ಭಾನುವಾರ, ಫೆಬ್ರವರಿ 1, 2009

ತ.ರಾ.ಸು.


ಬರೆದಂತೆ ಬದುಕಿದವರು ವಿರಳ, ಬರೆದೇ ಬದುಕಿದವರು ಇನ್ನೂ ವಿರಳ. ಆದರೆ ತ.ರಾ.ಸು. ರವರು ಬರೆದಂತೆ ಬದುಕಿದವರು. ಬರೆದೇ ಬದುಕಿದವರು. ಸುಮಾರು 68 ಕೃತಿಗಳನ್ನು ತಮ್ಮ ಜೀವಿತಾವಧಿಯಲ್ಲಿ ರಚಿಸಿದ ನಂತರವೂ ಬರವಣಿಗೆಗಿಂತ ಬದುಕೇ ದೊಡ್ಡದು ಎಂದು ನಂಬಿಕೊಂಡವರು. ಗಂಡು ಮೆಟ್ಟಿನ ನಾಡಾದ ಚಿತ್ರದುರ್ಗ ಜಿಲ್ಲೆಯು ಕೇವಲ ಗತಕಾಲದ ಇತಿಹಾಸ ಪುಟಗಳಲ್ಲಿ ಅಷ್ಟೇ ಉಳಿಯದೇ ಸಾಹಿತ್ಯ ಲೋಕಕ್ಕೂ, ಅನರ್ಘ್ಯ ರತ್ನಗಳನ್ನು ಕಾಣಿಕೆಯಾಗಿ ನೀಡಿದೆ. ಅವರಲ್ಲಿ ಪ್ರಮುಖರೆಂದರೆ ಕನ್ನಡದ ಅಶ್ವಿನಿ ದೇವತೆಗಳಲ್ಲಿ ಒಬ್ಬರೆಂದೇ ಹೆಸರಾದ ಶ್ರೀ ಟಿ.ಎಸ್.ವೆಂಕಣ್ಣಯ್ಯ, ತ.ಸು.ಶಾಮರಾಯರು, ಆಶುಕವಿಗಳಾದ ಶ್ರೀ ಬೆಳಗೆರೆ ಚಂದ್ರಶೇಖರಶಾಸ್ತ್ರಿಗಳು, ತ.ರಾ.ಸು. ಮುಂತಾದವರನ್ನು ಹೆಸರಿಸಬಹುದು. ತ.ರಾ.ಸು. ರವರ ಜನನ 1920 ನೇ ಏಪ್ರಿಲ್ 21 ರಂದು ಹರಿಹರ ತಾಲ್ಲೂಕಿನ ಮಲೇಬೆನ್ನೂರಿನಲ್ಲಿ ಜನಿಸಿದರು. ಇವರ ತಂದೆ ರಾಮಸ್ವಾಮಯ್ಯ, ತಳಕು ಗ್ರಾಮದ ಆಶುಕವಿಗಳು. ದೊಡ್ಡಸುಬ್ಬಣ್ಣನವರ ಎರಡನೇ ಮಗ; ತ.ರಾ.ಸು. ರವರ ತಂದೆ. ಹರಿಹರದಲ್ಲಿ ಅಮಲ್ದಾರರಾಗಿದ್ದವರು. ತಾಯಿ ಸೀತಮ್ಮನವರು ಸರಳ ಸಜ್ಜನಿಕೆಯ ಸ್ವಭಾವದ ಹೆಣ್ಣುಮಗಳು. ದೊಡ್ಡಪ್ಪ ಟಿ.ಎಸ್.ವೆಂಕಣ್ಣಯ್ಯ, ತ.ಸು.ಶಾಮರಾಯರು ಇವರ ಚಿಕ್ಕಪ್ಪ. ಹೀಗಾಗಿ ಇವರ ಮನೆಯ ಪರಿಸರದಲ್ಲೂ, ಇವರ ವಂಶವಾಹಿಣಿಯಲ್ಲೂ ಸಾಹಿತ್ಯದ ಒಲವು ತಾನಾಗಿಯೇ ಹರಿದು ಬಂದಿತ್ತು.
