಗದ ಕೀರ್ತಿ ಪ್ರಕಾಶಿಸಲಿ.

ಎಲ್ಲಿಂದಲಾದರೂ ಬಾ ಕನ್ನಡದ ಕಂದ,
ಮತ್ತೆಲ್ಲೂ ಸಿಗದೂ ಇಂಥಾ ಆನಂದ,
ನಮ್ಮೆಲ್ಲರ ಸಂತಸಕೆ, ಸಡಗರಕೆ ಪಾರವೇ ಇಲ್ಲ......!

- ಕೆ. ಮೆಹಬೂಬಿ, ಪಗಡಲಬಂಡೆ.
+91 99017 54041

Chitradurga : www.chitharadurga.com

VIJAYA KARNATAKA: 07 Jan 2009. Chitradurga

ಭಾನುವಾರ, ಜನವರಿ 18, 2009

ಬಾನಿಂದ ಕಂಡ... ಚಿತ್ರದುರ್ಗದ ಕೋಟೆ...!

( Chitradurga Fort in Google earth)

ದುರ್ಗದ ಪಿಲ್ಲೋಲಾವಾ (Pillolava at Chitradurga District)

ಪಿಲ್ಲೋ ಅಂದರೆ ದಿಂಬು. ಲಾವಾ ಜ್ವಾಲಾಮುಖಿಯಿಂದ ಹೊರಬೀಳುವ ರಸ. ದಿಂಬಿಗೂ, ಈ ಬೆಂಕಿಯಂಥ ರಸಕ್ಕೂ, ಚಿತ್ರದುರ್ಗಕ್ಕೂ ಏನು ಸಂಬಂಧ?

ಸಮುದ್ರದಲ್ಲಿ ಉಂಟಾದ ಜ್ವಾಲಾಮುಖಿಯಿಂದ ಹೊರ ಬಿದ್ದ ಶಿಲಾರಸ ನೀರಿನ ಮೇಲೆ ತಣಿದಾಗ ದಿಂಬಿನಾಕಾರದ ರೂಪ ಪಡೆದುಕೊಂಡವು. ಈ ಅವಶೇಷವನ್ನು ಪಿಲ್ಲೋಲಾವಾ ರಚನೆಗಳೆಂದು ಕರೆಯುತ್ತಾರೆ.

ಚಿತ್ರದುರ್ಗದಿಂದ ಸುಮಾರು 16 ಕಿ.ಮೀ (ಬೆಂಗಳೂರಿನಿಂದ ಸುಮಾರು 180 ಕಿ.ಮೀ.)ದೂರದಲ್ಲಿರುವ ಮರಡಿಹಳ್ಳಿಯಲ್ಲಿ ಈ ಪಿಲ್ಲೋ ಲಾವಾ ಶಿಲೆಗಳಿವೆ. ಈಗ ಆರಂಭದ ಪ್ರಶ್ನೆಗೆ ಉತ್ತರ ಸಿಕ್ಕಿರಬಹುದು.

ಭೂಗರ್ಭಶಾಸ್ತ್ರದ ಪ್ರಕಾರ ಚಿತ್ರದುರ್ಗದ ಬಹುಭಾಗ ಸುಮಾರು 2500 ಮಿಲಿಯನ್ ವರ್ಷಗಳ ಹಿಂದೆ ಸಮುದ್ರದಿಂದ ಬಹುಭಾಗ ಆವೃತ್ತವಾಗಿತ್ತು. ಈ ಅವಧಿಯಲ್ಲಿ ಸಂಭವಿಸಿದ ಜ್ವಾಲಾಮುಖಿಯೊಂದರಿಂದ ದಿಂಬಿನಾಕಾರದ ರಚನೆಗಳು ರೂಪ ಪಡೆದವು.
ಭಾರತದಲ್ಲಿ ಒರಿಸ್ಸಾದ ಕಿಯೋಂಜರ್ ಜಿಲ್ಲೆಯ ನೊಮಿರಾದಲ್ಲಿ ಶಿಲಾ ರಚನೆಗಳನ್ನು ಕಾಣಬಹುದು.


ಚಿತ್ರದುರ್ಗ ಹಾಗೂ ಸುತ್ತಮುತ್ತಲ ಜಿಲ್ಲೆಯ ಬಹುಭಾಗ ಇತಿಹಾಸದ ಬಗ್ಗೆ ಈ ಶಿಲೆಗಳು ಬೆಳಕು ಚೆಲ್ಲಿವೆ. ದುರಾದೃಷ್ಟವೆಂದರೆ ಈ ಶಿಲಾರಚನೆಗಳು ಇರುವ ಬಗ್ಗೆ ಅನೇಕರಿಗೆ ಮಾಹಿತಿ ಇಲ್ಲ. ಇಲ್ಲಿನ ಶಿಲೆಗಳು ಮರಡಿಹಳ್ಳಿಯ ಮನೆಗಳ ಮುಂದೆ ಬಿದ್ದಿವೆ. ಕಟ್ಟೆ, ಮನೆ ನಿರ್ಮಾಣಕ್ಕೆ ಬಳಕೆಯಾಗಿವೆ. ಗುಡ್ಡದ ಮೇಲಿರುವ ದೊಡ್ಡ ಗಾತ್ರದ ಶಿಲೆಗಳ ಮೇಲೆ ಪ್ರೇಮಿಗಳ ಹೆಸರುಗಳು ರಾರಾಜಿಸುತ್ತಿವೆ.

ಪ್ರಪಂಚದ ಕೆಲವೇ ದೇಶಗಳಲ್ಲಿ ಇಂಥ ಶಿಲಾರಚನೆಗಳು ನೋಡಲು ಸಿಗುತ್ತವೆ ಎನ್ನುತ್ತಾರೆ ಭೂಗರ್ಭಶಾಸ್ತ್ರ ವಿಜ್ಞಾನಿಗಳು. ಇತ್ತೀಚೆಗೆ ಕಾಂಗೋದ ವಿಜ್ಞಾನಿಗಳೂ ಇಲ್ಲಿನ ಶಿಲೆಗಳ ಮಾದರಿ ಸಂಗ್ರಹಿಸಿ ಒಯ್ದಿದ್ದಾರೆ. ಇದರ ಕೆಲ ಸ್ಯಾಂಪಲ್ ಇಂಗ್ಲೆಂಡ್ ವಸ್ತು ಸಂಗ್ರಹಾಲಯದಲ್ಲೂ ಇಡಲಾಗಿದೆ. ಇಂಥ ವಿಶೇಷವಿರುವ ಈ ಸ್ಥಳ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ.


(ಈ ಮಾಹಿತಿ ಹಾಗೂ ಚಿತ್ರಗಳನ್ನು ಎಸ್.ಜೆ.ಎಂ. ಮಹಾವಿದ್ಯಾಲಯದಲ್ಲಿ ಸಸ್ಯಶಾಸ್ತ್ರ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಎಂ.ಸುಷ್ಮಾರಾಣಿ ಕಳಿಸಿಕೊಟ್ಟಿದ್ದಾರೆ. )

ಶುಕ್ರವಾರ, ಜನವರಿ 16, 2009

ಸಡಗರದ ಅಮೃತ ಮಹೋತ್ಸವ...


ಚಿತ್ರದುರ್ಗದಲ್ಲಿ ನಡೆಯುತ್ತಿರುವ 75 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ದತೆ ತುಂಬಾ ಅದ್ಧೂರಿಯಾಗಿ ನಡೆಯುತ್ತಿದೆ. ಅಮೃತ ಸಮ್ಮೇಳನದ ಅಧ್ಯಕ್ಷರು ಹಾಗೂ ಕುಟುಂಬ ವರ್ಗದವರನ್ನು ಹೊಳಲ್ಕೆರೆ ರಸ್ತೆಯಲ್ಲಿರುವ ಕನಕ ವೃತ್ತದಿಂದ, ಗಾಂಧಿ ಸರ್ಕಲ್, ಬಿ.ಡಿ.ರೋಡ್ ಮಾರ್ಗವಾಗಿ ಒನಕೆ ಓಬವ್ವ ಸ್ಟೇಡಿಯಂವರೆಗೂ ರಥದ ಮೂಲಕ ಮಹಾವೇದಿಕೆಗೆ ಸ್ವಾಗತಿಸಲಾಗುವುದು ಎಂದು ಚಿತ್ರದುರ್ಗ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಕೆ.ಎಂ.ವೀರೇಶ್ ರವರು ತಿಳಿಸಿದ್ದಾರೆ.

ಚಿತ್ರದುರ್ಗದ ಅಮೃತ ಸಮ್ಮೇಳನದ ಮಹಾವೇದಿಕೆಯನ್ನು ಐತಿಹಾಸಿಕ ಚಿತ್ರದುರ್ಗವನ್ನು ವರ್ಣರಂಜಿತವಾಗಿ ಚಿತ್ರಿಸಲು, ಚಿತ್ರದುರ್ಗದ ಮಹತ್ವವನ್ನು ಸಾರಲು ಅದ್ಬುತವಾಗಿ ಸಿಂಗರಿಸಲಾಗುವುದು. ಅಲ್ಲದೇ ಮಹಾವೇದಿಕೆಯ ನಿರ್ಮಾಣಕ್ಕಾಗಿ ರೂ. 2.5 ಲಕ್ಷಗಳ ಅನುದಾನವನ್ನು ನಿಗಧಿಪಡಿಸಲಾಗಿದೆ. ವೇದಿಕೆಯಲ್ಲಿ ಸಿದ್ದಪಡಿಸಿದ ಆಸನಗಳ ಹಿಂಭಾಗದ ಪರದೆಯಲ್ಲಿ ಚಿತ್ರದುರ್ಗದ ಇತಿಹಾಸದ ಮೇಲೆ ಬೆಳಕು ಚೆಲ್ಲುವಂತಹ ಅಪ್ರತಿಮ ಕಲೆಯನ್ನು ಮೂಡಿಸುವ ಹೊಣೆಯನ್ನು ಶ್ರೀ ಕಣುಮೇಶ್, ಪ್ರಾಂಶುಪಾಲರು, ಎಸ್.ಜೆ.ಎಂ. ಕಲಾ ಶಾಲೆ, ಚಿತ್ರದುರ್ಗ ರವರು ಹೊತ್ತಿದ್ದಾರೆ. ಅವರ ಕೈಕುಂಚದಲ್ಲಿ ಮೂಡುತ್ತದೆ 'ಚಿತ್ರ'ದುರ್ಗ - 'ಚಿತ್ತಾರ'ದುರ್ಗ.

