ಬುಧವಾರ, ಮಾರ್ಚ್ 18, 2009

ದುರ್ಗದ ಧೂಳಿನಲ್ಲಿ ಕಂಡ ಪ್ರಶ್ನೆಗಳು, ಚಿತ್ರಗಳು


ಎಸ್. ಸಿರಾಜ್ ಅಹಮದ್
ಬುಧವಾರ, 25 ಫೆಬ್ರವರಿ 2009 (02:55 IST)

ಸಾಹಿತ್ಯ ಜಾತ್ರೆಗೆ ವಡೆ ರೆಡಿ
ದುರ್ಗದ ಸಾಹಿತ್ಯ ಸಮ್ಮೇಳನದಲ್ಲಿ ಎದ್ದ ಧೂಳು ಕರ್ನಾಟಕದ ಹಲವು ಕಡೆ ನಡೆಯುತ್ತಿರುವ ಔಪಚಾರಿಕ ಮತ್ತು ಅನೌಪಚಾರಿಕ ಸಾಹಿತ್ಯ ಚರ್ಚೆಗಳ ಮೇಲೆಲ್ಲ ಅಡರಿಕೊಂಡು ಅದನ್ನು ಸುಮ್ಮನೆ ಕೊಡವಿಕೊಂಡು ಹೋಗುವಂತಿಲ್ಲ ಎನ್ನುವಂತಾಗಿದೆ. ಶಿವಮೊಗ್ಗದಲ್ಲಿ ಫೆಬ್ರವರಿ ೧೪ ಮತ್ತು ೧೫ರಂದು ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಎಲ್. ಬಸವರಾಜು ಅವರ ವಿಚಾರವನ್ನು ಪ್ರಸ್ತಾಪಿಸಿದ ಮಂತ್ರಿಯೊಬ್ಬರು ಏನೋ ಕೆಲವರಿಗೆ ಹಿರಿಯರು ಎಂಬ ಕಾರಣಕ್ಕೆ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಮಾಡಿದರೆ ಅದನ್ನೇ ನೆಪ ಮಾಡಿಕೊಂಡು ಅವರು ಸಮಾಜದಲ್ಲಿ ದ್ವೇಷ ಅಸೂಯೆಗೆ ಕಾರಣರಾಗುವಂತೆ ಮಾತಾಡಿದರೆ, ಅಂಥವರಿಗೆ ಜನ ದಂಗೆಯೆದ್ದು ಬುದ್ಧಿ ಕಲಿಸಬಹುದೆಂಬ ಎಚ್ಚರಿಕೆಯನ್ನು ಸಹ ಮುಂದಿನ ಸಮ್ಮೇಳನಾಧ್ಯಕ್ಷರಿಗೆ ನೀಡಿಬಿಟ್ಟರು. ಬಹಳ ವಿಚಿತ್ರವೆಂದರೆ ಅದನ್ನು ಪತ್ರಿಕೆಯೊಂದು ವರದಿ ಮಾಡಿದ ರೀತಿ: ಶಿವಮೊಗ್ಗ ಸಮ್ಮೇಳನದ ಅಧ್ಯಕ್ಷರು ಕನ್ನಡದ ಬಗ್ಗೆ , ಇಲ್ಲಿನ ಪಶ್ಚಿಮ ಘಟ್ಟದಲ್ಲಿ ಆಗುತ್ತಿರುವ ಪರಿಸರ ನಾಶದ ಬಗ್ಗೆ ಆಡಿದ ಮಾತುಗಳನ್ನು ಜಿಲ್ಲಾ ವರದಿಗೆ ಸೀಮಿತಗೊಳಿಸಿ ಮಂತ್ರಿಗಳು ಎಲ್.