ಭಾನುವಾರ, ಫೆಬ್ರವರಿ 1, 2009

ದುರ್ಗದ ಚಲನಚಿತ್ರಗಳು


ಚಿತ್ರದುರ್ಗ ಇತಿಹಾಸವನ್ನು ನೆನಪಿಸುವ ಹಾಗೂ ಸಾಮಾಜಿಕವಾಗಿದ್ದರೂ ದುರ್ಗದ ಸ್ಮಾರಕಗಳ ಮಧ್ಯೆ ಚಿತ್ರಿತವಾದ ಚಲನಚಿತ್ರಗಳು ಜನರ ಮೇಲೆ ಬೀರಿದ ಪ್ರಭಾವ ಅಪಾರ. ತ.ರಾ.ಸು. ಸೃಷ್ಟಿಸಿದ 'ಹಂಸಗೀತೆ' ಕನ್ನಡದಲ್ಲಿ ಚಿತ್ರವಾಗುವ ಮೊದಲೇ ಹಿಂದಿಯಲ್ಲಿ 'ಬಸಂತ್ ಬಹಾರ್' ಆಗಿ ದೇಶದಲ್ಲೆಲ್ಲಾ ಮನೆಮಾತಾಗಿದ್ದು, ಈಗ ಇತಿಹಾಸ. ದುರ್ಗಾಧಾರಿತ ಕನ್ನಡ ಕಾದಂಬರಿಯೊಂದು ಮೊದಲ ಬಾರಿಗೆ ಹಿಂದಿನ ಚಲನಚಿತ್ರವಾದುದು ದುರ್ಗದವರ ಮಟ್ಟಿಗೆ ಹೆಮ್ಮೆಯ ಸಂಗತಿ. ಈ ಚಿತ್ರ ಅಮೇರಿಕಾದ ಟಿ.ವಿ. ವಾಹಿನಿ (ಚಾನೆಲ್)ಯಲ್ಲಿ ಪ್ರದರ್ಶಿತಗೊಂಡಿದ್ದು ಸ್ಮರಣಾರ್ಹ ಘಟನೆ. ಕನ್ನಡದಲ್ಲಿ 'ಹಂಸಗೀತೆ' ಸಿನಿಮಾ ಆದುರು 1975ರಲ್ಲಿ. ಅದರ ನಿರ್ದೇಶಕರು ಜಿ.ವಿ.ಅಯ್ಯರ್. ಅದೇ ವರ್ಷ ಈ ಚಿತ್ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಪಾತ್ರವಾದರೆ, 1975-76ನೇ ಸಾಲಿನಲ್ಲಿ ದ್ವಿತಿಯ ಅತ್ಯುತ್ತಮ ಚಿತ್ರವೆಂದು ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. 1978ರಲ್ಲಿ ಮದರಾಸಿನಲ್ಲಿ ಏರ್ಪಟ್ಟ ಭಾರತಿಯ ಪನೋರಮಾದಲ್ಲೂ ಈ ಚಿತ್ರ ಪ್ರದರ್ಶಿಲ್ಪಟ್ಟಿತು. ಅಲ್ಲದೇ ಪ್ರಪಂಚದಾದ್ಯಂತ ಪ್ರದರ್ಶಿತವಾಗಿ ದುರ್ಗದ ಬೆಟ್ಟ, ಸ್ಮಾರಕಗಳನ್ನು ಪರಿಚಯಿಸಿಕೊಟ್ಟಿತು.