ನಾಲ್ಕು ದಿನಗಳ ಕಾಲ ನಡೆಯುವ ಈ ಸಮ್ಮೇಳನದಲ್ಲಿ ವಿವಿಧ ಗೋಷ್ಟಿಗಳಲ್ಲಿ ಭಾಗವಹಿಸುವ ಅತಿಥಿಗಳಿಗೆ, ವಿಷಯ ಮಂಡನೆ ಮಾಡುವ ಗಣ್ಯರಿಗೆ, ಸನ್ಮಾನಿತರಿಗೆ, ಹಾಗೂ ರಾಜ್ಯದ ಎಲ್ಲಾ ತಾಲ್ಲೂಕುಗಳ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುಗಳಿಗೆ ನೆನಪಿನ ಕಾಣಿಕೆ ನೀಡಲಾಗುವುದು ಸಂತಸದಿಂದ ವೀರೇಶ್ ರವರು ಉತ್ತರಿಸುತ್ತಾರೆ.

ನಿಜವಾಗಿಯೂ ಇದೇ ಅಲ್ಲವೇ ಚಿತ್ರದುರ್ಗದ ಅಮೃತ ಮಹೋತ್ಸವದ ಸಡಗರ.......

- ಆರ್.ರಾಘವೇಂದ್ರ, ಚಳ್ಳಕೆರೆ
+91 99168 22102

ಸೋಮವಾರ, ಜನವರಿ 12, 2009

ದುರ್ಗದಲ್ಲಿ 'ಅಮೃತ'..!



ಐತಿಹಾಸಿಕ ಜಿಲ್ಲೆಯ ಪ್ರತಿಯೊಬ್ಬ ಸಾಹಿತ್ಯಪ್ರೇಮಿಯಲ್ಲೂ ಸಂತಸದ ಹೊನಲು ನಕ್ಕು ನಲಿದಾಡುತಿದೆ. ಕಾರಣ ಚಿತ್ರದುರ್ಗದಲ್ಲಿ 75ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು. ಈ ಹಿಂದೆ ರಾಜ್ಯದ ಕೊಪ್ಪಳ, ಮುಧೋಳ, ದಾವಣಗೆರೆ, ಶಿವಮೊಗ್ಗ, ತುಮಕೂರುಗಳಂತಹ ನಗರಗಳಲ್ಲಿ ಸಾಹಿತ್ಯ ಜಾತ್ರೆ ನಡೆದಿತ್ತಾದರೂ, ಐತಿಹಾಸಿಕ ಪ್ರಸಿದ್ಧ ಚಿತ್ರದುರ್ಗದಲ್ಲಿ ಇದೇ ಮೊದಲು. ಅಲ್ಲದೇ 1915 ನೇ ಸಾಲಿನಿಂದ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದ 75ನೇ ಅಮೃತ ಮಹೋತ್ಸವ ನಡೆಯುತ್ತಿರುವುದು ದುರ್ಗದಲ್ಲಿನ ಸಂಭ್ರಮದ ಪ್ರಥಮ ವಿಶೇಷ.


ಇಲ್ಲಿನ ಇತಿಹಾಸ, ಕಲೆ, ಸಾಹಿತ್ಯ, ಶೌರ್ಯ, ಸಾಹಸ, ಧಾರ್ಮಿಕತೆ, ಶಾಂತಿ ಮುಂತಾದ ಎಲ್ಲಾ ಕ್ಷೇತ್ರದಲ್ಲೂ ತನ್ನ ಛಾಪನ್ನು ಹೊತ್ತಿದ್ದ ಚಿತ್ರದುರ್ಗವು ಇಂದು ಅಮೃತ ಸಂಭ್ರಮದ ಸಿರಿಯನ್ನು ಹೊರುವ ಸನ್ನದ್ದದಲ್ಲಿದೆ. ಪಾಳೆಯಗಾರರ ಕಾಲದಲ್ಲಿ ನಿರ್ಮಿತವಾದ ಕೋಟೆ ಇಂದಿಗೂ ಅಮೋಘವಾಗಿದೆ ಅಲ್ಲದೇ, ಆ ಕಾಲದ ದೇಗುಲಗಳು, ಸ್ಮಾರಕಗಳು ಎಲ್ಲರನ್ನೂ ಕೈಬಿಸಿ ಕರೆಯುತ್ತಿದೆ. ಶೌರ್ಯದ ಪ್ರತೀಕವಾದ ದುರ್ಗದ ಬಿಚ್ಚುಗತ್ತಿ ಭರಮಣ್ಣನಾಯಕ, ಮದಕರಿನಾಯಕ, ಹಾಗೂ ಒನಕೆ ಓಬವ್ವರಂತಹ ಜೀವನದ ಸಾಹಸಗಾಥೆ ಮೈರೋಮಾಂಚನ.


ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪರಂತಹ ರಾಷ್ಟ್ರಕವಿಗಳನ್ನೇ ಶಿಷ್ಯನಾಗಿ ಪಡೆದಂತಹ ಟಿ.ಎಸ್.ವೆಂಕಣ್ಣಯ್ಯರವರು ಜನಿಸಿದ ಬೀಡಿದು. ದುರ್ಗಾಸ್ತಮಾನದಂತಹ ಮೇರುಕೃತಿ ರಚಿಸಿದ ತ.ರಾ.ಸು. ರವರಂತಹವರು, ಮುಖ್ಯಮಂತ್ರಿಗಳಾದಂತಹ ಎಸ್.ನಿಜಲಿಂಗಪ್ಪವರು, ಸ್ವತಂತ್ರಪೂರ್ವ ಸಮಯದಲ್ಲಿ ಬರಗಾಲದ ಸಮಯದಲ್ಲಿ ಅಂಬಲಿದಾನ ಮಾಡಿದ ಕಾಶಿ ಅಪ್ಪಣಶೆಟ್ಟರು, ಅಪ್ರತಿಮ ಸಾಹಸಿಗಳ ಸೃಷ್ಟಿಯಲ್ಲಿ ತೊಡಗಿದ್ದ ಪೈಲ್ವಾನ್ ನಂಜಪ್ಪ, ಧಾರ್ಮಿಕತೆ ಸಾರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಶ್ರೀ ಮುರುಘಸ್ವಾಮಿಗಳಂತಹ ಪ್ರಾತಃಸ್ಮರಣೀಯರನ್ನು ಹೊಂದಿದ್ದ ನಮ್ಮ ಜಿಲ್ಲೆ ನಿಜಕ್ಕೂ ಧನ್ಯ.


ಅಖಿಲ ಭಾರತ ಸಮ್ಮೇಳನವಿನ್ನೇನೂ ಬಂದೇ ಬಿಟ್ಟಿತು. ಕೇವಲ 19 ದಿನಗಳು ಮಾತ್ರ ಬಾಕಿ. ಜಿಲ್ಲಾಡಳಿತದ ಚುರುಕು ಪ್ರಕ್ರಿಯೆಯಿಂದ ಚಿತ್ರದುರ್ಗ ನಗರದಲ್ಲಿ ರಸ್ತೆ ದುರಸ್ಥಿ, ವಸತಿ ವ್ಯವಸ್ಥೆ, ಶೌಚಾಲಯ, ಸ್ನಾನಗೃಹಗಳ ನಿರ್ಮಾಣದ ಕಡೆ ಗಮನ ನೀಡುತ್ತಿದೆ. ಅಲ್ಲದೇ ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಸಕ್ತರಿಗೆ ಸಮ್ಮೇಳನದ ಮಹಾವೇದಿಕೆಗೆ ಹೋಗಲು ಸುಮಾರು 50ಕ್ಕೂ ಬಸ್ ಸೌಕರ್ಯ ಕಲ್ಪಿಸಿದೆ. ಜಿಲ್ಲಾಧಿಕಾರಿಗಳಾದ ಅಮ್ಲಾನ್ ಆದಿತ್ಯ ಬಿಸ್ವಾಸ್, ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾದ ಕೆ.ಎಂ.ವೀರೇಶ್ ರವರು ಸೇರಿದಂತೆ ಜಿಲ್ಲೆಯ ಅನೇಕ ಗಣ್ಯರು, ಸಾಹಿತಿಗಳು, ಸಾಹಿತ್ಯಾಸಕ್ತರು ಮುಂತಾದವರು ಹಗಲಿರುಳೆನ್ನದೇ ತುಂಬಾ ಶ್ರಮಿಸುತ್ತಿದ್ದಾರೆ.



ಇಂತಹ ನಾಡಲ್ಲಿ ಇದೀಗ ಅಮೃತ ಸಂಭ್ರಮದ ಕಳೆ ಬಂದಿರುವುದು ಸಂತೋಷ. ಈ ಸಂತೋಷದಲ್ಲಿ ಯಾವುದೇ ಲೋಪವಾಗದೇ; ಎಲ್ಲಿಯೂ, ಯಾರಿಗೂ ನೋವಾಗದೇ ಉತ್ತಮವಾಗಿ ಸಮ್ಮೇಳನವು ನಡೆಯಲಿ ಎಂಬ ಆಶಯದೊಂದಿಗೆ.....


