ಗುರುವಾರ, ಫೆಬ್ರವರಿ 5, 2009

ಯಡಿಯೂರಪ್ಪರವರ 'ಕೋಟಿ' ಪುರಾಣ


ಚಿತ್ರದುರ್ಗದಲ್ಲಿ ನಿನ್ನೆ ನಡೆದ ಅಮೃತ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾತನಾಡಿದ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಜಿಲ್ಲೆಗಾಗಿ ಹಾಗೂ ಕನ್ನಡದ ಅಭಿವೃದ್ಧಿಗಾಗಿ ಈ ಕೆಳಕಂಡಂತೆ ಕೈಗೆತ್ತಿಕೊಳ್ಳಲಾಗುವ ಯೋಜನೆಗಳ ಕುರಿತು ವಿವರಣೆಯನ್ನು ನೀಡಿದರು

  • ರಾಜ್ಯದ ಎಲ್ಲಾ ವಿಶ್ವವಿದ್ಯಾಲಯದಲ್ಲಿ ಕನ್ನಡ ಸಂಶೋಧನೆ ಮತ್ತು ಅಭಿವೃದ್ದಿ - 2.00 ಕೋಟಿ.
  • ರಾಜ್ಯದ ಮತ್ತು ಹೊರದೇಶದ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಅಧ್ಯಯನ ಕೇಂದ್ರ ಸ್ಥಾಪನೆಗಾಗಿ - ತಲಾ 1.00 ಕೋಟಿಯಂತೆ ಒಟ್ಟು 5.00 ಕೋಟಿಗಳ ಅನುದಾನ
  • ದುರ್ಗದಲ್ಲಿ ಒನಕೆ ಓಬವ್ವ ಪ್ರಥಮ ದರ್ಜೆ ಕಾಲೇಜು ಸ್ಥಾಪನೆ
  • ಕುವೆಂಪು ವಿಶ್ವವಿದ್ಯಾಲಯಕ್ಕೆ 100 ಎಕರೆ ಜಮೀನು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ 5.00 ಕೋಟಿಗಳ ಧನಸಹಾಯ.
  • ವಾಲ್ಮೀಕಿ ಭವನ ನಿರ್ಮಾಣಕ್ಕೆ - 1.00 ಕೋಟಿ
  • ಕನ್ನಡ ತಂತ್ರಾಂಶದ ಅಭಿವೃದ್ಧಿಗಾಗಿ - 2.00 ಕೋಟಿ
  • ಕನ್ನಡದಲ್ಲಿ ವಿಕಿಪೀಡಿಯ ಮಾಹಿತಿಯ ವೆಬ್ ಸೈಟ್ ಗಾಗಿ - 1.00 ಕೋಟಿ

ಹೀಗೆ ಹತ್ತುಹಲವು ಕೋಟಿ ರೂಪಾಯಿಗಳ ಮಹತ್ತರ ಭರವಸೆಯನ್ನು ನಿನ್ನೆ ನಡೆದ ಅಮೃತ ಸಮ್ಮೇಳನದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಘಂಟಾಘೋಷವಾಗಿ ನೀಡಿದರು.

ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಕರ್ನಾಟಕ ರಾಜ್ಯದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ನಲ್ಲೂರು ಪ್ರಸಾದ್ ರವರು ಮಾತನಾಡುತ್ತಾ, ಯಡಿಯೂರಪ್ಪನವರನ್ನು "ಕನ್ನಡದ ಮುಖ್ಯಮಂತ್ರಿ" ಎಂದೂ, ಚಿತ್ರದುರ್ಗ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಪಶ್ಚಿಮಬಂಗಾಲ ಮೂಲದ ಶ್ರೀ ಅಮ್ಲಾನ್ ಆದಿತ್ಯ ಬಿಸ್ವಾಸ್, ರವರ ಕರ್ತವ್ಯ ನಿಷ್ಟೆ, ಕನ್ನಡದ ಪ್ರೀತಿಯನ್ನು ಮೆಚ್ಚಿ, "ಕನ್ನಡದ ಕಟ್ಟಾಳು" ಬಿರುದು ನೀಡಿದರು.