ಬಸವರಾಜು ಅವರಿಗೆ ನೀಡಿದ ಎಚ್ಚರಿಕೆಯನ್ನು ರಾಜ್ಯಮಟ್ಟದ ಸುದ್ದಿಯಾಗಿಸಿ ವಿವಾದಕ್ಕೆ ಇನ್ನಷ್ಟು ಪುಳ್ಳೆಗಳನ್ನು ಪೇರಿಸಲು ನೋಡಿತು. ಎಲ್.ಬಸವರಾಜು ಅವರು ಎತ್ತಿದ ಪ್ರಶ್ನೆಗಳಿಗೆ ಶಿವಮೊಗ್ಗದ ಸಮ್ಮೇಳನದಲ್ಲಿ ಮತ್ತಷ್ಟು ಚಾಲನೆ ನೀಡಿದವರು ಕನ್ನಡದ ಇಬ್ಬರು ಬಹು ಮುಖ್ಯ ಬರಹಗಾರರಾದ ರಹಮತ್ ತರೀಕೆರೆ ಮತ್ತು ಕುಂ.ವೀ.ಯವರು. ಬಸವರಾಜು ಅವರು ಮಠ ಮಾನ್ಯಗಳ ಕುರಿತು ಎತ್ತಿರುವ ಪ್ರಶ್ನೆಗಳ ಬಗ್ಗೆ ಎಲ್ಲ ಸಾರ್ವಜನಿಕ ವಿಷಯಗಳು ಚರ್ಚೆಯಾಗುವಂತೆ ಬಹಿರಂಗ ಚರ್ಚೆಯಾಗಬೇಕೇ ವಿನಾ ಭಿನ್ನಮತವೇ ಇಲ್ಲದ ನಿರ್ವಾತವನ್ನು ಸೃಷ್ಟಿಸುವುದು ಅಪಾಯಕಾರಿ ಎಂದರು. ಕುಂ.ವೀ.ಯವರಂತೂ ತಮ್ಮ ರಾಯಲಸೀಮಾ ಸ್ಟೈಲಿನಲ್ಲಿ ಜೀವನದಲ್ಲಿ ಎಂದೂ ಸಹ ಎರಡು ಪುಸ್ತಕ ಖರೀದಿಸದ, ಒಂದು ಸಾಹಿತ್ಯ ಗೋಷ್ಟಿಯಲ್ಲಿ ಕೂತು ಬರಹಗಾರನ ಎರಡು ಮಾತುಗಳನ್ನು ಯಾವತ್ತೂ ಕೇಳಿಸಿಕೊಳ್ಳದ ರಾಜಕಾರಣಿಗಳನ್ನು ಜಾಡಿಸಿಬಿಟ್ಟರು. ವಾಸ್ತವವಾಗಿ ಯಾರು ಯಾರ ಜೊತೆ ನಿಂತು ಎಲ್ಲಿ ಏನು ಮಾತಾಡಬೇಕು, ಯಾರನ್ನು ಪ್ರೇಮಿಸಬೇಕು, ಏನು ತಿನ್ನಬೇಕು ಏನು ಕುಡಿಯಬೇಕು ಎಂಬುದನ್ನೆಲ್ಲ ಬೀದಿರಂಪ ಮಾಡಿ ಜನರ ವೈಯುಕ್ತಿಕ ವಿಷಯಗಳನ್ನೆಲ್ಲ ತಾನೇ ನಿರ್ಧರಿಸಲು ಹೊರಟಿರುವ ತಮ್ಮ ಸರ್ಕಾರದ ವಿರುದ್ಧವೇ ಜನ ತಿರುಗಿಬೀಳುವ ದಿನ ದೂರವಿಲ್ಲ ಎಂದು ಅರಿಯದೆ ಮಂತ್ರಿಗಳು ಆಡಿದ ಮಾತಿಗೆ ಕನ್ನಡದ ಇಬ್ಬರು ಬರಹಗಾರರು ಮಾಡಿದ ಪ್ರತಿಕ್ರಿಯೆಯು ಸಮ್ಮೇಳನದ ಖದರನ್ನು ಹೆಚ್ಚಿಸಿತು.