- ಆರ್.ರಾಘವೇಂದ್ರ, ಚಳ್ಳಕೆರೆ
99168 22102

ಶನಿವಾರ, ಜನವರಿ 10, 2009

ಸಂಭ್ರಮ ಸಮ್ಮೇಳನ

ದುರ್ಗದ ಕಲ್ಲಲ್ಲಿ ಹೂವಾಗಿ ಅರಳುತ್ತಿರುವ ಕಲೆಗೆ ನೆಲೆಯಾಗಿರುವ 75ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮೊದಲು ನಮ್ಮ ಹೃದಯಪೂರ್ವಕ ನಮನ. ಮಲೆನಾಡ ಮೈಸಿರಿಯು ಕಲೆಗೆ ತವರೂರು. ಇಂದು ಬೆಳ್ಳಿಬೆಟ್ಟದ ಆ ಕಲೆ ದುರ್ಗದ ನೆಲೆಯೂಗಿರುವುದು. ನಮ್ಮೆಲ್ಲರ ಹೆಮ್ಮೆಯ ವಿಷಯವಾಗಿದೆ. ಬಂಡೆಯ ಜನರು ಎಷ್ಟು ಗಟ್ಟಿಯೋ, ಅಷ್ಟೇ ಜೇನ ಸವಿ. ಇಲ್ಲಿಯ ಜನರಿಗೆ ಕಲ್ಲು ಕಡೆದು ಗಂಧ ತೆಗೆಯುವ ಶಕ್ತಿ ಆ ದೇವಿ ಉಚ್ಚಂಗಮ್ಮ ಅನುಗ್ರಹಿಸಿರುವುದು. ನಮ್ಮ ಈ ಕೋಟಿ ಪುಣ್ಯ.
ಇಂತಹ ನಾಡಲ್ಲಿ ಕನ್ನಡದ ಕಂಪು ಪಸರಿಸಲು ಹೊರಟಿರುವ ಎಲ್ಲಾ ಕಲಾಸಕ್ತರಿಗೆ, ಸಾಹಿತ್ಯಾಸಕ್ತರಿಗೆ, ನನ್ನ ಅಭಿನಂದನೆಗಳು. ನಮ್ಮ ನಾಡಲ್ಲಿ ಸಾಹಿತ್ಯದ ಅಮೃತ ಮಹೋತ್ಸವದ ಹಬ್ಬ ನಡೆಯುತ್ತಿರುವುದು 'ಬಾಳೆ ಎಲೆಯಲ್ಲಿ! ಹೋಳಿಗೆ ಊಟ ಮಾಡಿದಷ್ಟೇ' ಸಂತಸ. ಗಟ್ಟಿಕಲ್ಲಿನ ಕೆತ್ತನೆ ಶಿಲ್ಪನೆ ಶಿಲ್ಪಿಗೆ ಮನೋಲ್ಲಾಸ. ದುರ್ಗದ ಕಲೆಯ ಸಾಹಿತ್ಯ ಸವಿಯಲು ಕಲಾಸಕ್ತರಿಗೆ ಅಮೃತ ಕುಡಿದಷ್ಟೇ ರಸಾನುಭವವಾಗಿ ಸದಾ ಕಲೆಯ ಸೊಗಡು ನಮ್ಮಲ್ಲಿ ರಾರಾಜಿಸುತ್ತಿರಲಿ.
ಕವನಗಳೆಂಬ ಬೀಜವನ್ನು ಬಿತ್ತಿ,
ನಗೆಹನಿಯೆಂಬ ಹೂ ಕಂಡು,
ಮೇಘರಾಜ ಕಿಲಕಿಲನೆ ನಗುತಾ
ಹರ್ಷದ ಕಲೆಯ ವರ್ಷವನ್ನು ಬೆಳ್ಳಿಬೆಟ್ಟದ
ಮೇಲೆ ಚೆಲ್ಲಿ, ತಂಪಿನ ಹರ್ಷೋದ್ಗಾರ
ಎಲ್ಲೆಡೆ ಮೊಳಗಲಿ, ಮೊಳಗಲಿ...
ಕಂಪು ಇಂಪು ಕಲೆಯಾಗಿದೆ
ಅಂತೂ ಇಂತೂ ನೆಲೆಯಾಗಿದೆ.
ಕಂಪಿನ ಸುವಾಸನೆ
ಮನದಲ್ಲಿರುವ ನಿಶಾನೆ
ಚಿತ್ತಾರದುರ್ಗದ ಬನದ
ಮಲ್ಲಿಗೆ ಹೂ ನೋಡೋಣ ಬನ್ನಿ...
- ಕೆ.ಮೆಹಬೂಬಿ, ಪಗಡಲಬಂಡೆ
99017 54041

ಶುಕ್ರವಾರ, ಜನವರಿ 9, 2009

ಕನ್ನಡ ಸಾಹಿತ್ಯ ಸಮ್ಮೇಳನದ ಅಗತ್ಯತೆ..........

ಇಂದು ಕರುನಾಡು, ಕನ್ನಡ ಭಾಷೆ, ನಮ್ಮ ಸಂಸ್ಕೃತಿ ರಕ್ಷಣೆ, ಅಳಿವು, ಉಳಿವು ಎಂದೆಲ್ಲಾ ಹೋರಾಟ ನಡೆಸುತ್ತಿರುವ ಈ ಸಮಯದಲ್ಲಿ ಸಾಂಸ್ಥಿಕ ಪ್ರತಿನಿಧಿ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ ನ ವತಿಯಿಂದ ಹಮ್ಮಿಕೊಂಡಿರುವ 75ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಂಡಿರುವುದು ಹೆಮ್ಮೆಯ ಸಂಗತಿ. ಆದರೂ ಇಂದು ಕನ್ನಡ ಸಾಹಿತ್ಯ ಸಮ್ಮೇಳನಗಳು ಪ್ರತಿಷ್ಟಿತ ವ್ಯಕ್ತಿಗಳ ಹಬ್ಬವಾಗಿ ಗೋಚರಿಸುತ್ತಿರುವುದು ಸಹಾ ದುಃಖಕರವಾದ ಸಂಗತಿಯಾಗಿದೆ. ಒಂದೆಡೆ ಪರ, ಮತ್ತೊಂದೆಡೆ ವಿರೋಧ ವಾದ-ವಿವಾದಗಳು ಮಂಡನೆಯಾಗುತ್ತಿದೆ. ಇದರ ನಡುವೆ ಕನ್ನಡ ಸಾಹಿತ್ಯ ಸಮ್ಮೇಳನಗಳ ಅಗತ್ಯತೆ ಕುರಿತು ಚರ್ಚೆ ನಡೆಯಬೇಕಿದೆ.

ಸಮ್ಮೇಳನದ ಅಗತ್ಯತೆಯನ್ನು ಈ ಕೆಳಕಂಡ ಅಂಶಗಳಿಂದ ವ್ಯಕ್ತಪಡಿಸಬಹುದು.