ಮೊದಲೇ ನಿರೀಕ್ಷಿಸಿದಂತೆ ಕಡಿಮೆ ಜನ ಬರುವ ನಿಟ್ಟಿನಲ್ಲಿ ಸಮ್ಮೇಳನದ ಊಟದ ವ್ಯವಸ್ಥೆಯಲ್ಲಿ ಸ್ವಲ್ಪ ಏರುಪೇರು ಕಂಡಿತು. 90 ಊಟದ ಕೌಂಟರ್ ಗಳನ್ನು ತೆರೆದಿದ್ದರೂ, ಬಫೆ ಸಿಸ್ಟಂ ಮಾಡಿದ್ದರೂ, ಕೂಪನ್ ಇರುವವರಿಗೆ ಮಾತ್ರ ಊಟದ ವ್ಯವಸ್ಥೆ ಮಾಡದೇ, ಎಲ್ಲರಿಗೂ ನೀಡುವಲ್ಲಿ ಹೋಗಿ, ಊಟದ ವ್ಯವಸ್ಥೆಯಲ್ಲಿ ಸಾಹಿತ್ಯಾಸಕ್ತರಿಗೆ ಸ್ವಲ್ಪ ಅಸಮಾಧಾನವಾಯಿತು. ಜಿಲ್ಲೆಯಲ್ಲಿ ಈಗಾಗಲೇ ಶಾಲಾ ಕಾಲೇಜುಗಳಿಗೆ ರಜಾ ಘೋಷಣೆಯಾಗಿದ್ದರಿಂದ ಶಾಲಾ ಮಕ್ಕಳು, ಶಿಕ್ಷಕರು ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಭಾಗವಹಿಸಿದ್ದರಿಂದ ಸುಮಾರು 60000ಕ್ಕೂ ಹೆಚ್ಚು ಮಂದಿ ಊಟಕ್ಕೆ ಪರದಾಡುವಂತಾಯಿತು.


ಭವ್ಯ ಮೆರವಣಿಗೆ:

ಮದಕರಿನಾಯಕ ಮತ್ತು ಮುರುಘಶ್ರೀಗಳ ಪ್ರತಿಕೃತಿ, ಭೂಗೋಲದ ಸ್ಥಬ್ದ ಚಿತ್ರ, ಬೆಂಗಳೂರು ಹಾಗೂ ವಿವಿಧ ಜಿಲ್ಲೆಗಳ ಕನ್ನಡ ಸಂಘಗಳು, ಹಲಗೆ ಕುಣಿತ, ಜಿಲ್ಲೆಯ ತಾಲ್ಲೂಕುಗಳ ಕಲಾತಂಡಗಳು, ಬೇಡರ ಪಡೆ, ನಂದಿಧ್ವಜ ಕುಣಿತ, ಕೋಲಾಟ, ವೀರಗಾಸೆ, ಸೋಮನ ಕುಣಿತ, ಮಹಿಳೆಯರ ಡೊಳ್ಳುಕುಣಿತ, ಹೀಗೆ ಹತ್ತು ಹಲವು ವಿಶಿಷ್ಟತೆಯಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಕಂಡುಬಂದಿತು. ಹೊಳಲ್ಕೆರೆ ರಸ್ತೆಯ ಕನಕ ವೃತ್ತದಿಂದ ಬಿ.ಡಿ. ರಸ್ತೆ ಮಾರ್ಗವಾಗಿ ಮಧ್ಯಾಹ್ನ 2-20ರ ವೇಳೆಗೆ ಒನಕೆ ಓಬವ್ವ ಕ್ರೀಡಾಂಗಣಕ್ಕೆ ಮೆರವಣಿಗೆ ಸೇರಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