ಸೋಮವಾರ, ಫೆಬ್ರವರಿ 2, 2009

ಪೈಲ್ವಾನ್ ನಂಜಪ್ಪ


“ಗಂಡು ಮೆಟ್ಟಿನ ನಾಡು” ಎಂದೇ ಹೆಸರಾದ ಚಿತ್ರದುರ್ಗದ ಕುಸ್ತಿಕಲೆಯೂ ಸಾಹಸಮಯ ಕ್ರೀಡೆಯಾಗಿ ಇತಿಹಾಸ ಪುಟಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಹಿಂದೆ ವಿಜಯನಗರದ ಅರಸರು ಈ ಪ್ರಾಂತ್ಯವನ್ನು ಆಳುತ್ತಿದ್ದಾಗ ಹೆಬ್ಬಂಡೆಗಳ ನಡುವಿನ ಗುಹೆಯೊಂದು ‘ಗೋಪೆನಾಯಕಯ್ಯ’ ಎಂಬುವವನ ಗರಡಿಯಾಗಿತ್ತು. ಮುಂದೆ ಅದೇ ಗರಡಿಯೂ ಪಾಳೆಯಗಾರರ ಕಾಲದಲ್ಲಿಯೂ ಮುಂದುವರೆಯಿತು. ಹಾಗೆಯೇ ಇದರೊಂದಿಗೆ ಕೆಲವು ಹೊಸ ಗರಿಗಳು ಅಸ್ತಿತ್ವಕ್ಕೆ ಬಂದವು. ಮಲ್ಲ (ಕುಸ್ತಿ) ಕಲೆಯನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡು ಬಂದಿದ್ದ “ಜಟ್ಟಿ” ಎಂಬ ಜನಾಂಗವು ಇಲ್ಲಿಯ ಪಾಳೆಯಗಾರರಿಗೆ ತಮ್ಮ ಕಲೆಯನ್ನು ಕಲಿಸುತ್ತಿದ್ದರು ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ. ಈ ಮಲ್ಲ ಕಲೆ ಪರಂಪರೆಯ ಚಿತ್ರದುರ್ಗ ಈಗಿನ ಕೆಲವು ಗರಡಿಮನೆಗಳಲ್ಲಿ ಮುಂದುವರೆದಿರುತ್ತದೆ.


ಇಲ್ಲಿಯ ಪ್ರಸಿದ್ಧ ಗರಡಿಗಳೆಂದರೆ ದೊಡ್ಡಗರಡಿ, ಸಣ್ಣಗರಡಿ, ಬುರುಜನಹಟ್ಟಿಯ ಗರಡಿ ಮತ್ತು ಹಗಲು ನೀವಟಿಗೆ ಗರಡಿ, ಚಿತ್ರದುರ್ಗದ ಬೃಹನ್ಮಠವೂ ಸಹ ಕುಸ್ತಿಕಲೆಗೆ ವಿಶೇಷ ಪ್ರೋತ್ಸಾಹ ನೀಡಿದ್ದುಂಟು. ಈಗ್ಗೆ ಕೆಲವು ದಶಕಗಳ ಹಿಂದೆ ಬೃಹನ್ಮಠ ನಡೆಸುತ್ತಿದ್ದ “ಜಯದೇವ ಜಂಗೀ ಕುಸ್ತಿ”ಗಳೇ ಸಾಕ್ಷಿ.


ಕುಸ್ತಿ ಎಂದೊಡನೇ ಚಿತ್ರದುರ್ಗದ ಜನಮನಗಳಲ್ಲಿ ಥಟ್ಟನೇ ಮೂಡುವ ಚಿತ್ರ “ಪೈಲ್ವಾನ್ ನಂಜಪ್ಪ”ನವರದು. ಇವರು ಇಹಲೋಕವನ್ನು ತ್ಯಜಿಸಿ ಸುಮಾರು ನಾಲ್ಕು ದಶಕಗಳೇ ಕಳೆದರೂ, ಈಗಲೂ ಸಹ ಜನರು ಹಾಗೂ ಅವರ ಸಮಕಾಲೀನರು ಅವರ ಸಾಹಸಮಯ ಕ್ರೀಡಾ ಪ್ರತಿಭೆಯನ್ನು ಕೊಂಡಾಡತ್ತಾರೆ. ಈ ಶತಮಾನದಲ್ಲಿ ಚಿತ್ರದುರ್ಗವು ಕುಸ್ತಿಕ್ಷೇತ್ರಕ್ಕೆ ನೀಡಿದ ದೊಡ್ಡ ಕೊಡುಗೆ “ಪೈಲ್ವಾನ್ ನಂಜಪ್ಪ” ಎಂದರೇ ಅತಿಶಯವಿಲ್ಲ. ನಂಜಪ್ಪನವರು ಮೂಲತಃ ಉತ್ತರದಿಂದ ಬಂದ ‘ಲಾಡರು’ ಎಂಬ ಜನಾಂಗದವರಾಗಿದ್ದರು. ವಿದ್ಯಾಭ್ಯಾಸದ ಕಡೆ ಅಂಥ ಒಲವಿಲ್ಲದ ನಂಜಪ್ಪನವರು ಕುಸ್ತಿ ಕಲೆಯೆಡೆಗೆ ಆಕರ್ಷಿತರಾದರು. ನಂಜಪ್ಪನವರು ನಗರದ ದೊಡ್ಡಗರಡಿಯ ಉಸ್ತಾದರಾಗಿದ್ದು, ಬುಡ್ಡಣ್ಣನವರ ಬಳಿ ಕುಸ್ತಿ ಕಲೆಯ ಸೂಕ್ಷ್ಮ ಪಟ್ಟುಗಳನ್ನು ಕಲಿತುಕೊಂಡರು. ತದನಂತರ ಮೂಲತಃ ಲಾಹೋರ್ ನಿಂದ ಬಂದ ಉಸ್ತಾದ್ ಪರಿಪೈಗರ್ ನಂಜಪ್ಪನವರನ್ನು ಅಪರೂಪದ ಕುಸ್ತಿಪಟುವಾಗಿ ತಿದ್ದಿತೀಡಿದರು. ಈ ಗುರುಶಿಷ್ಯರ ಸಂಭಂಧದ ಅನ್ಯೋನ್ಯತೆಯು ಹಿಂದೂ-ಮುಸ್ಲಿಂ ಭಾವೈಕ್ಯದ ಒಂದು ಶ್ರೇಷ್ಠ ಉದಾಹರಣೆಯಾಗಿದೆ.