  • ಕನ್ನಡ ಭಾಷೆಯು ಇಂದು ಭಾಷಾ ಸ್ಥಾನಮಾನ ಪಡೆದುಕೊಂಡಿದೆ. ಅದರ ಸದ್ಬಳಕೆಯ ದೃಷ್ಟಿಯಲ್ಲಿ ಕನ್ನಡದ ಬೆಳವಣಿಗೆ ಇಂತಹ ಸಮ್ಮೇಳನಗಳು ಒಂದು ವೇದಿಕೆಯಾಗುವ ಎಲ್ಲಾ ಅವಕಾಶಗಳಿವೆ.
  • ಕನ್ನಡ ಭಾಷೆಯು ಅತಿ ಪ್ರಾಚೀನವಾದ ದ್ರಾವಿಡ ಭಾಷೆಯಾಗಿದೆ. ಇದು ಇಂದು ಕರ್ನಾಟಕದ ಅಧಿಕೃತ ಭಾಷೆ. ಇದರ ಬೆಳವಣಿಗೆಗೆ ಅಗಾಧವಾಗಿದೆ. ಇದು ಕರ್ನಾಟಕದ ಸಾಂಸ್ಕೃತಿಕ ಪ್ರತಿನಿಧಿಯೂ ಹೌದು. ಹೀಗಿರುವಾದ ಕನ್ನಡ ಭಾಷೆಯ ಸಾಹಿತ್ಯ ವಿಚಾರ ಮಂಥನಕ್ಕೆ ಸಮ್ಮೇಳನಗಳು ಪ್ರಮುಖ ವೇದಿಕೆಯಾಗುವುದರಲ್ಲಿ ಅನುಮಾನವಿಲ್ಲ.
  • ಯಾವ ಭಾಷೆಗಳಾಗಲಿ ಅಳಿವು ಎಂಬುದು ಇಲ್ಲ. ಆದರೆ ಬದಲಾವಣೆಯು ಸಹಜ. ಈ ಬದಲಾಗುವ ಜಗತ್ತಿನಲ್ಲಿ ಇತರ ಭಾಷೆಗಳಂತೆ ಕನ್ನಡ ಭಾಷೆಯು ಸಹ ಬದಲಾಗುತ್ತಿರುವ ಪ್ರವೃತ್ತಿಗೆ ಒಳಗಾಗುತ್ತದೆ. ಇಂತಹ ಪರಿವರ್ತನೆಯ ಸಮಯದಿ ಭಾಷಾ ಬದಲಾವಣೆಗಳ ಆಗು-ಹೋಗುಗಳನ್ನು ಚರ್ಚಿಸಲು ಅನುವು ಮಾಡಿಕೊಡುವುದು ಇಂತಹ ಸಮ್ಮೇಳನಗಳ ಹೊಣೆಗಾರಿಕೆ.
  • ಭಾವನೆಗಳನ್ನು ವ್ಯಕ್ತಪಡಿಸಲು ಮಾತೃಭಾಷೆಗಿಂತ ಬೇರೆ ಭಾಷೆ ಪರಿಣಾಮಕಾರಿಯಲ್ಲ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಹಾಗೆಯೇ ಭಾಷೆಯ ಬೆಳವಣಿಗೆಗೆ ಅಲ್ಲಿನ ಪ್ರಾಥಮಿಕ ಶಿಕ್ಷಣವು ಮಾತೃಭಾಷೆಯಲ್ಲಿರಬೇಕು ಎಂಬುದು ಪ್ರಚಲಿತವಾಗಿರುವ ವಿಷಯ. ಇಂತಹ ಸೂಕ್ಷ್ಮ ಸಂಗತಿಗಳ ಗಹನವಾದ ಚರ್ಚೆ. ಸಾಧಕ-ಭಾದಕಗಳ ಕುರಿತು ಚಿಂತಿಸಲು ಇಂತಹ ಸಮ್ಮೇಳನಗಳು ಮಾರ್ಗದರ್ಶಿಯಾಗಬೇಕು.
  • ಕನ್ನಡ ಸಾಹಿತ್ಯ ಅತ್ಯುನ್ನತವಾದ 7 ಜ್ಞಾನಪೀಠ ಪ್ರಶಸ್ತ್ರಿಯನ್ನು ತನ್ನ ಮುಡಿಗೇರಿಸಿಕೊಂಡಿರುವ ಭಾಷೆ, ಇಂತಹ ಭಾಷೆಯಲ್ಲಿರುವ ಉತ್ತಮವಾಗಿ ಸಾಹಿತ್ಯಗಳನ್ನು ಕನ್ನಡಾಸಕ್ತರಿಗೆ ಪರಿಚಯಿಸುವ ಹಾಗೂ ವಿಶ್ವದ್ಯಾಂತ ಸಾರುವ ಕೆಲಸಗಳನ್ನು ಈ ಸಮ್ಮೇಳನಗಳು ಮಾಡಬೇಕಿದೆ.
  • ಕನ್ನಡನಾಡು ವಿಭಿನ್ನ ಸಂಸ್ಕೃತಿಗಳ ನೆಲೆಬೀಡು. ಇಂತಹ ಕರುನಾಡಿನ ಹತ್ತು ಹಲವು ಸಾಂಸ್ಕೃತಿಕತೆಯನ್ನು ಇಂದು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳು ಕೆಲಸ ಮಾಡಬೇಕಿದೆ.
  • ಕನ್ನಡ ನಾಡು ಕಲೆಗಳ ತವರೂರು. ಇಲ್ಲಿನ ಕಲೆಗಳು ವಿಶ್ವವಿಖ್ಯಾತ ಇಂತಹ ಕಲೆಗಳ ಉಳಿವು, ಪುನರುತ್ಥಾನ, ಬೆಳಸುವ ಜವಬ್ದಾರಿಯು ಸಹ ಇಂತಹ ಸಮ್ಮೇಳನಗಳ ಮೇಲೆ ಇದೆ.


ಈ ಮೇಲಿನ ಅಂಶಗಳೊಡನೆ ಹತ್ತು ಹಲವು ಅಂಶಗಳು ಕನ್ನಡ ಸಾಹಿತ್ಯ ಸಮ್ಮೇಳನಗಳ ಅಗತ್ಯತೆಯನ್ನು ಒತ್ತಿ ಹೇಳುತ್ತದೆ. ಹಲವಾರು ಬಂಡಾಯ ಸಮ್ಮೇಳನಗಳ ನಡುವೆ 74 ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದ ಕನ್ನಡ ಸಾಹಿತ್ಯ ಪರಿಷತ್ ಇಂದು 75 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುತ್ತದೆ.


ಈ ಕೆಳಕಂಡ ಅಂಶಗಳನ್ನೊಳಗೊಂಡ ಸಮ್ಮೇಳನದ ಅಗತ್ಯತೆ ಅಷ್ಟಾಗಿ ಬೇಕಿರುವುದಿಲ್ಲ.

  • ಇಂದಿನ ಸಮ್ಮೇಳನಗಳು ಆಯಾಯ ಆಯೋಜಕರ ಪ್ರತಿಷ್ಟತೆಯ ಪಣವಾಗಿ ರೂಪಿತವಾಗುತ್ತಿದೆ.
  • ಇಂದು ಕನ್ನಡದ ಹೆಸರಿನಲ್ಲಿ, ಸಮ್ಮೇಳನದ ಹೆಸರಿನಲ್ಲಿ, ಜಾತ್ರೆ ಸ್ವರೂಪದ ಹೆಸರಿನಲ್ಲಿ ಸಮ್ಮೇಳನಗಳು ನಡೆಯುತ್ತಿದ್ದು, ಪಕ್ಷಪಾತಿಗಳ ಮೇಲುಗೈ ಕಂಡು ಬರುತ್ತಿದೆ.
  • ಕನ್ನಡ ಭಾಷೆಯನ್ನು ಮೆರೆಸಬೇಕಾದ ಸಮ್ಮೇಳನಗಳಲ್ಲಿ ಇಂದು ವ್ಯಕ್ತಿಗಳನ್ನು ಮೆರೆಸುವ ಪ್ರವೃತ್ತಿ ಹೆಚ್ಚಾಗಿ ಕಂಡು ಬರುತ್ತಿದೆ. ಇದರಿಂದ ಸಮ್ಮೇಳನದ ಮೂಲ ಉದ್ದೇಶವೇ ಮರೆಯಾಗಿದೆ.
  • ಸಮ್ಮೇಳನದ ಅಧ್ಯಕ್ಷತೆಯ ಆಯ್ಕೆಯಿಂದ ಹತ್ತು ಹಲವು ಗೋಷ್ಟಿಗಳಲ್ಲಿ ಪಾಲ್ಗೊಳ್ಳುವಿಕೆಗಾಗಿ ನಡೆಯುವ ಲಾಬಿ ಇಂದಿನ ಕೀಳು ಮಟ್ಟದ ರಾಜಕಾರಣವನ್ನು ನಾಚಿಸುವಂತಿದೆ.
  • ಇಂದಿನ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯದ ಗಂಧವೇ ಮರೆಯಾಗಿದೆ. ಇಂತಹ ಸಮ್ಮೇಳನಗಳು ಬೇಕು ಬೇಡಗಳ ಸ್ಥಿತಿಯನ್ನು ನೆನೆದರೆ ಸಮ್ಮೇಳನಗಳು ಅಗತ್ಯವಿಲ್ಲ ಎಂಬುದರಲ್ಲಿ ಎರಡು ಮಾತಿಲ್ಲ.
  • ಇಂದಿನ ಸಮ್ಮೇಳನದಲ್ಲಿ ಎಲ್ಲರೂ ಪಾಲ್ಗೊಳ್ಳುವುದು ಅಗತ್ಯ. ಆದರೆ ಇಂದು ಕೇವಲ ಗುಂಪುಗಾರಿಕೆ ಕಂಡು ಬರುತ್ತಿರುವ ಇಂದಿನ ಸಮ್ಮೇಳನಗಳಲ್ಲಿ ನಿಜವಾದ ಆಸಕ್ತರು ಹಾಗೂ ಕನ್ನಡ ಪರವಿರುವವರು ದೂರ ಉಳಿದಿರುವುದು ಬೇಸರದ ಸಂಗತಿ ಹೀಗಿರುವಾಗ ಸಮ್ಮೇಳನ ಬೇಕೆ?

ಹೀಗೆ ಹತ್ತು ಹಲವು ಬೇಕು ಬೇಡಗಳ ನಡುವೆ ನಡೆಯುತ್ತಿರುವ 75ನೇ ಕನ್ನಡ ಸಾಹಿತ್ಯ ಸಮ್ಮೇಳನವು ಏಕೆ ಬೇಕು? ಏಕೆ ಬೇಡ ಎಂಬ ಬಗ್ಗೆ ವಿಸ್ತೃತವಾದ ಚರ್ಚೆಯು ನಡೆಯಬೇಕಿದೆ. ಹಾಗೂ ಪ್ರತಿಯೊಬ್ಬ ಕನ್ನಡಿಗರು ಮನೆಮನೆಯ ಮನದ ಹಬ್ಬವಾಗಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಚರಿಸುವ ಬಗ್ಗೆ ಜಾಗೃತಿಯನ್ನು ಕನ್ನಡ ಸಾಹಿತ್ಯ ಸಮ್ಮೇಳನಗಳು ಮಾಡಬೇಕಿದೆ.


- ಯ.ಮ.ಹೇಮಂತಕುಮಾರ್

ಅಂಬಾ ಪ್ರಕಾಶನ

ಕೆ.ಕೆ.ರಸ್ತೆ, ಯಳಂದೂರು- 571441

ಚಾಮರಾಜನಗರ ಜಿಲ್ಲೆ.