ಖ್ಯಾತ ಸಂಶೋಧಕರಾದ ಹುಲ್ಲೂರು ಶ್ರೀನಿವಾಸ ಜೋಯಿಸರ ಚಿತ್ರದುರ್ಗದ ಬಗ್ಗೆ ಹೇಳುತ್ತಿದ್ದ ಕಥೆಗಳೇ, ಮುಂದೊಂದು ದಿನ “ದುರ್ಗಾಸ್ತಮಾನ”ದಂತಹ ಮಹಾನ್ ಐತಿಹಾಸಿಕ ಕಾದಂಬರಿಗೆ ಪ್ರೇರಣೆಯಾಯಿತು. ಅದಕ್ಕೂ ಮುಂಚೆ ಒಮ್ಮೆ ವೆಂಕಣ್ಣಯ್ಯನವರು ವಾಚಾಳಿಯಾಗಿದ್ದ ತ.ರಾ.ಸು. ರವರಿಗೆ “ಇಷ್ಟೆಲ್ಲಾ ಮಾತಾನಾಡುವಿಯೆಲ್ಲಾ, ಇದನ್ನೇ ಬರೆಯುವ ಸಾಮರ್ಥ್ಯ ನಿನ್ನಲ್ಲಿದೆಯೇ? ಒಂದು ಕಥೆ ನಿನ್ನ ಕೈಯಲ್ಲಿ ಬರೆಯಲಾದೀತೆ?” ಎಂದು ಸವಾಲು ಹಾಕಿದಾಗ ತ.ರಾ.ಸು. ರವರು ಸಂಜೆಯೊಳಗೆ ಒಂದು ಕಥೆ ಬರೆದು ಹತ್ತು ರೂಪಾಯಿ ಗಿಟ್ಟಿಸಿಕೊಂಡರು. ಆ ಕಥೆಯ ಹೆಸರು “ಪುಟ್ಟನ ಚೆಂಡು”. (ಅವರ ಕೊನೆಯ ಐತಿಹಾಸಿಕ ಕಾದಂಬರಿ ‘ದುರ್ಗಾಸ್ತಮಾನ’ವನ್ನು ಟಿ.ಎಸ್.ವೆಂಕಣ್ಣಯ್ಯನವರಿಗೆ ಅರ್ಪಿಸಿದ್ದಾರೆ.) ರಾಮಸ್ವಾಮಯ್ಯನವರ ಮಿತ್ರನಾಗಿದ್ದ ಎಸ್.ನಿಜಲಿಂಗಪ್ಪನವರು ಪ್ರೀತಿಯಿಂದ ತ.ರಾ.ಸು.ರವರನ್ನು ‘ಧ್ರುವ’ ಎಂದು ಕರೆಯುತ್ತಿದ್ದರು. ಗಾಂಧೀಜಿಯವರ ಚಳುವಳಿಯು ದೇಶಾದಾಂತ್ಯ ಸಂಚಲನ ಉಂಟುಮಾಡಿತ್ತು.1937ರ ಸುಮಾರಿನಲ್ಲಿ ಚಿತ್ರದುರ್ಗದಲ್ಲಿ ಧ್ವಜ ಸತ್ಯಗ್ರಹ ನಡೆದು ಜಿಲ್ಲೆಯ ಹೊಸದುರ್ಗ ಪಟ್ಟಣವನ್ನು ಕೇಂದ್ರವನ್ನಾಗಿಸಿಕೊಂಡು ಮಿತ್ರರೊಡನೆ ಹಳ್ಳಿ-ಹಳ್ಳಿಗಳಲ್ಲಿ ಸಂಚರಿಸಿ ಕ್ರಾಂತಿ ಗೀತೆಗಳನ್ನು ಹಾಡುತ್ತ.ಭಾಷಣ ಮಾಡುತ್ತಿದ್ದರು. ಬಾಗೂರು ಎಂಬ ಹಳ್ಳಿಯಲ್ಲಿ ಭಾಷಣ ಮಾಡುತ್ತಿದ್ದಾಗ ತ.ರಾ.ಸು. ದಸ್ತಗಿರಿಯಾದರು.ಆಗ ಅವರಿಗೆ 17ರ ಪ್ರಾಯ!