ಪೈಲ್ವಾನ್ ನಂಜಪ್ಪ ಕುಸ್ತಿಪಟು ಅಷ್ಟೇ ಆಗಿರದೇ ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದರು. 1947ರಲ್ಲಿ ನಡೆದ “ಮೈಸೂರು ಚಲೋ” ಚಳುವಳಿಯಲ್ಲಿ ತಾಲ್ಲೂಕು ಕಚೇರಿಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿದ ವೀರ ನಂಜಪ್ಪ ಅಂದು ಪೋಲಿಸರ ಗುಂಡೇಟಿನಿಂದ ಕ್ಷಣಾರ್ಧದಲ್ಲಿ ತಪ್ಪಿಸಿಕೊಂಡಿದ್ದರು. ಈ ಒಂದು ನಂಜಪ್ಪನವರ ದೇಶಭಕ್ತಿಗೆ ಒಂದು ನಿದರ್ಶನವಾಗಿದೆ. ಅಷ್ಟೇ ಅಲ್ಲದೇ ಆಗಿನ ಹಲವಾರು ನಾಟಕ ಕಂಪನಿಗಳಲ್ಲಿ ಹವ್ಯಾಸಿ ತಬಲವಾದಕರಾಗಿ ಹಿರಣಯ್ಯರವರಂತಹ ದಿಗ್ಗಜರ ಮೆಚ್ಚುಗೆಗೆ ಪಾತ್ರರಾಗಿದ್ದರು. ಹಲವಾರು ನಾಟಕ ಕಂಪನಿಗಳ ಸಂಪರ್ಕವಿದ್ದ ನಂಜಪ್ಪನವರಿಗೆ ಸಹಜವಾಗಿ ಕನ್ನಡದ ವರನಟ ‘ಡಾರಾಜ್’ ರವರ ಸ್ನೇಹವುಂಟಾಗಿ, ರಾಜ್ ರವರ “ರಣಧೀರ ಕಂಠೀರವ” ಚಿತ್ರದಲ್ಲಿ ಅತಿಥಿ ನಟನಾಗಿ, ಪೈಲ್ವಾನ್ ಪಾತ್ರವನ್ನೇ ಅಭಿನಯಿಸಿದ್ದರು. ಇವರ ಪೈಲ್ವಾನ್ ಶಿಷ್ಯರಲ್ಲಿ ಹೆಚ್ಚು ಪ್ರಸಿದ್ದರಾದವರು ಗೌಳಿಗರ ಲಿಂಗಣ್ಣ(ಮೂಗ).


ಬಹುಮುಖ ಪ್ರತಿಭಾವಂತರು, ಕುಸ್ತಿಪಟು, ರಾಷ್ಟ್ರಪ್ರೇಮಿಯೂ ಆಗಿದ್ದ ಪೈಲ್ವಾನ್ ನಂಜಪ್ಪನವರು 1965ರಲ್ಲಿ ವಿಧಿವಶರಾದರು. ಕುಸ್ತಿಕಲೆಗೆ ಇವರು ಮಾಡಿದ ಸಾಧನೆಯ ಸ್ಮರಣಾರ್ಥವಾಗಿ ಕಾಮನ ಬಾಗಿಲು ಎದುರಿಗೆ ಮಹಾರಾಣಿ ಕಾಲೇಜಿನ ಬದಿಯಲ್ಲಿ ಅವರ ಒಂದು ಸ್ಮಾರಕವನ್ನು ನಿರ್ಮಿಸಲಾಗಿದೆ. ದೊಡ್ಡಗರಡಿಯವರು ನೂಲಹುಣ್ಣಿಮೆಯನ್ನು ಆಚರಿಸುವಾಗ ಇವರ ದೊಡ್ಡ ಭಾವಚಿತ್ರವು ಮೆರವಣಿಗೆಯಲ್ಲಿ ಸಾಗುತ್ತದೆ.

1 ಕಾಮೆಂಟ್‌:

  1. nanage kusti endare tumba ishta.........mattu intha aitihasika kusti patu gala bagge tilidu kolluvudu endare attyuttama.......ekendare naanu kooda obba kusti patu vaagalu tayari nadesuttiruva mari pailwan. ..........Manjunath...Anekal

    ಪ್ರತ್ಯುತ್ತರಅಳಿಸಿ