ದೂರವಾಣಿ: 08226-240196, 9448596343

ಗುರುವಾರ, ಜನವರಿ 8, 2009

ಕನ್ನಡ ಸಾಹಿತ್ಯ ಸಮ್ಮೇಳನ ಸಂಭ್ರಮ - 75

ಕನ್ನಡ ಸಾಹಿತ್ಯ ಸಮ್ಮೇಳನ 75ರ ಸಂಭ್ರಮ. ಬಂಡೆ ಬೆಟ್ಟಗಳ ತವರಿನಲ್ಲಿ ವಿಜೃಂಭಿಸುತ್ತಿರುವುದು ನಿಜಕ್ಕೂ ಸಂತಸದ ವಿಷಯವೇ ಸೈ. ಸಾಹಿತ್ಯ ಮಲೆನಾಡ ಸಿರಿ ಇದರ ಕಂಪು ಮಲೆನಾಡಿಗೆ ಬಹುಪಾಲು ಸೀಮೀತವೆಂಬ ಜನರ ಅಭಿಮತ ಹುಸಿಯಾಗುತ್ತಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದ ಹಿನ್ನೆಲೆಯಲ್ಲಿ ಬಂಡೆ ಬೆಟ್ಟಗಳಲ್ಲೂ ಸಾಹಿತ್ಯ ಗಂಧ ಹೊಮ್ಮುವಂತಾಗಿರುವುದು ಸಾಕ್ಷಿಯಲ್ಲದೇ ಮತ್ತೇನು? ನಾನು ನೀನೆಂಬ ಭೇದಭಾವ ಮರೆತು ಕನ್ನಡಮ್ಮನ ಮಕ್ಕಳೆಲ್ಲ ಒಂದೆಂಬ ಭಾವದಿಂದೊಡಗೂಡಿದ ಮನಸ್ಸಿಂದ ನಾಡಹಬ್ಬವನ್ನು ಸಂಭ್ರಮದಿ ಆಚರಿಸೋಣ ಬನ್ನಿ.
ಹೈದರನ ಕಪಟಕ್ಕೆ ಸಿಕ್ಕಿದ್ದ ಏಳು ಸುತ್ತಿನ ಕೋಟೆ ಹೆಮ್ಮೆಯಿಂದ ತಲೆಯೆತ್ತಿ ನಿಲ್ಲುತ್ತದೆ. ಕನ್ನಡಮ್ಮಗೆ ಜಯಘೋಷ ಹೇಳಲು ಸಜ್ಜಾಗುತ್ತದೆ. ಪ್ರತಿ ಸುತ್ತು ಒಂದು ಬಾರಿ ಜಯಘೋಷ ಹೇಳುತ್ತಿದ್ದರೆ ಏಳು ಬಾರಿ ಪ್ರತಿಧ್ವನಿಸುವಂತಾಗುವುದು. ಕಲ್ಲು ಕಲ್ಲೂ, ಸಾಹಿತ್ಯ ಕಂಪ ಸೂಸುತ್ತಿರೆ, ಕಲ್ಲು ಇದು ಬರೀ ನೀರ್ಜಿವವಲ್ಲ. ಕಲ್ಪನಾ ಗಣಿ. ಗಂಡು ಮೆಟ್ಟಿದ ನಾಡು ಚಿತ್ರದುರ್ಗದಲ್ಲಿ ಕನ್ನಡದ ಜಾತ್ರೆ ನಡೆಯುತ್ತಿರುವುದು ನಮ್ಮೆಲ್ಲರಿಗೂ ಹರ್ಷಾತೀತ. ಅದರಲ್ಲಿ ನಾವೆಲ್ಲರೂ ಪಾಲ್ಗೊಂಡು ಕನ್ನಡಕ್ಕೆ ನಮ್ಮ ಗೌರವಾಭಿಮಾನಗಳನ್ನು ಸಲ್ಲಿಸಿ ನಮ್ಮ ಹೊಣೆಗಾರಿಕೆಯನ್ನು ನಿಭಾಯಿಸೋಣ.
ನಮ್ಮದು ಬಯಲುಸೀಮೆಯಾದರೂ ಸಾಹಿತ್ಯದಲ್ಲಿ ಸಮೃದ್ಧವಾಗಿರುವುದರಲ್ಲಿ ಸಂದೇಯವಿಲ್ಲ. ಸಾಹಿತ್ಯಾಸಕ್ತರು, ಸಾಹಿತ್ಯ, ಪೋಷಕರಿಗೆ ಬರವಿಲ್ಲವೆನ್ನುವುದು ಸಮ್ಮೇಳನಕ್ಕೆ ದೊರೆಯುತ್ತಿರುವ ಪ್ರೋತ್ಸಾಹದಲ್ಲಿಯೇ ತಿಳಿಯಬಹುದಾಗಿದೆ. "ಮಾಡಿದವಗೆ ನೀಡು ಭಿಕ್ಷೆ" ಎನ್ನುವ ಹಟ್ಟಿ ತಿಪ್ಪೇಶನ ನಾಡಲ್ಲಿರುವ ನಮ್ಮ ಸಾಹಿತ್ಯ ಕೃಷಿಕರಿಗೆ ತಕ್ಕ ಪ್ರೋತ್ಸಾಹವೆಂಬ ಮಳೆ, ಪ್ರತಿಫಲವೆಂಬ ಬೆಳೆ ಸಿಗುವುದೆಂಬ ಆಶಾಭಾವನೆ ಹೊತ್ತವರಿಗೆ ನಿರಾಶೆಯಾಗಲಾರದು.
ನಮ್ಮ ಅರಿವೆ ಗುರುವಾದಾಗ ಪ್ರತಿ ಕಣದಲ್ಲವೂ ತಿಳಿದು ಕೊಳ್ಳುವ ವಿಚಾರ ಹೊಂದಿರುವಾಗ ಜಗತ್ತೇ ನಮ್ಮ ಅಧ್ಯಯನ ಪುಸ್ತಕವಾಗಿದೆ. ಇದರ ಅಧ್ಯಯನ ನಿತ್ಯ ನಿರಂತರ. ಅಧ್ಯಾಯಗಳು ಮುಗಿದಂತೆಲ್ಲಾ ಅನುಭವ ಹೆಚ್ಚುತ್ತದೆ.
ಮೌನದಲಿ ಮಾತಿದೆ,
ಮಾತಿನಲಿ ಸಮರವಿದೆ,
ನಗುವಿನಲೂ ಅಳುವಿದೆ,
ಅಳುವಿನಲಿ ತೊಳಲಿದೆ,
ಕನಸಲೂ ಕಲ್ಪನೆಯಿದೆ,
ಕಲ್ಪನೆಯಲಿ ಇಂಗಿತವಿದೆ
ಭಾವದಲೂ ಭವ್ಯತೆಯಿದೆ
ಭವ್ಯತೆಯಲಿ ಬಯಕೆಯಿದೆ.
ನಮ್ಮೊಳಗೊಂದು ಅಂತರವಿದೆ
ಅಂತರದಲಿ ಸಂಬಂಧವಿದೆ
ಕನಸಿಗೂ ಅರ್ಥವೊಂದಿದೆ
ಆ ಕನಸಲೂ ಕಂಡಿದೆ
75ರ ಸಾಹಿತ್ಯ ಸಮ್ಮೇಳನದ ಹಿರಿಮೆಯ
ಚಿತ್ರದುರ್ಗದ ಸೋಜಿಗದ ಐಸಿರಿಯ!
ಅತಿಥಿ ದೇವೋಭವವೆನ್ನುವ ನಾಡಲ್ಲಿ "ಸಾಹಿತ್ಯ"ದ ಅತಿಥಿಯನ್ನು ಸತ್ಕರಿಸೋಣ ಬನ್ನಿ.
- ಕೆ.ಟಿ. ಜ್ಯೋತ್ಸ್ನ
97313 55520

ಪರ್ಯಾಯ ಸಮ್ಮೇಳನ ಇಲ್ಲ..!



ಚಿತ್ರದುರ್ಗದಲ್ಲಿ ನಡೆಯಲಿರುವ ಅಮೃತ ಸಾಹಿತ್ಯ ಸಮ್ಮೇಳನಕ್ಕೆ ಶೋಷಿತ ಸಮುದಾಯದವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡದೇ ಇರುವ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕ್ರಮವನ್ನು ವಿರೋಧಿಸಿದ್ದ ಕೆಲವು ಅಹಿಂದ ಸಂಘಟನೆಗಳು ತಮ್ಮ ನಿರ್ಧಾರದಿಂದ ಹಿಂದೆ ಸರಿದಿವೆ. ಮಂಗಳವಾರ ಜಂಟಿ ಪತ್ರಿಕಾಗೋಷ್ಟಿಯಲ್ಲಿ ಅಹಿಂದ ಮುಖಂಡ ಮುರುಘರಾಜೇಂದ್ರ ಒಡೆಯರ್ ಈ ವಿಷಯ ಪ್ರಕಟಿಸಿದರು. ಅಖಿಲ ಭಾರತ 75ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪೂರ್ಣ ಪ್ರಮಾಣದ ಸಹಕಾರ ನೀಡುವುದಾಗಿ ಹೇಳಿದರು. ಕಸಾಪ ರಾಜ್ಯ ಘಟಕದ ಅಧ್ಯಕ್ಷರಾದ ಶ್ರೀ ಡಾ. ನಲ್ಲೂರು ಪ್ರಸಾದ್ ರವರೊಂದಿಗೆ ಸುಧೀರ್ಘ ಚರ್ಚೆ ನಡೆಸಿ ಈ ತೀರ್ಮಾನಕ್ಕೆ ಬರಲಾಗಿದೆ. ಇದಲ್ಲದೇ ನಾಡಿನ ಶೋಷಿತ ವರ್ಗ ಪ್ರತಿನಿಧಿಸುವ ಸಾಹಿತಿಗಳು ಪರ್ಯಾಯ ಬೇಡವೆಂದು ಮನವಿ ಮಾಡಿಕೊಂಡಿದ್ದರು. ಈ ಎಲ್ಲರ ಮಾತಿಗೆ ಮನ್ನಣೆ ನೀಡಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದರು. ಜನವರಿ 11 ರಂದು ಅಹಿಂದ ವತಿಯಿಂದ ಮೈಸೂರಿಗೆ ತೆರಳಿ ಅಮೃತ ಸಮ್ಮೇಳನಾಧ್ಯಕ್ಷರಾದ ಎಲ್.ಬಸವರಾಜು ರವರನ್ನು ಅಭಿನಂದಿಸಲಾಗುವುದು ಎಂದರು.

