ಸೋಮವಾರ, ಜನವರಿ 26, 2009

ದುರ್ಗದ ಸಾಹಿತಿಗಳು.- 1

ಬಿ.ತಿಪ್ಪೇರುದ್ರಪ್ಪ
ಬದುಕಿನ ವ್ಯಂಗ್ಯ ಸಮಾಜದ ಓರೆಕೋರೆಗಳನ್ನು ತಮ್ಮ ಹಾಸ್ಯ, ವಿಡಂಬನೆಯ ಲೇಖನಗಳಿಂದ ಮೂಲಕ ಮನಮುಟ್ಟುವಂತೆ ಚಿತ್ರಿಸಿರುವ ಬಿ.ತಿಪ್ಪೇರುದ್ರಪ್ಪ, ಚಿತ್ರದುರ್ಗದ ಹೆಮ್ಮೆಯ ಹಾಸ್ಯ ಲೇಖಕರಷ್ಟೇ ಅಲ್ಲ, ಮಕ್ಕಳ ಸಾಹಿತಿಯೂ ಹೌದು. ಧಾರವಾಡ ಕರ್ನಾಟಕ ವಿವಿಯಿಂದ ರಾಜ್ಯಶಾಸ್ತ್ರದಲ್ಲಿ ಎಂ.ಎ. ಪದವಿ. 1968ರಲ್ಲಿ ಚಿಕ್ಕಮಗಳೂರು ತರಳಬಾಳು ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು, ಹರಪನಹಳ್ಳಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಮಕ್ಕಳಿಗಾಗಿ ಕತೆ, ಕವನ ಬರೆದಿರುವ ತಿಪ್ಪೇರುದ್ರಪ್ಪ ಅವರ ಕವನವೊಂದನ್ನು ಮಹಾರಾಷ್ಟ್ರದ ಕನ್ನಡ ಭಾಷಾ ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ. ನಿಂಗಣ್ಣನ ಎಲೆಕ್ಷನ್ ಡ್ಯೂಟಿ, 30 ವಿಡಂಬನೆಗಳು ಎಂಬ ಹಾಸ್ಯ ಲೇಖನ ಸಂಕಲನ, ಕಾಡಿನ ಕ್ರಿಕೆಟ್, ಪುಟ್ಟನ ಕಾನ್ವೆಂಟ್, ಹಕ್ಕಿಗಳು ಎಂಬ ಮಕ್ಕಳ ಕವನ ಸಂಕಲನ, ಬಡವ ಬದುಕಿದ ಎಂಬ ನಾಟಕ ಹಾಗೂ ದ್ವಿತಿಯ ಪಿ.ಯು.ಸಿ. ತರಗತಿಗಾಗಿ ರಾಜ್ಯಶಾಸ್ತ್ರ ಪಠ್ಯಪುಸ್ತಕ ರಚಿಸಿ ಪ್ರಕಟಿಸಿದ್ದಾರೆ.
ರಾಘವೇಂದ್ರ ಪಾಟೀಲ
ರಾಘವೇಂದ್ರ ಪಾಟೀಲ ಎಂದಾಕ್ಷಣ 'ಸಂವಾದ' ನೆನಪಾಗಲೆಬೇಕು. ಈ ತ್ರೈಮಾಸಿಕದ ಮೂಲಕ ಸಾಹಿತ್ಯ ಸಂವಾದಕ್ಕೆ ವೇದಿಕೆ ಒದಗಿಸಿಕೊಟ್ಟವರು ಪಾಟೀಲರು. ಜಿಲ್ಲೆಯ ನಾಡಿನ ಸಾಹಿತ್ಯ ವಲಯದಲ್ಲಿ ಪರಿಚಿತವಾಗಿರುವ ಪಾಟೀಲರು ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ಪದವಿಪೂರ್ವ ಕಾಲೇಜು ಉಪನ್ಯಾಸಕ. ಕಥನಕಲೆಯಲ್ಲಿ ಪಳಗಿದ ಕೈ. ಕಥಾಲೋಕ ಅವರ ಆದ್ಯತೆಯ ಕ್ಷೇತ್ರ. ಇವರ ಮೊದಲ ಕಥೆ 'ಒಡಪುಗಳು' 1977ರಲ್ಲಿ ಉದಯವಾಣಿ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದೆ. ಒಡಪುಗಳು, ಪ್ರತಿಮೆಗಳು, ದೇಶಗತಿ, ಕಳಕೊಂಡವರು, 'ಮಾಯಿಯ ಮುಖಗಳು' ಎಂಬ ಕಥಾಸಂಕಲನ, ಬಾಳವ್ವನ ಕನಸು ಕಾದಂಬರಿ ಹಾಗೂ 'ವಾಗ್ವಾದ' ವಿಮರ್ಶಾ ಲೇಖನ, ಸಂಕಲನ ಪ್ರಕಟಿಸಿದ್ದಾರೆ.
ಚದುರಂಗ ಸ್ಮಾರಕ ಪ್ರಶಸ್ತಿ, ಆರ್ಯಭಟ, ಕಾರಂತ, ಸಿರಿಗನ್ನಡ, ಡಾ. ಬಸವರಾಜ ಪಟ್ಟೇದ ಸ್ಮಾರಕ ಪ್ರಶಸ್ತಿ ಪಡೆದಿರುವ ಪಾಟೀಲರ ಮಡಿಲಿಗೆ ತೇರು ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಸಿಕ್ಕಿದೆ. 'ಸಂಕೀರ್ಣ', 'ಕೃಷ್ಣ ಆಲನಹಳ್ಳಿ ಸ್ಮರಣ ಸಂಚಿಕೆ', 'ಮಾಸ್ತಿ ಸಾಹಿತ್ಯ' ಸಮಗ್ರ ದರ್ಶನ ಹಾಗೂ ನವ ಮೇಘ ರೂಪಿ ಎಂಬ ಕೃತಿಗಳನ್ನು ರಚಿಸಿದ್ದಾರೆ.
- ವಿ.ಕ. ಚಿತ್ರದುರ್ಗ, 25.01.2009

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