ಚಿತ್ರದುರ್ಗದಲ್ಲಿದ್ದರೆ ಮಗ ಚಳುವಳಿಗಳ ಹಿಂದೆ ಹೋಗಬಹುದೆಂದು ರಾಮಸ್ವಾಮಯ್ಯನವರು ತ.ರಾ.ಸು. ರವರನ್ನು ಬೆಂಗಳೂರಿನ ನ್ಯಾಷನಲ್ ಹೈಸ್ಕೂಲಿಗೆ ಸೇರಿಸಿದರು. ಎಸ್.ಎಸ್.ಎಲ್.ಸಿ. ಮುಗಿಸಿಕೊಂಡ ತ.ರಾ.ಸು. ಶಿವಮೊಗ್ಗದಲ್ಲಿ ಕಾಲೇಜು ಸೇರಿ, ಕಾಲೇಜಿನ ಪ್ರಬಂಧ ಸ್ಪರ್ಧೆಯಲ್ಲಿ ಬಿ.ಎಂ.ಶ್ರೀ.ಯವರಿಂದ ಬಹುಮಾನ ಸ್ವೀಕರಿಸಿದರು. ಶಿವಮೊಗ್ಗದ ಕಾಲೇಜಿನಲ್ಲಿ ತ.ರಾ.ಸು. ಓದಿದ್ದು ಒಂದೇ ವರ್ಷ. ಜೂನಿಯರ್ ಇಂಟರ್ ಮೀಡಿಯಟ್ ಪರೀಕ್ಷೆಯ ನಂತರ ಸೀನಿಯರ್ ಇಂಟರ್ ಓದಲು ತುಮಕೂರಿಗೆ ಹೋದರು. 1942ರ ಆಗಸ್ಟ್ 9 ರಂದು ಕ್ವಿಟ್ ಇಂಡಿಯಾ ಚಳುವಳಿ (ಚಲೇಜಾವ್ ಚಳುವಳಿ) ಆರಂಭವಾಗುತ್ತಿದ್ದಂತೆ ಬ್ರಿಟೀಷರು ಗಾಂಧೀಜಿ ಮೊದಲಾದ ರಾಷ್ಟ್ರನಾಯಕರನ್ನು ಬಂಧಿಸಿದರು. ಇದರಿಂದ ಇಡೀ ಶಾಲಾ ಕಾಲೇಜುಗಳಿಗೆ ಬಹಿಷ್ಕಾರ ಹಾಕಲಾಯಿತು. ವಿದೇಶಿ ವಸ್ತುಗಳ ದಹನ ನಡೆಸಲಾಯಿತು. ಇದಕ್ಕೆ ತ.ರಾ.ಸು. ಮತ್ತು ಇವರ ಮಿತ್ರರೂ ಹೊರತಾಗಿರಲಿಲ್ಲ. ಒಮ್ಮೆ ಈ ತಂಡ ರೈಲು ಹಳಿಗಳನ್ನು ತಪ್ಪಿಸಿ ಸೇತುವೆಯನ್ನು ಉರುಳಿಸುವ ಏರ್ಪಾಡು ಮಾಡಿಕೊಂಡಿದ್ದಾಗ ಅದು ಪೋಲಿಸರ ಗಮನಕ್ಕೆ ಬಂದು ದಸ್ತಗಿರಿಯಾದರು. ಸೆರೆಮನೆಯಲ್ಲಿದ್ದರೂ ಇವರ ಚಳುವಳಿ ಮುಂದುವರೆದಿತ್ತು. 1942ರ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾದರು. ಜೈಲಿನಿಂದ ಬಿಡುಗಡೆಯೇನೋ ಆದರು. ಆದರೆ ಗಾಂಧೀಜಿಯವರು ಬಿಡುಗಡೆಯಾದ ಹೊರತು ಹಾಗೂ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಹೊರತು ಪುನಃ ಕಾಲೇಜು ಮೆಟ್ಟಿಲು ಹತ್ತುವುದಿಲ್ಲ ಎಂದು ನಿರ್ಧರಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