ಬುಧವಾರ, ಜನವರಿ 7, 2009

ಮಲೆನಾಡಿಗಿಂತ ಕಡಿಮೆಯಿಲ್ಲ... ಚಿತ್ರದುರ್ಗದ 'ಚಿತ್ತಾರ'







ಛಾಯಾಗ್ರಹಣ: ಕುಮಾರ್, ಚಿತ್ರದುರ್ಗ (ಕನ್ನಡ ಪ್ರಭ)

ಪ್ರಮುಖ ಸಾಹಿತ್ಯ ಸಮ್ಮೇಳನಗಳು...


ಪ್ರಥಮ ಸಾಹಿತ್ಯ ಸಮ್ಮೇಳನ 1915ರಲ್ಲಿ ಬೆಂಗಳೂರಿನಲ್ಲಿ ನಡೆಯಿತು. ಅಂದಿನ ಸಮ್ಮೇಳನವು ಇಂದಿನಂತೆ ದೊಡ್ಡ ಜಾತ್ರೆಯಾಗಿರಲಿಲ್ಲ. ಎಚ್.ವಿ.ನಂಜುಂಡಯ್ಯ ರವರು ಅಧ್ಯಕ್ಷರಾಗಿದ್ದರು. 1916ರಲ್ಲಿ ಬೆಂಗಳೂರು ಹಾಗೂ 1917ರಲ್ಲಿ ಮೈಸೂರಿನಲ್ಲಿ ನಡೆದ ಸಮ್ಮೇಳನಕ್ಕೂ ಎಚ್.ವಿ.ನಂಜುಂಡಯ್ಯ ರವರು ಅಧ್ಯಕ್ಷರಾಗಿದ್ದುದು ಮೊದಲ ಸಮ್ಮೇಳನದ ಬಳುವಳಿ.

25ನೇ ಕನ್ನಡ ಸಾಹಿತ್ಯ ಸಮ್ಮೇಳನದ ಬೆಳ್ಳಿ ಹಬ್ಬ ಸಡಗರದ ಈ ಸಮ್ಮೇಳನದ ಅಧ್ಯಕ್ಷ ಪೀಠವನ್ನು ಅಲಂಕರಿಸಿದವರು ವೈ. ಚಂದ್ರಶೇಖರ. 1940ರಲ್ಲಿ ಧಾರವಾಡದಲ್ಲಿ ಸಮ್ಮೇಳನ ನಡೆಯಿತು. ಸ್ವಾತಂತ್ರ್ಯ ಹೋರಾಟದ ಉತ್ತುಂಗ ಸ್ಥಿತಿಯನ್ನು ಕನ್ನಡಿಗರು ಇದೇ ಸಂಧರ್ಭದಲ್ಲಿ ತಲುಪಿದ್ದರು.

50ನೇ ಕನ್ನಡ ಸಾಹಿತ್ಯ ಸಮ್ಮೇಳನವು ದೇಶದ ರಾಜಧಾನಿಯಾದ ದೆಹಲಿಯಲ್ಲಿ ನಡೆದದ್ದು ವಿಶೇಷ. ಸಂಘಟನೆಗೆ ಹೆಸರಾದ ಶ್ರೀ ಜಿ.ನಾರಾಯಣ ರವರೇ ಇದನ್ನೂ ಸಂಘಟಿಸಿದವರು. ಸುಪ್ರಿಂಕೋರ್ಟ್ ನಲ್ಲಿ ವಕೀಲರಾಗಿದ್ದ ಎಚ್.ಬಿ.ದಾತಾರ್ ರವರು ಬೆಂಗಳೂರಿಗೆ ಬಂದಾಗ ಆಗಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಜಿ.ನಾರಾಯಣರವರ ಬಳಿ "ನಮ್ಮಲ್ಲೂ ನಡೆಸಲು ಅವಕಾಶ ಕೊಡಿ. ನಾವು ಸಂಘಟಿಸುತ್ತೇವೆ" ಎಂದಿದ್ದರಂತೆ. ಅದೇ ಎಳೆಯನ್ನು ಹಿಡಿದು ಸುವರ್ಣ ಸಮ್ಮೇಳನದ ನೆನಪನ್ನು ವರ್ಣರಂಜಿತಗೊಳಿಸಲಾಯಿತು. ಜಿ.ಪಿ.ರಾಜರತ್ನಂ ಸಮ್ಮೇಳನದ ಅಧ್ಯಕ್ಷರಾಗಿದ್ದರು. ರಾಜ್ಯದಿಂದ 1600 ಮಂದಿ ಸಮ್ಮೇಳನಕ್ಕೆ ತೆರಳಿದ್ದೂ ವಿಶೇಷ. ಜನತಾ ಸರಕಾರದಿಂದ ಪ್ರಧಾನ ಮಂತ್ರಿಗಳಾದ ಮೊರಾರ್ಜಿ ದೇಸಾಯಿ ರವರು ಸಮ್ಮೇಳನವನ್ನು ಉದ್ಘಾಟಿಸಿದರು. ರಾಮಕೃಷ್ಣ ಹೆಗಡೆ ಅವರು ಜನತಾ ಪಕ್ಷದ ರಾಷ್ಟ್ರೀಯ ಮಟ್ಟದಲ್ಲಿ ಪದಾಧಿಕಾರಿಯಾಗಿದ್ದರು.

60ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಸಕವಿಗಳಾದ ಶ್ರೀ ಕೆ.ಎಸ್.ನರಸಿಂಹಸ್ವಾಮಿ ರವರು ಸಮ್ಮೇಳನದ ಅಧ್ಯಕ್ಷರಾಗಿದ್ದರು. ಆ ಸಮ್ಮೇಳನವನ್ನು ಸಹ ವಿಜೃಂಭಿತವಾಗಿ ಆಚರಣೆ ಮಾಡುತ್ತಾ ಕನ್ನಡಮ್ಮನ ಸೇವೆ ಮಾಡಲಾಯಿತು.



ಇನ್ನೂ 75ನೇ ಕನ್ನಡ ಸಾಹಿತ್ಯ ಸಮ್ಮೇಳನವು ಇತಿಹಾಸ ಪ್ರಸಿದ್ಧ ಚಿತ್ರದುರ್ಗದಲ್ಲಿ ನಡೆಯುತ್ತಿರುವ ನಮ್ಮೆಲ್ಲರ ಅದೃಷ್ಟ. ಜನವರಿ 29, 2009ರಿಂದ ನಾಲ್ಕು ದಿನಗಳ ಕಾಲ ಚಿತ್ರದುರ್ಗದಲ್ಲಿ ನಡೆಯುವ ಸಮ್ಮೇಳನಕ್ಕೆ ಅಮೃತೋತ್ಸವದ ಕಳಶ. ಎಂಥಾ ರೌದ್ರತೆಗೂ ಜಗ್ಗದೇ, ಸೆಟೆದು ನಿಂತಿರುವ ದುರ್ಗದ ಕಲ್ಲುಗಳು, ಸಾಹಿತ್ಯ ಕಂಪ ಸೂಸುವ ಶಿಲೆಗಳಾಗಿ ಸೌಮ್ಯತೆಯಿಂದ ನಿಂತಿವೆ. ಈ ಅಮೃತೋತ್ಸವದ ನಿಯೋಜಿತ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಡಾ. ಎಲ್.ಬಸವರಾಜು ರವರು. ಸಮ್ಮೇಳನದ ಸ್ವಾಗತಿ ಸಮಿತಿ ಮಹಾಪೋಷಕ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಗೌರವಾಧ್ಯಕ್ಷರಾದ ಶ್ರೀ ಶಿವಮೂರ್ತಿ ಮುರುಘಾ ಶರಣರು, ಅಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕಂದಾಯ ಸಚಿವ ಶ್ರೀ ಕರುಣಾಕರರೆಡ್ಡಿ, ಕೋಶಾಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ಶ್ರೀ ಅಮ್ಲಾನ್ ಆದಿತ್ಯ ಬಿಸ್ವಾಸ್ ರವರು, ಪ್ರಧಾನ ಕಾರ್ಯದರ್ಶಿಗಳಾದ ಕೆ.ಎಂ.ವೀರೇಶ್ ರವರು, ಕಾರ್ಯಾಧ್ಯಕ್ಷರು ಹಾಗೂ ಸಚಿವರಾದ ಶ್ರೀ ಡಿ.ಸುಧಾಕರ್, ಮತ್ತು ಗೂಳಿಹಟ್ಟಿ ಶೇಖರ್ ರವರ ನೇತೃತ್ವದಲ್ಲಿ ಚಿತ್ರದುರ್ಗದ ಅಮೃತೋತ್ಸವದ ಸಿದ್ದತೆ ಭರದಿಂದ ಸಾಗುತಿದೆ. ಬನ್ನಿ ... ಮಿತ್ರರೇ, ಸಂತೋಷದಿಂದ ಅಮೃತೋತ್ಸವದ ಅಮೃತ ಸವಿಯ ಸವಿಯಿರಿ.