'ಹಂಸಗೀತೆ'ಗೂ ಮೊದಲು 1972ರಲ್ಲಿಯೇ ನಿರ್ದೇಶಕರ ನಿರ್ದೇಶಕ ಎಂದೇ ಖ್ಯಾತಿಯ 'ಎಸ್.ಆರ್.ಪುಟ್ಟಣ್ಣ ಕಣಗಾಲ್' ರವರ ದಿಗ್ದರ್ಶನದಲ್ಲಿ ನಿರ್ಮಿತವಾದ ಚಿತ್ರ 'ನಾಗರಹಾವು'. ಇದೇ ಚಿತ್ರದ ಮೂಲಕ ನಟ 'ವಿಷ್ಣುವರ್ಧನ್' ರವರು ರಾಮಾಚಾರಿಯಾಗಿಯೂ, ನಟ 'ಅಂಬರೀಶ್' ರವರು ಜಲೀಲ್ಆಗಿಯೂ ಕನ್ನಡದ ಬೆಳ್ಳಿತೆರೆಗೆ ಪರಿಚಯವಾದರು. ಚಿತ್ರರಂಗದಲ್ಲಿ ಮೈಲಿಗಲ್ಲು ಸ್ಥಾಪಿಸಿದ ಈ ಚಿತ್ರವೂ ದುರ್ಗದವರಿಗೆ ತಮ್ಮ ಊರಿನ ಬಗೆಗೆ ಎಷ್ಟು ಅಭಿಮಾನವಿತ್ತೊ ಅದರ ಹತ್ತರಷ್ಟು ಅಭಿಮಾನ ಬೆಳೆಯಲು ಈ ಚಿತ್ರ ಕಾರಣವಾದುದರಲ್ಲಿ ಆಶ್ಚರ್ಯವೇನಿಲ್ಲ. 'ನಾಗರಹಾವು' ಚಿತ್ರದ ಹಿಂದಿಯ ಅವತರಣಿಕೆಯಾದ 'ಜಹರೀಲಾ ಸಾಂಪ್' ದುರ್ಗದ ಪರಿಸರದಲ್ಲಿ ರೂಪು ತಳೆದು ಯಶಸ್ವಿಯಾಯಿತು. ದುರ್ಗದ ಸ್ಮಾರಕಗಳನ್ನು ವಿಶ್ವದ ಮಟ್ಟದಲ್ಲಿ ಪರಿಚಯಿಸಿತು. ದುರ್ಗದ ಇತಿಹಾಸದಲ್ಲಿ ಬೆರೆತ ವೀರರಮಣಿ ಓಬವ್ವೆಯ 'ಇಮೇಜ್'ಅನ್ನು ಇನ್ನಷ್ಟು ಎತ್ತರಿಸಲು 'ನಾಗರಹಾವು' ಚಿತ್ರವು ಕಾರಣವೆನಿಸಿದುದು ವಾಸ್ತವ.

'ನಾಗರಹಾವು', 'ಹಂಸಗೀತೆ'ಗಳ ನಂತರ ಹಲವಾರು ಸಾಮಾಜಿಕ ಚಿತ್ರಗಳು ದುರ್ಗದ ಸ್ಮಾರಕಗಳ ಹಿನ್ನೆಲೆಯಲ್ಲಿ ಚಿತ್ರಿತಗೊಂಡವಾದರೂ, ದುರ್ಗದ ಹಿನ್ನೆಲೆಯಲ್ಲಿ ಪೂರ್ಣಪ್ರಮಾಣದವಾದ ಚಿತ್ರ ಬರಲು ಚಿತ್ರದುರ್ಗದ ಜನತೆ ಮೂರುವರೆ ದಶಕಗಳ ಕಾಲ ಕಾಯಬೇಕಾಯಿತು. 2006ರಲ್ಲಿ ಬಿ.ಎಲ್.ವೇಣು ರವರಿಂದ ರಚಿತವಾದ ಐತಿಹಾಸಿಕ ಕಾದಂಬರಿ 'ಕಲ್ಲರಳಿ ಹೂವಾಗಿ', ಅದೇ ಹೆಸರಿನಲ್ಲಿ ಟಿ.ಎಸ್.ನಾಗಭರಣ ರವರ ನಿರ್ದೇಶನದಲ್ಲಿ ಚಿತ್ರಿತವಾಯಿತು. ಅದೇ ವರ್ಷ ನಾಡಿನಾದ್ಯಂತ ಬಿಡುಗಡೆಯಾಗಿ ಜಯಭೇರಿ ಬಾರಿಸಿದುದು ಇತಿಹಾಸ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