ಎಸ್.ನಿಜಲಿಂಗಪ್ಪರವರ ಶ್ವೇತಭವನ



ಐತಿಹಾಸಿಕ ನಗರಿ ಚಿತ್ರದುರ್ಗದಲ್ಲಿ ನಡೆಯುತ್ತಿರುವ 75ನೇ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ನಗರದಲ್ಲಿರುವ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ನಿಜಲಿಂಗಪ್ಪ ರವರ ನಿವಾಸ "ಶ್ವೇತಭವನ" ತಾತ್ಕಾಲಿಕವಾಗಿ ವಸ್ತುಸಂಗ್ರಹಾಲಯವಾಗಿ ರೂಪಾಂತರಗೊಳ್ಳಲಿದೆ.


ಸಮ್ಮೇಳನ ನಡೆಯುವ ನಾಲ್ಕು ದಿನ ಶ್ವೇತಭವನದಲ್ಲಿ ನಿಜಲಿಂಗಪ್ಪರವರ ಜೀವನ ಚರಿತ್ರೆ, ಪ್ರಮುಖ ಘಟನಾವಳಿಗಳ ಕುರಿತು ಸಚಿತ್ರ ವಸ್ತು ಪ್ರದರ್ಶನ ನಡೆಯಲಿದೆ. ಇದಕ್ಕೆ ಅವರ ಪುತ್ರ ಸಮ್ಮತಿ ಸೂಚಿಸಿದ್ದು, ಜಿಲ್ಲಾಧಿಕಾರಿಗಳಾದ ಶ್ರೀ ಅಮ್ಲಾನ್ ಆದಿತ್ಯ ಬಿಸ್ವಾಸ್, ರವರು ಶ್ವೇತಭವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಶ್ವೇತಭವನವನ್ನು ನಿಜಲಿಂಗಪ್ಪ ರವರ ಜೀವನ ಚರಿತ್ರೆ ಸಾರುವ ಮ್ಯೂಸಿಯಂ ಆಗಿ ಬಳಸಿಕೊಳ್ಳುವುದಾಗಿ ಜಿಲ್ಲಾಡಳಿತ ಮನವಿ ಮಾಡಿತು. ಹಾಗಾಗಿ ದುರ್ಗದಲ್ಲಿ ನಡೆಯುವ ಸಮ್ಮೇಳನದ ನಾಲ್ಕು ದಿನದ ಮಟ್ಟಿಗೆ ಅವಕಾಶ ನೀಡಲಾಗಿದೆ ಎಂದು ನಿಜಲಿಂಗಪ್ಪರವರ ಪುತ್ರ ಎಸ್.ಎನ್.ಕಿರಣ್ ಶಂಕರ್ ರವರು ಪತ್ರಿಕೆಗೆ ತಿಳಿಸಿದ್ದಾರೆ. ತಂದೆಯವರಿಗೆ ಸಂಬಂಧಿಸಿದಂತೆ ತಾಲ್ಲೂಕಿನ ಸೀಬಾರದ ಸಮೀಪವಿರುವ ಸ್ಮಾರಕ ಸ್ಥಳದಲ್ಲಿ ಶಾಶ್ವತ ವಸ್ತುಸಂಗ್ರಹಾಲಯ ಸ್ಥಾಪಿಸಲಾಗುವುದು. ಶ್ವೇತಭವನವನ್ನು ಇದೇ ನಿಟ್ಟಿನಲ್ಲಿ ಬಳಸಿಕೊಳ್ಳಲು ಸರಕಾರ ಮನವಿ ಮಾಡಿದರೆ ಷರತ್ತುಬದ್ಧರಾಗಿ ಒಪ್ಪಿಗೆ ನೀಡಲಾಗುವುದು ಎಂದು ಕಿರಣ್ ಶಂಕರ್ ಹೇಳುತ್ತಾರೆ.


ರಾಷ್ಟ್ರನಾಯಕ ದಿವಂಗತ ಎಸ್.ಎನ್.ನಿಜಲಿಂಗಪ್ಪ ರವರು ಇದೇ ಜಿಲ್ಲೆಯವರಾಗಿದ್ದು, ಸಮ್ಮೇಳನದ ಸಮಯದಲ್ಲಿ ಅವರ ನಿವಾಸ ಶ್ವೇತಭವನವನ್ನು ಮ್ಯೂಸಿಯಂ ಆಗಿ ರೂಪಿಸಿ, ಅವರಿಗೆ ಸಂಬಂಧಿಸಿದ ಪುಸ್ತಕ, ಉಡುಪು, ಪೆನ್ನು, ಪ್ರಮುಖ ಘಟನಾವಳಿಗಳ ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗುವುದು ಎಂದು ಸಮ್ಮೇಳನದ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕೆ.ಎಂ. ವೀರೇಶ್ ರವರು ತಿಳಿಸಿದ್ದಾರೆ.

ಸೋಮವಾರ, ಜನವರಿ 5, 2009

75ನೇ ಸಾಹಿತ್ಯ ಸಮ್ಮೇಳನ ಮತ್ತು ಡಾ. ಎಲ್.ಬಸವರಾಜು



ಎಪ್ಪತ್ತೈದನೇ ಅಖಿಲ ಭಾರತ ಅಮೃತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ ಎಲ್. ಬಸವರಾಜು ಅವರನ್ನು ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಆಯ್ಕೆ ಮಾಡಿದೆ. ಸಮ್ಮೇಳನವು ಜ.29 ರಿಂದ ಫೆ. 1ರ ವರೆಗೆ ಚಿತ್ರದುರ್ಗದಲ್ಲಿ ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಸಾಪ ರಾಜ್ಯಾಧ್ಯಕ್ಷ ಡಾ ನಲ್ಲೂರು ಪ್ರಸಾದ್, ಚಾರಿತ್ರಿಕ ಮಹತ್ವ ಹೊಂದಿದ ಅಮೃತ ಸಾಹಿತ್ಯ ಸಮ್ಮೇಳನಕ್ಕೆ ಯಾರನ್ನು ಆರಿಸಬೇಕೆಂಬ ಬಗ್ಗೆ ಚರ್ಚೆ ನಡೆದು ಸರ್ವಾನುಮತದಿಂದ ಡಾ.ಎಲ್. ಬಸವರಾಜು ಅವರ ಹೆಸರನ್ನು ಆಯ್ಕೆ ಮಾಡಲಾಗಿದೆ. ಯಾವುದೇ ರೀತಿ ಗೊಂದಲಕ್ಕೂ ಎಡೆಮಾಡಿಕೊಡದೆ ಆಯ್ಕೆ ನಡೆದಿರುವುದು ಸಂತಸ ತಂದಿದೆ ಎಂದರು.1919 ಅಕ್ಟೋಬರ 5 ರಂದು ಕೋಲಾರ ಜಿಲ್ಲೆಯ ಎಡಗೂರು ಗ್ರಾಮದಲ್ಲಿ ಜನಿಸಿದ ಬಸವರಾಜು ಅವರು ವೃತ್ತಿಯಿಂದ ಪ್ರಾಧ್ಯಾಪಕರಾದರೂ, ತಮ್ಮ ಜೀವನದ ಬಹುಪಾಲು ಅವಧಿಯನ್ನು ಕನ್ನಡ ಕವಿ, ವೀರಶೈವ ಸಾಹಿತ್ಯ-ಸಿದ್ಧಾಂತಗಳ ಶೋಧನೆ, ಅಧ್ಯಯನ, ವ್ಯಾಖ್ಯಾನ, ಸಂಪಾದನೆಗಳಲ್ಲಿ ತೊಡಗಿದ್ದಾರೆ.ಶೂನ್ಯ ಸಂಪಾದನೆ, ಕನ್ನಡ ಛಂದಸ್ಸು, ಶಿವದಾಸ ಗೀತಾಂಜಲಿ, ಭಾಸನ ಭಾರತ ರೂಪಕ, ನಾಟಕಾಮೃತ ಬಿಂದುಗಳು, ಅಲ್ಲಮನ ವಚನಗಳು, ದೇವರ ದಾಸೀಮಯ್ಯನ ವಚನಗಳು, ಭಾಸರಾಮಾಯಣ, ತ್ರಿವೇಣಿ ನಾಟಕ ಇವರ ಪ್ರಮುಖ ಕೃತಿಗಳಲ್ಲಿ ಕೆಲವು.ಪಂಪ ಪ್ರಶಸ್ತಿ, ಬಸವ ಪುರಸ್ಕಾರ (2005), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1994), ಕೇಂದ್ರ ಸಾಹಿತ್ಯ ಅಕಾಡೆಮಿಯ 2006ರ ಭಾಷಾ ಸಮ್ಮಾನ ಮೊದಲಾದ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಪಾತ್ರರಾದ ಈ ಹಿರಿಯ ವಿದ್ವಾಂಸರು ಪ್ರಾಚೀನ ಸಾಹಿತ್ಯಕ್ಕೆ ಸ್ಮರಣೀಯ ಕೊಡುಗೆ ನೀಡಿರುವುದರಿಂದ ಇವರ ಆಯ್ಕೆ ಸೂಕ್ತವಾಗಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಗಾಗಿ ಹಿರಿಯ ಸಂಶೋಧಕ ಎಂ ಚಿದಾನಂದಮೂರ್ತಿ ಹಾಗೂ ಲೇಖಕ ಬರಗೂರು ರಾಮಚಂದ್ರಪ್ಪ ಅವರ ಹೆಸರು ಕೇಳಿಬಂದಿತ್ತು. ಆದರೆ ಹಿರಿತನದ ಆಧಾರದ ಮೇಲೆ ಎಲ್ ಬಸವರಾಜು ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿಸಲು ತೀರ್ಮಾನಿಸಲಾಯಿತು ಎಂದು ಕಸಾಪ ಮೂಲಗಳು ತಿಳಿಸಿವೆ. ಚಿದಾನಂದ ಮೂರ್ತಿಯವರ ಆಯ್ಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಒಂದೊಮ್ಮೆ ಅವರ ಆಯ್ಕೆಯಾದರೆ ಪರ್ಯಾಯ ಸಮ್ಮೇಳನ ನಡೆಸುವ ಬೆದರಿಕೆಯನ್ನೂ ಕೆಲವರು ಹಾಕಿದ್ದರು ಎನ್ನಲಾಗಿದೆ.

ಇಲ್ಲಿ ಸಾಹಿತ್ಯಕ್ಕಂತೂ ಬರವಿಲ್ಲ...


ಚಿತ್ರದುರ್ಗ ಎಂದಾಕ್ಷಣ ಮೊದಲಿಗೆ ನೆನಪಾಗುವುದು ಕೋಟೆ, ಕೊತ್ತಲ, ಬುರುಜು, ಬತೇರಿ, ಗವಿಗವ್ವರ....

ಹಾಗೆಂದು ಈ ನಾಡು ಬರೀ ಶೌರ್ಯಕ್ಕಲ್ಲ, ಪಾಂಡಿತ್ಯಕ್ಕೂ ಹೆಸರುವಾಸಿ. ಇಲ್ಲಿ ಸಾಕಷ್ಟೂ ಮಂದಿ ವಾಗ್ದೇವಿ ಸರಸ್ವತಿಯ ಸೇವಕರಿದ್ದಾರೆ. ಅಕ್ಷರಸೇವೆ ಮೂಲಕ ನಾಡಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅದಕ್ಕೆ ಚಿತ್ರದುರ್ಗ ಎಂದಾಕ್ಷಣ ಟಿ.ಎಸ್.ವೆಂಕಣ್ಣಯ್ಯ, ಬೆಳಗೆರೆ ಕುಟುಂಬದ ಚಂದ್ರಶೇಖರಶಾಸ್ತ್ರಿ, ಪಾರ್ವತಮ್ಮ, ಜಾನಕಮ್ಮ, ಕೃಷ್ಣಶಾಸ್ತ್ರಿ, ಹುಲ್ಲೂರು ಶ್ರೀನಿವಾಸ ಜೋಯಿಸರು, ತ.ಸು.ಶಾಮರಾಯರು, ತ.ರಾ.ಸುಬ್ಬಣ್ಣ, ಸಿದ್ದವ್ವನಹಳ್ಳಿ ಕೃಷ್ಣಶರ್ಮ, ಟಿ.ಆರ್.ರಾಧಾಕೃಷ್ಣ, ಪ್ರೋ. ಲಕ್ಷ್ಮಣ ತೆಲಗಾವಿ, ಪ್ರೋ. ಬಿ.ರಾಜಶೇಖರಪ್ಪ, ರಾಘವೇಂದ್ರ ಪಾಟೀಲರು, ಬಿ.ತಿಪ್ಪೇರುದ್ರಪ್ಪ, ಬಿ.ಎಲ್.ವೇಣು, ಚಂದ್ರಶೇಖರ ತಾಳ್ಯ, ಪ್ರಹ್ಲಾದ್ ಅಗಸನಕಟ್ಟೆ, ಲೋಕೇಶ್ ಅಗಸನಕಟ್ಟೆ, ಡಾ. ಮೀರಾಸಾಬಿಹಳ್ಳಿ ಶಿವಣ್ಣ, ನೇಮಿಚಂದ್ರ, ಬೇದ್ರೆ ಮಂಜುನಾಥ, ಡಾ. ಬಂಜಗೆರೆ ಜಯಪ್ರಕಾಶ್, ಹೀಗೆ ಹೆಸರುಗಳು ಓತಪ್ರೇತವಾಗಿ ನಾಲಿಗೆಯ ಮೇಲೆ ನಲಿದಾಡುತ್ತವೆ.

ಇದಿಷ್ಟೆ ಅಲ್ಲ, ಮಠಗಳ ತವರೂರು ಎಂದೆ ಕರೆಸಿಕೊಂಡಿರುವ ಈ ಐತಿಹಾಸಿಕ ನಗರಿಯಲ್ಲಿ ಸಾಹಿತ್ಯರಂಗಕ್ಕೆ ಮಠಾಧೀಶರು ನೀಡಿದ ಕೊಡುಗೆಯನ್ನು ಮರೆಯಲಾಗದು.

ಬೃಹನ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಶ್ರೀ ಶಿವಮೂರ್ತಿ ಮುರುಘಾ ಶರಣರು, ಸಿರಿಗೆರೆ ಶ್ರೀ ಶಿವಕುಮಾರ ಸ್ವಾಮೀಜಿ, ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಾಣೆಹಳ್ಳಿ ಪಂಡಿತಾರಾಧ್ಯರು ಈ ಸಾಲಿನಲ್ಲಿ ನಿಲ್ಲುತ್ತಾರೆ. ಸಾಣೆಹಳ್ಳಿ ನಾಟಕೋತ್ಸವವಂತೂ ಜಗತ್ಪ್ರಸಿದ್ದ..

ಹರ್ಷ ನ. ಪುರೋಹಿತ (ವಿ.ಕ., ಜನವರಿ 5, 2009)

ಭಾನುವಾರ, ಜನವರಿ 4, 2009

ಬಯಲು ಸೀಮೆಯಲ್ಲಿ ಸಾಹಿತ್ಯ ಜಾತ್ರೆ


ಅಖಿಲ ಭಾರತ 75ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇನ್ನು ಕೆಲ ದಿನಗಳು ಮಾತ್ರ ಬಾಕಿ ಇದ್ದು, ಬರದ ನಾಡಲ್ಲಿ ಸಾಹಿತ್ಯ ಜಾತ್ರೆಗೆ ಭರದ ಸಿದ್ದತೆಗಳು ನಡೆಯುತ್ತಿವೆ. ಒಂದೆಡೆ ಅಭಿವೃದ್ಧಿ ಕಾಮಗಾರಿಗಳು ಮತ್ತು ಸಾಹಿತ್ಯಪೂರಕ ಚಟುವಟಿಕೆಗಳು ತುಸು ಬಿರುಸಾಗಿವೆ. ಇದೆಲ್ಲದರ ನಡುವೆ ಸಮ್ಮೇಳನದ ದೇಣಿಗೆ ಅಭಿಮಾನದ ಸ್ವರೂಪ ಪಡೆದುಕೊಂಡಿರುವುದು ಸಂತಸದ ಸಂಗತಿಯಾಗಿದೆ.


ಒಂದೆರಡು ತಿಂಗಳು ಹಿಂದಕ್ಕೆ ಹೋಗಿ ಆಲೋಚಿಸಿದರೆ ಅಂದಿನ ಪರಿಸ್ಥಿತಿಗೂ ಇಂದಿಗೂ ಅಜಗಜಾಂತರ ವ್ಯತ್ಯಾಸಗಳು ಗೋಚರಿಸುತ್ತದೆ. ಸಮ್ಮೇಳನದ ದಿನಾಂಕ ಘೋಷಣೆಯಾದ ಮೇಲೆ ಮೂಲಸೌಕರ್ಯಗಳಿಲ್ಲ, ಮಲಗೋಕೆ ಜಾಗಗಳಿಲ್ಲ, ಓಡಾಡಲು ಉತ್ತಮ ರಸ್ತೆಗಳಿಲ್ಲ, ಕುಡಿಯಲು ನೀರಿಲ್ಲ, ಇದೆಲ್ಲ ಹೊರತಾಗಿ ದೇಣಿಗೆ ಯಾರು ಕೊಡ್ತಾರೆ? ಎಂಬಂತೆ ಇತ್ಯಾದಿ ಅಪಸ್ವರದ ರಾಗಗಳು ಕೇಳಿಬಂದವು. ಸುಮ್ಮನೇ ಕುಳಿತು ಆಲೋಚಿಸುವವರಿಗೆ ಇದೆಲ್ಲ ನಿಜವೆಂಬ ಭಾವನೆಗಳು ಮೂಡಿರಬಹುದು. ಆದರೆ ಸಾಹಿತ್ಯ ಜಾತ್ರೆಗೆ ಇಂತದ್ದೊಂದು ಪೂರಕ ವಾತಾವರಣ ಸೃಷ್ಟಿಯಾಗುತ್ತದೆ ಎಂದು ಯಾರೂ ಊಹಿಸದಷ್ಟು ರೀತಿಯಲ್ಲಿ ಚಟುವಟಿಕೆಗಳು ನೆಡಯುತ್ತಿರುವುದು ಅಚ್ಚರಿ ತರಿಸಿದೆ.


ಸರ್ಕಾರಿ ನೌಕರರು ಉದ್ಯಮಿಗಳು, ವರ್ತಕರು, ಸಂಘಸಂಸ್ಥೆಗಳು, ಉದಾರವಾಗಿ ದೇಣಿಗೆ ನೀಡುವ ತೀರ್ಮಾನ ಕೈಗೊಂಡಿರುವುದು ಬಯಲು ಸೀಮೆ ಎಂಬ 'ಕಹಿ' ಬರಹ ತುಸು ಮರೆಮಾಚಿದಂತಾಗಿದೆ. ಕೇವಲ ಹದಿನೈದು ದಿನದ ಅಂತರದಲ್ಲಿ ಅರ್ಧ ಕೋಟಿಯಷ್ಟು ಹಣ ದೇಣಿಗೆ ರೂಪದಲ್ಲಿ ಸಮ್ಮೇಳನ ಸಮಿತಿಗೆ ಜಮಾ ಆಗಿರುವುದೇ ಇದಕ್ಕೆ ಸಾಕ್ಷಿ. ಇದಲ್ಲದೇ ಆಹಾರ ಪದಾರ್ಥಗಳು ಕೂಡ ಸಂಗ್ರಹವಾಗುತ್ತಿದೆ.